– ಸ್ವಾಮೀಜಿಗಳು ನನ್ನ ಸೇವೆ ಮಾಡಿ ಅಂದಿಲ್ಲ, ನಾಡಿನ ಸೇವೆ ಮಾಡಿ ಅಂದಿದ್ದೇನೆ
– ಈ ನಾಡು ಕತ್ತಲಿಂದ ಬೆಳಕಿಗೆ ಬರಲಿ ಎಂದು ಆಶಿಸಿದ ಸಿಎಂ
ಮೈಸೂರು: ಮೈಸೂರಿನಲ್ಲಿ ಇಂದಿನಿಂದ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಇನ್ನೂ 11 ದಿನ ಇಡೀ ದೇಶ ಹಾಗೂ ವಿದೇಶದ ಜನ ದಸರಾ ಮೂಲಕ ಮೈಸೂರನ್ನ ನೋಡುತ್ತಾರೆ. ಆ ದೇವಿ ಕೃಪೆ ಜನರ ಮೇಲೆ ಇರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2026ರ ಮೈಸೂರು ದಸರಾ ಮಹೋತ್ಸವಕ್ಕೆ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶುಭ ಧನುರ್ ಲಗ್ನದಲ್ಲಿ ಚಾಲನೆ ನೀಡಿದರು. ಈ ಉದ್ಘಾಟನಾ ಸಂದರ್ಭದಲ್ಲಿ ಸಚಿವರು, ಶಾಸಕರು, ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ದಸರಾ ಮಹೋತ್ಸವ ಕೇವಲ ಹಬ್ಬವಲ್ಲ, ಅದು ಕನ್ನಡಿಗರ ಅಸ್ಮಿತೆ, ಪರಂಪರೆ ಮತ್ತು ಸಾಂಸ್ಕೃತಿಕ ಗರಿಮೆಯ ಭವ್ಯ ಪ್ರತೀಕ. ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಐತಿಹಾಸಿಕ ಪರಂಪರೆಯ ದಿವ್ಯ ಸಂಗಮವಾದ ನಾಡಹಬ್ಬ ಮೈಸೂರು ದಸರಾದ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಬಾಳು ಹಸನಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದೆ.
#ನಾಡಹಬ್ಬ #Mysuru_Dasara2026
— DK Shivakumar (@DKShivakumar) October 11, 2026
ಮೈಸೂರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ನನಗೂ ಸ್ವಾಮೀಜಿಗಳ ನಡುವೆ ಇರುವ ಸಂಬಂಧ ಪ್ರಶ್ನಾತೀತ, ನಾನು ಯಾವತ್ತೂ ಸ್ವಾಮೀಜಿಗಳು ನನ್ನ ಸೇವೆ ಮಾಡಿ ಎಂದು ಹೇಳಿಲ್ಲ. ಸ್ವಾಮೀಜಿಗಳು ಈ ನಾಡಿನ ಸೇವೆ ಮಾಡಿ ಎಂದೇ ಹೇಳಿದ್ದೇನೆ. ಆದ್ರೆ ಕೆಲವರು ನನ್ನ ಹೇಳಿಕೆಯನ್ನ ತಿರುಚಿದ್ರು. ಈ ಮಾತಿಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ದಸರಾ ವೇದಿಕೆಯಲ್ಲಿ ಸಲಹೆ ನೀಡಿದರು.
https://t.co/Ir8x7F1aLJ
— DK Shivakumar (@DKShivakumar) October 11, 2026
ನಾನು ಜನರ ಪ್ರತಿನಿಧಿ. ಇಲ್ಲಿನ ಎಲ್ಲಾ ಸ್ವಾಮೀಜಿಗಳು ಭಕ್ತರ, ತಮ್ಮ ಸಮುದಾಯದ ಪ್ರತಿನಿಧಿಗಳು. ಇದು ನನ್ನ ಬದುಕಿನ ಸ್ಮರಣೆಯ ದಿನ, ಭಾಗ್ಯದ ದಿನ, ನನ್ನ ಬದುಕಿನ ಹೊಸ ಅಧ್ಯಾಯ. ಮಠದ ಮಹತ್ವ ಗೋಪುರದಲ್ಲಿ ಇರಲ್ಲ. ಸಮಾಜಕ್ಕೆ ಮಾಡುವ ಸೇವೆಯಲ್ಲಿ ಮಠದ ಮಹತ್ವ ಅಡಗಿದೆ. ಹಾಗೆಯೇ ಚಾಮುಂಡಿಯ ಶಕ್ತಿ ಜ್ಯೋತಿ, ಶ್ರೀಗಳ ಅರಿವಿನ ಜ್ಯೋತಿಯನ್ನು ನಾವು ಹಚ್ಚಿದ್ದೇವೆ. ಸ್ವಾಮೀಜಿಗಳು ನಾಡಿನ ಹಬ್ಬಕ್ಕೆ ಹೊಸ ಮೆರಗು ತಂದಿದ್ದಾರೆ. ಕೊಪ್ಪಳ ಶ್ರೀಗಳ ಸೇವೆ ಇಡೀ ದೇಶಕ್ಕೆ ಮಾದರಿ. ಜಲದೀಕ್ಷೆ ನೀಡುವ ಭಗೀರಥ ಕೊಪ್ಪಳ ಶ್ರೀಗಳು. ಇಡೀ ನಾಡಿಗೆ ಜಲ ದೀಕ್ಷೆ ಬೇಕಿದೆ ಎಂದು ಹೇಳಿದರು.
ನಾವು ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದೇವೆ ಎಂದು ಸಾರುವುದೇ ದಸರಾ. ಕಂಬಳಕ್ಕೆ ವಿರೋಧ ಇದ್ದರೂ ನಾವು ಕಲೆ, ಸಂಸ್ಕೃತಿಯನ್ನ ಪ್ರೋತ್ಸಾಹಿಸಲು ದಸರಾಗೆ ತಂದಿದ್ದೇವೆ. ದಸರಾ ಅನ್ನೋದು ಬಣ್ಣಗಳ ಹಬ್ಬ, ಮೈಸೂರಿನ ಸಂಸ್ಕೃತಿ ಒಬ್ಬರಿಂದ ಆದದ್ದಲ್ಲ, ಎಲ್ಲಾರಿಂದ ಆದದ್ದು. ಮೈಸೂರಿನ ಸಂಪತ್ತು ಅರಮನೆ ಮಾತ್ರವಲ್ಲ. ಅರಮನೆ ಮೇಲಿನ ನಂಬಿಕೆಯೆ ಮೈಸೂರಿನ ಸಂಪತ್ತು. ಯುದ್ಧ ಹೋರಾಟದಿಂದ ಕೆಲ ನಗರಗಳು ಬೆಳೆದಿರೋದನ್ನ ನಾವು ನೋಡಿದ್ದೇವೆ. ಆದ್ರೆ ಮೈಸೂರು ಸಂಸ್ಕೃತಿಯಿಂದ ಬೆಳೆದಿರುವ ನಗರ. ಮೈಸೂರು ಕೂಡ ಹೊಸ ಬ್ರ್ಯಾಂಡ್‌ಗೆ ಕಾಲಿಡುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ವಿಶಿಷ್ಟವಾಗಿರುತ್ತದೆ. ಭೂ ಸೇನೆ, ವಾಯು ಸೇನೆ, ನೌಕಾ ಸೇನೆಯ ಸ್ತಬ್ಧ ಚಿತ್ರಗಳೂ ಮೆರವಣಿಗೆಯಲ್ಲಿ ಕಂಗೊಳಿಸಲಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ದೇಶದ ಎಲ್ಲಾ ರಾಜ್ಯಗಳು ನಮ್ಮ ಗ್ಯಾರಂಟಿ ಅಳವಡಿಸಿಕೊಂಡಿವೆ
ಒಂದೆರಡು ರಾಜ್ಯ ಬಿಟ್ಟು ದೇಶದ ಎಲ್ಲಾ ರಾಜ್ಯಗಳು ನಮ್ಮ ಗ್ಯಾರಂಟಿಯನ್ನ ಅಳವಡಿಸಿಕೊಂಡಿವೆ. ವೀರ ಗಂಗಾಧರ ಅಜ್ಜಯ್ಯನನ್ನ ಸ್ಮರಿಸಿದ ಸಿಎಂ. ಸ್ವಾಮೀಜಿಗಳ ಪ್ರಾರ್ಥನೆ ಈ ರಾಜ್ಯಕ್ಕೆ ಶುಭ ಮಾಡಲಿ. ಅದಕ್ಕೆ ಎಲ್ಲಾ ಸ್ವಾಮೀಜಿಗಳನ್ನು ಆಹ್ವಾನಿಸಿದ್ದೇನೆ. ಇನ್ನೂ 11 ದಿನ ಇಡೀ ದೇಶ ಹಾಗೂ ವಿದೇಶದ ಜನರು ದಸರಾ ಮೂಲಕ ಮೈಸೂರು ನೋಡುತ್ತಾರೆ ಎಂದರಲ್ಲದೇ, ದೇವಿ ಕೃಪೆ ಜನರ ಮೇಲೆ ಇರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ ಎಂದು ಸ್ಮರಿಸಿದರು.

