ಮಕ್ಕಳಿಗೆ ದಸರಾ ರಜೆ ಆರಂಭವಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಮನಸ್ಸಲ್ಲಿ ಹೀಗೆ ಹಳೆ ನೆನಪುಗಳ ಜಂಬೂ ಸವಾರಿ ಹೊರಟಿತ್ತು.. ʻಇವತ್ತಿಂದ ದಸರಾ ರಜೆ, ಅಜ್ಜಿಯ ಮನೆಗೆ ಹೋಗ್ಬೇಕು. ಅಲ್ಲಿ ಪುಟ್ಟ ಸ್ನೇಹಿತೆ ಶ್ರೀಲಕ್ಷ್ಮಿ ಇದಾಳೆ, ಅಜ್ಜಿಯ ಮುದ್ದು ಬಿಳಿ ನಾಯಿ ʻಡಿಂಗʼ ಇದಾನೆ. ಸ್ನೇಹಿತ ರಾಘು, ಮಂಜು, ಆದಿತ್ಯ ಇವರೆಲ್ಲ ಇದಾರೆ. ಅವರ ಜೊತೆ ಒಂದಷ್ಟು ದಿನ ಆಟವಾಡಿ ಬರಬೇಕು!ʼ ಇದು ಸುಮಾರು 25 ವರ್ಷಗಳ ಹಿಂದಿನ ಮಾತು..!
ಆಗ ದಸರಾ ರಜೆಯೆಂದರೆ ಇಂದಿನ ಮಕ್ಕಳಿಗೆ ಊಹಿಸಲೂ ಸಾಧ್ಯವಾಗದಷ್ಟು ಸಂಭ್ರಮ. ಶಾಲೆಯಲ್ಲಿ ದಸರಾ ರಜೆ ಘೋಷಣೆಯಾಗುತ್ತಿದ್ದಂತೆ ಮನಸ್ಸಿನಲ್ಲಿ ಖುಷಿಯೋ ಖುಷಿ! ಪುಸ್ತಕ, ಹೋಂವರ್ಕ್ಗಳೆಲ್ಲವನ್ನು ಒಂದು ಬದಿಗಿಟ್ಟು, ರಜೆಯ ದಿನಗಳನ್ನು ಹೇಗೆ ಕಳೆಯಬೇಕು ಎಂಬ ಲೆಕ್ಕಾಚಾರ ಶುರುವಾಗುತ್ತಿತ್ತು. ಅದರಲ್ಲೂ ಅಜ್ಜಿಯ ಮನೆಗೆ ಹೋಗುವ ಸಂಭ್ರಮವೇ ಬೇರೆ. ರಜೆ ಆರಂಭವಾಗುವುದಕ್ಕಿಂತ ಮೊದಲೇ ಅಜ್ಜಿಯ ಮನೆಯ ಪ್ರವಾಸದ ಕನಸು ಕಣ್ಣಲ್ಲೇ ಇರುತ್ತಿತ್ತು.
ಅಜ್ಜಿಯ ಮನೆಗೆ ಹೋಗುವ ಪ್ರಯಾಣವೇ ಒಂದು ಸಾಹಸ, ಬಸ್ಸಿನ ಕಿಟಕಿಯಿಂದ ಕಾಣುವ ಹಸಿರು ಗದ್ದೆಗಳು, ಮರಗಳು, ಬೆಟ್ಟಗಳು, ಹಳ್ಳಿಯ ರಸ್ತೆಗಳು ಎಲ್ಲವೂ ಮನಸ್ಸಿಗೆ ಮುದ ನೀಡುತ್ತಿದ್ದವು. ಅಜ್ಜಿಯ ಮನೆಯ ಹತ್ತಿರ ಬರುತ್ತಿದ್ದಂತೆ ಬೀಸುವ ಗಾಳಿ, ಮೇಯಲು ಬಿಟ್ಟ ಹಸು ಕರುಗಳು, ಮನೆಯ ಅಂಗಳದ ತುಳಸಿ ಗಿಡ ಎಲ್ಲವೂ ನನ್ನನ್ನು ಸ್ವಾಗತಿಸುತ್ತಿದ್ದವು.
ಬಸ್ಸು ಇಳಿಯುತ್ತಿದ್ದಂತೆ ಅಜ್ಜಿ ಪ್ರೀತಿಯಿಂದ ತಲೆ ಸವರಿ ಬರಮಾಡಿಕೊಳ್ಳುತ್ತಿದ್ದ ಆ ಕ್ಷಣ, ಸ್ವರ್ಗ! ಅಮ್ಮನ ಗದರಿಕೆ ಇಲ್ಲ, ಶಾಲೆಯ ಗಂಟೆಯ ಸದ್ದಿಲ್ಲ. ಅಜ್ಜಿಯ ಅರಮನೆಗೆ ನಾನೇ ದೊರೆ!
ಸಂಜೆಯಾಗುತ್ತಿದ್ದಂತೆ ಅಜ್ಜಿಯ ಸುತ್ತ ಮಕ್ಕಳೆಲ್ಲ ಕುಳಿತುಕೊಳ್ಳುತ್ತಿದ್ದೆವು. ಅಜ್ಜಿ ಹೇಳುತ್ತಿದ್ದ ರಾಜಕುಮಾರನ ಕಥೆಗಳು, ರಾಕ್ಷಸರ ಕಥೆಗಳು, ದೆವ್ವ-ಭೂತಗಳ ಕಥೆಗಳು ನಮ್ಮ ಕಲ್ಪನೆಯ ಲೋಕವನ್ನೇ ಬದಲಿಸುತ್ತಿದ್ದವು. ಕೆಲವೊಂದು ಕಥೆಗಳನ್ನು ಕೇಳಿ ಭಯವಾಗುತ್ತಿದ್ದರೂ, ಮತ್ತೊಂದು ಕಥೆ ಕೇಳುವ ಆಸೆ ಮಾತ್ರ ಕಡಿಮೆಯಾಗುತ್ತಿರಲಿಲ್ಲ.
ಅಜ್ಜಿಯ ಕಥೆಗಳಲ್ಲಿ ಬರೀ ಮನರಂಜನೆ ಇರುತ್ತಿರಲಿಲ್ಲ. ಬದುಕಿನ ಪಾಠಗಳೂ ಅಡಗಿರುತ್ತಿದ್ದವು. ಈಗಿನ ಮಕ್ಕಳಿಗೆ ಮೊಬೈಲ್ನಲ್ಲಿ ಕಥೆ ಕೇಳುವ ಅವಕಾಶವಿದ್ದರೂ, ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುವ ಆ ಆತ್ಮೀಯತೆಯನ್ನು ಯಾವ ತಂತ್ರಜ್ಞಾನವೂ ಖಂಡಿತ ಕೊಡಲಾರದು.
ಈಗಿನ ಹಾಗೆ ಆಗ ಮೊಬೈಲ್ ಎಂಬ ಮಾಯಾಲೋಕ ಇರಲಿಲ್ಲ. ರಜೆಯಲ್ಲಿ ತಲೆಯೆತ್ತಿ ನಿಲ್ಲುವ ಶಿಬಿರಗಳು, ವಿಶೇಷ ತರಗತಿ ಎಂಬ ಒತ್ತಡವೂ ಇರಲಿಲ್ಲ. ಬೆಳಗ್ಗೆ ಎದ್ದರೆ ಸಾಕು, ಗೆಳೆಯರ ಜೊತೆ ಆಟವಾಡಲು ಹೊರಟುಬಿಡುತ್ತಿದ್ದೆವು. ಸಮಯ ನೋಡಲು ಗಡಿಯಾರದ ಅಗತ್ಯವೂ ಇರಲಿಲ್ಲ. ಅಮ್ಮ ಇಲ್ಲವೇ ಅಜ್ಜಿ ಕೂಗಿ ಕರೆದಾಗಲೇ, ಊಟದ ಟೈಮ್ ಆಯ್ತು ಅಥವಾ ಸಂಜೆ ಆಯ್ತು ಅಂತ ಗೊತ್ತಾಗೋದು!
ಮಾನವನಿಂದ ಮಂಗನನ್ನಾಗಿಸುತ್ತಿದ್ದ ʻಮರಕೋತಿʼ ಆಟ!
ದಸರಾ ರಜೆಯಲ್ಲಿ ಆಡುತ್ತಿದ್ದ ನಮ್ಮ ನೆಚ್ಚಿನ ಆಟಗಳಲ್ಲಿ ಮರಕೋತಿ ಆಟವೂ ಒಂದು. ಮರದಿಂದ ಮರಕ್ಕೆ ಹತ್ತಿ, ಒಬ್ಬರನ್ನೊಬ್ಬರು ಹಿಡಿಯಲು ಓಡಾಡುತ್ತಿದ್ದ ಕ್ಷಣಗಳೇ ಅದ್ಭುತ. ಎಷ್ಟೋ ಸಲ ಬಿದ್ದು ಗಾಯವಾದರೂ, ಸ್ವಲ್ಪ ಹೊತ್ತಿನಲ್ಲೇ ಮತ್ತೆ ಆಟಕ್ಕೆ ಸಿದ್ಧರಾಗಿಬಿಡುತ್ತಿದ್ದೆವು. ಹೀಗೆ ಪ್ರಕೃತಿಯ ಮಡಿಲಲ್ಲೇ ನಮ್ಮ ಬಹುಭಾಗ ಬಾಲ್ಯ ಅರಳುತ್ತಿತ್ತು.

ಅಜ್ಜಿ ಮನೆಯ ಪಕ್ಕದಲ್ಲಿದ್ದ ಶರಾವತಿ ನದಿಯೇ ನಮಗೆ ಈಜುಕೊಳ! ಗೆಳೆಯರ ಗುಂಪಿನೊಂದಿಗೆ ನದಿಗೆ ಹೋಗಿ ಈಜಾಡುವುದು, ನೀರಿನಲ್ಲಿ ಮುಳುಗಿ ಮತ್ತೆ ಮೇಲೆದ್ದು ಸಂಭ್ರಮಿಸುವುದು, ದಡದಲ್ಲಿ ಕುಳಿತು ಕಾಲುಗಳನ್ನು ನೀರಿನಲ್ಲಿ ಆಡಿಸುವುದು ಎಲ್ಲವೂ ಮರೆಯಲಾಗದ ಅನುಭವಗಳು. ನೀರಿನ ತಂಪು, ಗೆಳೆಯರ ಕೇಕೆ, ಹರಿಯುವ ನದಿಯ ಸದ್ದು ಇಂದಿಗೂ ಕಿವಿಯಲ್ಲಿ ಗುನುಗುಡುತ್ತದೆ.
ಕಾಡಲ್ಲಿ ಅದೆಷ್ಟು ಸಿಹಿ ಇತ್ತು!
ಹೊನ್ನೆಮರಡು, ಅದು ಊರಲ್ಲ.. ಕಾಡು, ಅಲ್ಲಿಯ ಸಿಹಿ ಹಣ್ಣುಗಳನ್ನು ತಿನ್ನುವುದರ ಮಜವೇ ಬೇರೆ. ಕಾಡಿನ ದಾರಿಯಲ್ಲಿ ಗೆಳೆಯರೊಂದಿಗೆ ಹೋಗುವಾಗ ಸಿಗುತ್ತಿದ್ದ ಸಂಪಿಗೆ, ರಂಜದ, ಬುಕ್ಕಿ, ಮುಳ್ಳುಹಣ್ಣುಗಳನ್ನು ಹುಡುಕಿ ತಿನ್ನುತ್ತಿದ್ದೆವು.
ಮರದ ಮೇಲಿದ್ದ ಹಣ್ಣುಗಳನ್ನು ಕಲ್ಲು ಹೊಡೆದು ಬೀಳಿಸುವುದು, ಯಾರು ಹೆಚ್ಚು ಹಣ್ಣು ಉದುರಿಸುತ್ತಾರೆ ಎಂದು ಸ್ಪರ್ಧೆ ಮಾಡುವುದು, ಸಿಕ್ಕ ಹಣ್ಣುಗಳನ್ನು ಎಲ್ಲರೂ ಹಂಚಿಕೊಂಡು ತಿನ್ನುವುದು ಅದೊಂಥರ ಮಜ. ಅಂಗಡಿಯಿಂದ ಖರೀದಿಸಿದ ಹಣ್ಣುಗಳಿಗಿಂತ ಮರದಿಂದ ಕಿತ್ತು ತಿಂದ ಆ ಕಾಡಿನ ಹಣ್ಣುಗಳ ಸಿಹಿ ಹೆಚ್ಚು. ಆ ಸಿಹಿಯಲ್ಲಿ ಪ್ರಕೃತಿಯ ಪ್ರೀತಿಯೂ ಬೆರೆತಿರುತ್ತಿತ್ತು.

ದಸರಾ ರಜೆಯ ಕೊನೆಯ ದಿನ ಹತ್ತಿರವಾಗುತ್ತಿದ್ದಂತೆ ಮನಸ್ಸಿನಲ್ಲಿ ಹೇಳಲಾಗದ ಬೇಸರ ಮೂಡುತ್ತಿತ್ತು. ಅಜ್ಜಿಯ ಮನೆ ಬಿಟ್ಟು ಹೊರಡುವಾಗ ಅಜ್ಜಿಯ ಕಣ್ಣಲ್ಲೂ ಪ್ರೀತಿಯ ತೇವ ಕಾಣಿಸುತ್ತಿತ್ತು. ಸ್ನೇಹಿತರನ್ನು ಬಿಟ್ಟು ಹೊರಡುವಾಗ ಹೃದಯ ಭಾರವಾಗುತ್ತಿತ್ತು. ಮತ್ತೆ ಯಾವಾಗ ಬರುತ್ತೇವೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಉಳಿಯುತ್ತಿತ್ತು. ಮನೆಗೆ ಹಿಂದಿರುಗುವಾಗ ಬಸ್ಸಿನ ಕಿಟಕಿಯಿಂದ ದೂರವಾಗುತ್ತಿದ್ದ ಹಳ್ಳಿಯನ್ನು ನೋಡುತ್ತಾ, ಇನ್ನೂ ಕೆಲವು ದಿನ ರಜೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಿದ್ದೆವು.
ಇಂದು ಕಾಲ ಬದಲಾಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್ಗಳಿವೆ, ರಜೆಯಲ್ಲಿ ಎನೇನೋ ಶಿಬಿರಗಳಿವೆ, ವಿಶೇಷ ಪ್ರವಾಸಗಳಿವೆ. ಆದರೆ ಆಗಿನ ದಸರಾ ರಜೆಯಲ್ಲಿದ್ದ ಆ ಮುಗ್ಧ ಸಂತೋಷ, ಅಜ್ಜಿಯ ಮಮತೆ, ಮರಕೋತಿ ಆಟ, ನದಿ ನೀರಾಟ, ಕಾಡಿನ ಹಣ್ಣುಗಳ ಸವಿ ಮತ್ತೆ ಸಿಗುವುದು ಕಷ್ಟ.
ಆ ದಿನಗಳು ಕೇವಲ ರಜೆಯ ದಿನಗಳಾಗಿರಲಿಲ್ಲ, ಅವು ನಮ್ಮ ಬದುಕಿನ ಪುಸ್ತಕದ ಸುಂದರ ಪುಟಗಳಾಗಿದ್ದವು. ಬಾಲ್ಯವೆಂಬ ಪುಸ್ತಕದ ಪುಟಗಳನ್ನು ತಿರುವಿದಾಗಲೆಲ್ಲ, ನನ್ನ ಬಾಲ್ಯದ ದಸರಾ ರಜೆಯ ನೆನಪುಗಳು ಮುಖದಲ್ಲಿ ಮಂದಹಾಸ ಮೂಡಿಸುತ್ತವೆ. ನಿಜಕ್ಕೂ, ಅಂದು ನಾವು ಬದುಕನ್ನು ಅದೆಷ್ಟು ಸಂಭ್ರಮಿಸುತ್ತಿದ್ದೆವು ಅಲ್ವಾ?

