ನವದೆಹಲಿ: ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಮಧ್ಯಂತರ ತಡೆ ನೀಡಿದೆ.
ಕೆಪಿಎಸ್ಸಿ ನೇಮಕಾತಿ ಅಕ್ರಮದ ತನಿಖೆಯನ್ನು ಹಿರಿಯ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (SIT) ವಹಿಸುವಂತೆ ಸೆಪ್ಟೆಂಬರ್ 21ರಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. SIT ರಚನೆ ಹಾಗೂ ತನಿಖೆಯ ಸ್ವರೂಪವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ದಿನದಿಂದಲೂ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗ ಹೈಕೋರ್ಟ್ ನೇರವಾಗಿ ಎಸ್ಐಟಿ ರಚನೆಗೆ ಆದೇಶಿಸಿರುವುದು ಸರಿಯಲ್ಲ ಎಂದು ಸರ್ಕಾರದ ಪರ ವಾದಿಸಲಾಯಿತು.
ಅಲೋಕ್ ಕುಮಾರ್ ಅವರನ್ನು ಎಸ್ಐಟಿ ಮುಖ್ಯಸ್ಥರನ್ನಾಗಿ ನೇಮಿಸಿರುವ ಬಗ್ಗೆಯೂ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು. ಅವರ ವಿರುದ್ಧ ಹಿಂದೆ ಕೇಳಿಬಂದಿದ್ದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ಅಭ್ಯರ್ಥಿಗಳ ಪರ ವಕೀಲರಿಂದ ವಿರೋಧ
ಇದಕ್ಕೆ ಅಭ್ಯರ್ಥಿಗಳ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ಹೈಕೋರ್ಟ್ ಸಮರ್ಥ ಮತ್ತು ಅನುಭವ ಹೊಂದಿರುವ ಅಧಿಕಾರಿಗಳನ್ನು ಪರಿಶೀಲಿಸಿ ಎಸ್ಐಟಿ ರಚನೆ ಮಾಡಿದೆ. ಹೀಗಿರುವಾಗ ತನಿಖೆಯಿಂದ ಹಿಂದೆ ಸರಿಯುವ ಅಗತ್ಯವೇನು ಎಂದು ಪ್ರಶ್ನಿಸಿದರು.
ಅಧಿಕಾರಿಯ ಆಯ್ಕೆ ಬಗ್ಗೆ ಸರ್ಕಾರಕ್ಕೆ ಆಕ್ಷೇಪವಿದ್ದರೆ ಹೈಕೋರ್ಟ್ನಲ್ಲೇ ಆ ವಿಚಾರವನ್ನು ಪ್ರಸ್ತಾಪಿಸಬಹುದಿತ್ತು ಎಂದು ವಾದಿಸಿದರು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಉಭಯ ಪಕ್ಷಗಳ ವಾದ ಆಲಿಸಿದ ಸುಪ್ರೀಂ ಕೋರ್ಟ್, ನಿರ್ದಿಷ್ಟ ಅಧಿಕಾರಿಯ ನೇಮಕದ ಬಗ್ಗೆ ಆಕ್ಷೇಪವಿದ್ದರೆ ಅದನ್ನು ಸೂಕ್ತ ನ್ಯಾಯಾಲಯದ ಮುಂದೆ ಪ್ರಶ್ನಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿತು. ಇಂತಹ ಆಡಳಿತಾತ್ಮಕ ಆಯ್ಕೆಗಳಲ್ಲಿ ಸುಪ್ರೀಂ ಕೋರ್ಟ್ ಸುಲಭವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂಬ ನಿಲುವನ್ನೂ ನ್ಯಾಯಪೀಠ ವ್ಯಕ್ತಪಡಿಸಿತು.
ಅದೇ ವೇಳೆ, ಅಲೋಕ್ ಕುಮಾರ್ ವಿರುದ್ಧ ಸರ್ಕಾರ ಉಲ್ಲೇಖಿಸಿರುವ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಂದಿನ ವಿಚಾರಣೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.
ಎಸ್ಐಟಿ ರಚನೆಗೆ ಸರ್ಕಾರಕ್ಕೆ ಒಪ್ಪಿಗೆಯಿರುವ ಇತರ ಸಮರ್ಥ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೂ ಅವಕಾಶ ನೀಡಲಾಗಿದೆ.
ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಕೆಪಿಎಸ್ಸಿ ನೇಮಕಾತಿ ಅಕ್ರಮದ ತನಿಖೆಗೆ ಎಸ್ಐಟಿ ರಚಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ: ಪೋಕ್ಸೋ ಆರೋಪಿ ಸಂಬಂಧಿಗಳಿಂದ ಕಿರುಕುಳ ಆರೋಪ – ದೂರುದಾರ ಆತ್ಮಹತ್ಯೆ
ವಿಚಾರಣೆಯನ್ನು ಅ. 12ಕ್ಕೆ ಮುಂದೂಡಿಕೆ
ಇದೇ ಪ್ರಕರಣದಲ್ಲಿ KPSCಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿದ್ದು, ಪ್ರಶ್ನೆಪತ್ರಿಕೆ ಸೋರಿಕೆ, OMR ಅಂಕಗಳ ಅಕ್ರಮ ಮತ್ತು ಅಭ್ಯರ್ಥಿಗಳಿಂದ ಹಣ ಪಡೆದ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ಗೆ ಇತ್ತೀಚೆಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು.ಇದನ್ನೂ ಓದಿ: ʼಕುಲಶೇಖರದಲ್ಲಿ ನಮ್ಮಿಬ್ಬರು ಮಕ್ಕಳನ್ನು ಬೆಳೆಸುವʼ – ಸೌಂದರ್ಯ,ಯಶಸ್ ಮಾತುಕತೆ

