– ಭಾರತೀಯ ತನಿಖಾ ಸಂಸ್ಥೆಗಳಿಗೆ ಕಾನೂನು ಅಧಿಕಾರ ಇದೆಯೇ?
– ಬ್ಲ್ಯಾಕ್‌ಬಾಕ್ಸ್ ಪಡೆಯಲು ಸಿದ್ಧತೆ – ಉಗ್ರ ಸಂಘಟನೆ ನಂಟಿನ ಬಗ್ಗೆಯೂ ತನಿಖೆ
ನವದೆಹಲಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
1073 ಸಂಖ್ಯೆಯ ಫ್ಲೈದುಬೈ ಫ್ಲೈಟ್ (Flydubai Flofght) ಸೆ.30 ರಂದು ಬೆಳಗ್ಗೆ 7.05ಕ್ಕೆ (ಗಲ್ಫ್ ಸಮಯದ ಪ್ರಕಾರ) ದುಬೈನಿಂದ ಹೊರಟಿತ್ತು. ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ವಿಮಾನದ ಕ್ಯಾಪ್ಟನ್ ಆಗಿದ್ದರೆ, ಒಮಾನ್‌ನ ಪ್ರಜೆ ಸಹ ಪೈಲಟ್ ಆಗಿದ್ದರು. ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಕೂಡ ಪ್ರಯಾಣಿಸುತ್ತಿದ್ದರು. ಜೋರ್ಡಾನ್ – ಸೌದಿ ಅರೇಬಿಯಾ ಗಡಿ ಸಮೀಪದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ವೇಗವಾಗಿ ಕೆಳಕ್ಕೆ ಇಳಿದಿದ್ದು, ಬಳಿಕ ಸೌದಿ ಅರೇಬಿಯಾ ವಾಯುಪ್ರದೇಶದತ್ತ ತಿರುಗಿತ್ತು.

ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ ಆರೋಪ
ವಿಮಾನದಲ್ಲಿದ್ದ ಪ್ರಯಾಣಿಕರು ನೀಡಿದ ಮಾಹಿತಿಯ ಪ್ರಕಾರ, ಒಮಾನ್‌ನ ಫಸ್ಟ್ ಆಫೀಸರ್ (ಸಹ ಪೈಲಟ್), ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಮೊದಲು ತಲೆಗೆ ಬಲವಾಗಿ ಹೊಡೆದಿದ್ದಲ್ಲದೇ, ಚೂರಿಯಿಂದ ಇರಿದಿದ್ದ. ವಿಮಾನವನ್ನು ಅಪಹರಿಸುವ ಅಥವಾ ಪತನಗೊಳಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದ ಎಂದು ಹೇಳಿದದ್ದರು. ದಾಳಿಯ ಬಳಿಕ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ಒಮಾನ್ ಪೈಲಟ್‌ನನ್ನ ನಿಯಂತ್ರಿಸಿದರು, ಬಳಿಕ ಆತನನ್ನ ಬಂಧಿಸಲಾಯಿತು. ದಾಳಿಯಲ್ಲಿ ಮಚ್ಚಾರ್ ತಲೆ ಹಾಗೂ ಕೈಗಳಿಗೆ ಭಾರೀ ಗಾಯಗಳಾಗಿತ್ತು ಎಂದು ಕೇಂದ್ರ ಸರ್ಕಾರದ ತಿಳಿಸಿದೆ.
ಘಟನೆಯ ಬಳಿಕ ವಿಮಾನದಲ್ಲಿದ್ದ ಇತರ ಫ್ಲೈದುಬೈ ಪೈಲಟ್‌ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು, ಸೌದಿ ಅರೇಬಿಯಾದ ವಾಯವ್ಯ ಭಾಗದಲ್ಲಿರುವ ತಬೂಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.45ರ ಸುಮಾರಗೆ ವಿಮಾನವನ್ನ ಲ್ಯಾಂಡ್ ಮಾಡಿದ್ದಾರೆ. ನಂತರ ಒಮಾನಿ ಪೈಲಟ್‌ನನ್ನ ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ದೊಡ್ಡ ಸಂಚಿನ ಸಾಧ್ಯತೆ ಕುರಿತು ಎನ್‌ಐಎ ತನಿಖೆ
ಈ ಘಟನೆ ಭಾರತೀಯ ಪ್ರಜೆಯೊಬ್ಬರ ವಿರುದ್ಧ ನಡೆದ ದಾಳಿ ಹಾಗೂ ವಿಮಾನವನ್ನು ಅಪಹರಿಸಲು ಅಥವಾ ಪತನಗೊಳಿಸಲು ನಡೆದಿರುವ ಸಾಧ್ಯತೆ ಒಳಗೊಂಡಿದೆ. ಇದು 2016ರ ಆ್ಯಂಟಿ-ಹೈಜಾಕಿಂಗ್ ಕಾಯ್ದೆಯ ಸೆಕ್ಷನ್ 3 ಮತ್ತು 1967ರ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಸೆಕ್ಷನ್ 16 ಹಾಗೂ ಸೆಕ್ಷನ್ 15(1)(a) ಅಡಿ ಬರುವ ಅಪರಾಧ ಪ್ರಕರಣವಾಗಿದೆ. 2008ರ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ ಅಡಿಯಲ್ಲಿ ಈ ಘಟನೆ ನಿಗದಿತ ಅಪರಾಧ ಪ್ರಕರಣವಾಗಿದ್ದು, ರಾಷ್ಟ್ರೀಯ & ಅಂತಾರಾಷ್ಟ್ರೀಯ ಮಟ್ಟದ ಗಂಭೀರ ಪರಿಣಾಮಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಘಟನೆ ಹಿಂದೆ ಯಾವುದೇ ದೊಡ್ಡ ಸಂಚು ಇದೆಯೇ ಎಂಬುದನ್ನ ಪತ್ತೆಹಚ್ಚಲು ಸಮಗ್ರ ತನಿಖೆಯ ಅಗತ್ಯವಿದೆ. ಆದ್ದರಿಂದ NIA ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಎನ್‌ಐಎಗೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008ರ ಸೆಕ್ಷನ್ 6ರ ಉಪವಿಭಾಗ 5 ಮತ್ತು 8 ಹಾಗೂ ಸೆಕ್ಷನ್ 8 ಅಡಿಯಲ್ಲಿ ತನಿಖೆ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಘಟನೆಯ ಸಂಪೂರ್ಣ ಹಿನ್ನೆಲೆ, ವಿಮಾನದೊಳಗೆ ನಡೆದ ಬೆಳವಣಿಗೆಗಳು ಹಾಗೂ ಈ ದಾಳಿ ಯಾವುದೇ ದೊಡ್ಡ ಸಂಚಿನ ಭಾಗವಾಗಿತ್ತೇ ಎಂಬುದನ್ನು ಎನ್‌ಐಎ ತನಿಖೆ ನಡೆಸಲಿದೆ.
ಭಾರತೀಯ ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಕಾನೂನು ಅಧಿಕಾರ
ಮೂಲಗಳ ಪ್ರಕಾರ, ದಾಳಿಗೊಳಗಾದವರು ಭಾರತೀಯ ಪೈಲಟ್ ಆಗಿರುವ ಹಿನ್ನೆಲೆ ಘಟನೆಯ ತನಿಖೆ ನಡೆಸಲು ಭಾರತೀಯ ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಕಾನೂನು ಅವಕಾಶ ದೊರೆತಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಪ್ರಕರಣದಲ್ಲಿ ಹಮ್ಮಾಮ್ ಅಲ್-ಹಮ್ಮಾಮಿ ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದೆ. ವಿಮಾನ ಅಪಹರಣದ ಪ್ರಯತ್ನದ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಸಹ ಪೈಲಟ್ ನೇರವಾಗಿ ದಾಳಿ ನಡೆಸಿರುವ ಹಿನ್ನೆಲೆ ಭಾರತೀಯ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸುವುದರ ಜೊತೆಗೆ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಂದ ಪರಸ್ಪರ ಕಾನೂನು ಸಹಾಯ ಕೋರಲು ಅವಕಾಶ ಇದೆ ಎನ್ನುತ್ತಿವೆ ವರದಿಗಳು.
ಉಗ್ರ ಸಂಘಟನೆಯ ನಂಟಿನ ಬಗ್ಗೆಯೂ ತನಿಖೆ
ತನಿಖಾಧಿಕಾರಿಗಳು ಆರೋಪಿಯ ಹಿನ್ನೆಲೆ, ಯಾವುದೇ ಉಗ್ರ ಸಂಘಟನೆ ಜಾಲದೊಂದಿಗೆ ಸಂಪರ್ಕ, ಡಿಜಿಟಲ್ ಚಟುವಟಿಕೆಗಳು ಹಾಗೂ ಆತನ ಸೈದ್ಧಾಂತಿಕ ಪ್ರೇರಣೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ಪೂರ್ವಯೋಜಿತವಾಗಿತ್ತೇ? ಅಥವಾ ವಿದೇಶದಲ್ಲಿರುವ ಯಾವುದೇ ಉಗ್ರ ಸಂಘಟನೆಯ ಬೆಂಬಲ ಇದರ ಹಿಂದೆ ಇತ್ತೇ ಎಂಬುದನ್ನ ಪತ್ತೆಹಚ್ಚುವುದು ತನಿಖೆಯ ಪ್ರಮುಖ ಅಂಶವಾಗಿದೆ.
ಎನ್‌ಐಎ ಮೂಲಗಳ ಪ್ರಕಾರ, ತನಿಖಾ ಸಂಸ್ಥೆಯು ವಿಮಾನದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಹಾಗೂ ಫ್ಲೈಟ್ ಡೇಟಾ ರೆಕಾರ್ಡರ್ (FDR)ಗೆ (ಬ್ಲ್ಯಾಕ್ ಬಾಕ್ಸ್) ಪರಿಶೀಲಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಆರೋಪಿಯ ಎಲೆಕ್ಟ್ರಾನಿಕ್ ಸಾಧನಗಳನ್ನ ಪರಿಶೀಲನೆಗಾಗಿ ಪಡೆದುಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ರಾಜತಾಂತ್ರಿಕ ಮಾರ್ಗಗಳು ಹಾಗೂ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರದ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

