– ಟೆಕ್ ದೈತ್ಯ ಕಂಪನಿಗಳ ಲಕ್ಷಾಂತರ ಉದ್ಯೋಗಿಗಳಿಗೆ ಆಘಾತ
ವಾಷಿಂಗ್ಟನ್: ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ಪಡೆಯುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ, ಅಮೆರಿಕದ ಕಾರ್ಮಿಕ ಇಲಾಖೆ (U.S. Department of Labor) ಭಾರತೀಯ ಟೆಕ್ ದೈತ್ಯ ಕಂಪನಿಗಳಿಗೆ ಶಾಕ್ ಕೊಟ್ಟಿದೆ. ಇನ್ಫೋಸಿಸ್ (Infosys), ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳನ್ನು ಗ್ರೀನ್ ಕಾರ್ಡ್ ಯೋಜನೆಯಿಂದ ಅಮಾನತುಗೊಳಿಸಿದೆ.
ಹೌದು. ಐಟಿ ಹೊರಗುತ್ತಿಗೆ ಕಂಪನಿಗಳನ್ನ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮದಿಂದ (PERM) ಅಮಾನತುಗೊಳಿಸಿದೆ. ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್, ಕ್ಯಾಪ್‌ಜೆಮಿನಿ ಹಾಗೂ ಮೈಕ್ರೋಸಾಫ್ಟ್ (Microsoft), ಅಡೋಬ್ (Adobe) ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಅಮೆರಿಕದ ಕಾರ್ಮಿಕ ಕಾರ್ಯದರ್ಶಿ ಕೀತ್ ಸೊಂಡರ್ಲಿಂಗ್ ತಿಳಿಸಿದ್ದಾರೆ.

ಏನಿದು PERM ಕಾರ್ಯಕ್ರಮ?
PERM ಎನ್ನುವುದು ಅಮೆರಿಕದ ಕಾರ್ಮಿಕ ಇಲಾಖೆಯ ಅಧಿಕೃತ ಅನುಮೋದನೆ ಪ್ರಕ್ರಿಯೆ. ಅಮೆರಿಕದ (America) ಉದ್ಯೋಗದಾತರು ವಿದೇಶಿ ಉದ್ಯೋಗಿಯನ್ನ ಶಾಶ್ವತ ಉದ್ಯೋಗಕ್ಕೆ ನೇಮಿಸಿ, ಅವರ ಪರವಾಗಿ ಗ್ರೀನ್ ಕಾರ್ಡ್ ಪ್ರಕ್ರಿಯೆ ಮುಂದುವರಿಸಲು ಈ ಪ್ರಮಾಣೀಕರಣ ಅಗತ್ಯವಾಗುತ್ತದೆ.
ಮೈಕ್ರೋ ಸಾಫ್ಟ್ ವಿರುದ್ಧ ಗಂಭೀರ ಆರೋಪ
ಮೈಕ್ರೋ ಸಾಫ್ಟ್ ಕಂಪನಿಯು ಗ್ರೀನ್ ಕಾರ್ಡ್ ವ್ಯವಸ್ಥೆಯನ್ನ ಅತ್ಯಂತ ಹೆಚ್ಚು ದುರುಪಯೋಗಪಡಿಸಿಕೊಂಡಿದೆ ಎಂದು ಕಾರ್ಮಿಕ ಕಾರ್ಯದರ್ಶಿ ಕೀತ್ ಸೊಂಡರ್ಲಿಂಗ್ ಆರೋಪಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಟ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೈಕ್ರೋ ಸಾಫ್ಟ್ 2025ರಲ್ಲಿ ಸುಮಾರು 6,000 ಅಮೆರಿಕನ್ನರನ್ನ ಉದ್ಯೋಗದಿಂದ ವಜಾಗೊಳಿಸಿತ್ತು. ಅದೇ ವೇಳೆ, ಅರ್ಹ ಅಮೆರಿಕನ್ ಉದ್ಯೋಗಿಗಳು ಲಭ್ಯವಿಲ್ಲ ಎಂದು ಕಂಪನಿ ಪ್ರಮಾಣೀಕರಿಸಿ 6,000ಕ್ಕೂ ಹೆಚ್ಚು H-1B ವೀಸಾಗಳಿಗೆ ಅನುಮೋದನೆ ಪಡೆದಿತ್ತು. ಅಲ್ಲದೆ, ಮೈಕ್ರೋಸಾಫ್ಟ್ 3,682 PERM ಅರ್ಜಿಗಳನ್ನ ಸಲ್ಲಿಸಿದ್ದು, ಅವುಗಳಲ್ಲಿ ಸುಮಾರು 1,000 ಅರ್ಜಿಗಳು ಅಮೆರಿಕನ್ ಉದ್ಯೋಗಿಗಳನ್ನ ವಜಾಗೊಳಿಸಿದ್ದ ಅದೇ ಹುದ್ದೆಗಳಿಗೆ ಸಂಬಂಧಿಸಿದ್ದವು ಎಂದು ವ್ಯಾನ್ಸ್ ಆರೋಪಿಸಿದ್ದಾರೆ.
H-1B ವೀಸಾ ವ್ಯವಸ್ಥೆಯಲ್ಲೂ ವಂಚನೆ ಆರೋಪ
H-1B ವೀಸಾ ಕಾರ್ಯಕ್ರಮದ ಉದ್ದೇಶ ಬೇರೆಯದ್ದೇ ಆಗಿದೆ. ಅಮೆರಿಕದಲ್ಲಿ ಲಭ್ಯವಿಲ್ಲದ, ವಿಶೇಷ ಕೌಶಲ್ಯ ಹೊಂದಿರುವ ಉದ್ಯೋಗಗಳಿಗೆ ವಿಶ್ವದ ಅತ್ಯುತ್ತಮ ಪ್ರತಿಭೆಗಳನ್ನು ಕರೆತರುವ ಉದ್ದೇಶ ಇದರದ್ದಾಗಿದೆ. ಆದರೆ, ಈ ಕಾರ್ಯಕ್ರಮದಲ್ಲಿ ಭಾರೀ ಪ್ರಮಾಣದ ವಂಚನೆ ನಡೆಯುತ್ತಿದೆ ಎಂದು ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. ಆದ್ರೆ ಈ ಬೆಳವಣಿಗೆ ಕುರಿತು ಮೈಕ್ರೋ ಸಾಫ್ಟ್ ಸಂಸ್ಥೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಶ್ವವಿದ್ಯಾಲಯಗಳ ಮೇಲೂ ತನಿಖೆ
ಕಾರ್ಮಿಕ ಇಲಾಖೆಯ ಕ್ರಮ ಐಟಿ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಾರ್ವರ್ಡ್, ಯಾಲೆ ಮತ್ತು ಸ್ಟ್ಯಾಂಡ್ ಫೋರ್ಡ್ ಸೇರಿದಂತೆ 9 ವಿಶ್ವವಿದ್ಯಾಲಯಗಳನ್ನೂ ತನಿಖೆಗೆ ಒಳಪಡಿಸಲಾಗಿದೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನ ಕಡಿಮೆ ವೇತನದಲ್ಲಿ ಕೆಲಸಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಕರೆತರಲಾಗಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಯಲಿದೆ ಎಂದು ಕೀತ್ ಸೊಂಡರ್ಲಿಂಗ್ ತಿಳಿಸಿದ್ದಾರೆ.

