– ಚಿಕಾಗೋಗೆ ಹೊರಟಿದ್ದ ವಿಮಾನ ಹೀಥ್ರೂ ಏರ್ಪೋರ್ಟ್ಗೆ ವಾಪಸ್
– ನಿಟ್ಟುಸಿರು ಬಿಟ್ಟ ಪ್ರಯಾಣಿಕರು
ಲಂಡನ್: ಅಮೆರಿಕದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್ವೇಸ್ನ ವಿಮಾನ (British Airways Flight) ಬರೋಬ್ಬರಿ 4 ಗಂಟೆ 51 ನಿಮಿಷಗಳ ಕಾಲ ಆಗಸದಲ್ಲೇ ಗಿರಕಿ ಹೊಡೆದು ಬಳಿಕ ಹೀಥ್ರೂ ಏರ್ಪೋರ್ಟ್ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
BA295 ಸಂಖ್ಯೆಯ ಬೋಯಿಂಗ್ 777-200ER ವಿಮಾನ ಆಗಸಲ್ಲೇ ಗಿರಕಿ ಹೊಡೆದು ಸುಮಾರು 30 ಟನ್ ಇಂಧನ ಖಾಲಿ ಮಾಡಿ, 4 ಗಂಟೆ 51 ನಿಮಿಷಗಳ ಬಳಿಕ ಲಂಡನ್ನ ಹೀಥ್ರೂ ವಿಮಾನ ನಿಲ್ದಾಣಕ್ಕೆ (Heathrow Airport) ವಾಪಸ್ ಆಗಿದೆ. ಕ್ಯಾಬಿನ್ ಒತ್ತಡ (ಪ್ರೆಶರೈಸೇಶನ್) ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆ ವಿಮಾನ ತುರ್ತು ಪರಿಸ್ಥಿತಿ ಘೋಷಿಸಿತ್ತು. ಸದ್ಯ ಸೇಫ್ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
🚨After 4hrs 51 minutes airborne, British Airways BA295 has landed at London Heathrow following a pressurization problem.✈️ https://t.co/Y3BBF44EMp
— Aviation Reporter (@TripppleSeven7) October 5, 2026
30 ಟನ್ ಇಂಧನ ಬರ್ನ್
ವರದಿಗಳ ಪ್ರಕಾರ, ವಿಮಾನವು ಸುಮಾರು 30 ಟನ್ ಇಂಧನವನ್ನ ಬರ್ನ್ (ಖಾಲಿ) ಮಾಡಿದ ಬಳಿಕ ಹೀಥ್ರೂ ಏರ್ಪೋರ್ಟ್ಗೆ ಮರಳಿದೆ. ವಿಮಾನ ಲ್ಯಾಂಡ್ ಆದ ತಕ್ಷಣ ಹೀಥ್ರೂ ಏರ್ಪೋರ್ಟ್ನ ತುರ್ತು ಸೇವೆಯ SQUID-38 ಮತ್ತು SQUID-43 ವಾಹನಗಳು ವಿಮಾನವನ್ನ ಸುತ್ತುವರಿದು ಮುನ್ನೆಚ್ಚರಿಕಾ ಕ್ರಮ ಕೈಗೊಂಡವು.
ಐರ್ಲೆಂಡ್ ವಾಯುಸೀಮೆಯಲ್ಲಿ ಹಾರುತ್ತಿದ್ದಾಗ ತುರ್ತು ಪರಿಸ್ಥಿತಿ ಘೋಷಣೆ
ಲಂಡನ್ನಿಂದ ಚಿಕಾಗೋಗೆ ತೆರಳುತ್ತಿದ್ದ ಈ ಬೋಯಿಂಗ್ 777 ವಿಮಾನವು ಐರ್ಲೆಂಡ್ ವಾಯುಪ್ರದೇಶದಲ್ಲಿ ಹಾರುತ್ತಿದ್ದಾಗ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅಲ್ಲದೇ 7700 ಸಂದೇಶವನ್ನೂ ರವಾನೆ ಮಾಡಿತ್ತು.
#BA295 back on the ground at Heathrow 4 hr 47 minutes after take off. https://t.co/n4Szgf7EU4 https://t.co/1VyEGlc2zC
— Flightradar24 (@flightradar24) October 5, 2026
ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ಸುಮಾರು 37,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವು ಕೇವಲ 1 ನಿಮಿಷದಲ್ಲಿ 28,000 ಅಡಿ ಕುಸಿದು, 9000 ಅಡಿಗಳ ಎತ್ತರದಲ್ಲಿ ಹಾರಾಟ ನಡೆಸಿತು. ಬಳಿಕ ವಿಮಾನವು ತನ್ನ ಮಾರ್ಗ ಬದಲಿಸಿತು, 4 ಗಂಟೆಗೂ ಹೆಚ್ಚು ಕಾಲ ಆಗಸಲ್ಲಿ ಸುತ್ತು ಹೊಡೆದು ಬಳಿಕ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
‘ಕ್ಯಾಬಿನ್ ಪ್ರೆಶರ್ ಸಮಸ್ಯೆ’ ಎಂದಿದ್ದ ಪೈಲಟ್ಗಳು
ವಿಮಾನ ಸಿಬ್ಬಂದಿಯಿಂದ ಬಂದ ಆರಂಭಿಕ ACARS ಸಂದೇಶದಲ್ಲಿ, ವಿಮಾನವು ಕ್ಯಾಬಿನ್ ಪ್ರೆಶರೈಸೇಶನ್ (ಕ್ಯಾಬಿನ್ನಲ್ಲಿ ಕಾಣಿಸಿಕೊಂಡ ಒತ್ತಡ) ಸಮಸ್ಯೆಯಿಂದಾಗಿ ಹೀಥ್ರೂಗೆ ಮರಳುತ್ತಿರುವುದಾಗಿ ತಿಳಿಸಲಾಗಿತ್ತು.
ಸಂದೇಶದಲ್ಲಿ ಕ್ಯಾಬಿನ್ ಎತ್ತರ 10,500 ಅಡಿ ತಲುಪಿರುವುದಾಗಿ ಹಾಗೂ ವಿಮಾನದ ತೂಕವು ಗರಿಷ್ಠ ಲ್ಯಾಂಡಿಂಗ್ ತೂಕಕ್ಕಿಂತ ಸುಮಾರು 30 ಮೆಟ್ರಿಕ್ ಟನ್ ಹೆಚ್ಚಿರುವುದಾಗಿ ಉಲ್ಲೇಖಿಸಲಾಗಿತ್ತು. ಆರಂಭದಲ್ಲಿ ಇಂಧನವನ್ನ ಹೊರಹಾಕಲು ಸಾಧ್ಯವಾಗುತ್ತಿಲ್ಲ ಎಂದೂ ಸಂದೇಶದಲ್ಲಿ ತಿಳಿಸಲಾಗಿತ್ತು. ಈ ವೇಳೆ ಚಾಣಾಕ್ಷತೆ ಮೆರೆದ ಪೈಲಟ್ ಆಗಸದಲ್ಲೇ 30 ಟನ್ಗಳಷ್ಟು ಇಂಧನವನ್ನ ಬರ್ನ್ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ವಿಮಾನವನ್ನು ಹೀಥ್ರೂನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು.

ACARS ಸಂದೇಶ ಎಂದರೇನು?
ACARS (ವಿಮಾನ ಸಂವಹನ ವಿಳಾಸ ಮತ್ತು ವರದಿ ಮಾಡುವ ವ್ಯವಸ್ಥೆ) ಎಂಬುದು ವಿಮಾನ ಮತ್ತು ನೆಲದ ಮೇಲಿನ ನಿಯಂತ್ರಣ/ಸಂವಹನ ವ್ಯವಸ್ಥೆಗಳ ನಡುವೆ ಚಿಕ್ಕ ಡಿಜಿಟಲ್ ಸಂದೇಶಗಳನ್ನ ಕಳುಹಿಸಲು ಬಳಸುವ ಸಂವಹನ ವ್ಯವಸ್ಥೆ.

