ಇಟಾನಗರ: ಅರುಣಾಚಲ ಪ್ರದೇಶದಲ್ಲಿ (Arunachal Pradesh) ಗಸ್ತು ತಿರುಗುತ್ತಿದ್ದ ಅಸ್ಸಾಂ ರೈಫಲ್ಸ್ (Assam Rifles) ತಂಡದ ಮೇಲೆ ಶಂಕಿತ ಉಗ್ರರು (Suspected Militant) ದಾಳಿ ನಡೆಸಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಹವಾಲ್ದಾರ್ ಜನ್ಖೋಕೈ ಕುಕಿ ಹುತಾತ್ಮರಾದ ಯೋಧ ಎಂದು ತಿಳಿದು ಬಂದಿದೆ. ಚಂಗ್ಲಾಂಗ್ ಜಿಲ್ಲೆಯಲ್ಲಿರುವ ಭಾರತ-ಮ್ಯಾನ್ಮಾರ್ ಗಡಿಯಲ್ಲಿ (India-Myanmar Border) ಗಡಿ ಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿ ಮುಂಜಾನೆ ಸುಮಾರು 6:30ರ ಸುಮಾರಿಗೆ ಯೋಧರು ಗಸ್ತು ತಿರುಗುತ್ತಿದ್ದರು. ಈ ವೇಳೆ, ನಾಮ್ಪಾಂಗ್ ವೃತ್ತದ ವ್ಯಾಪ್ತಿಯ ನಾಮ್ಪಾಂಗ್ ನಲ್ಲಾ (Nampong Nallah) ಬಳಿ ಈ ದಾಳಿ ನಡೆದಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಬೇಟೆಯಾಡಿದ ಭದ್ರತಾ ಪಡೆಗಳು

ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಸ್ಥಿತಿಯ ಬಗ್ಗೆ ವಿವರಗಳು ಲಭ್ಯವಾಗಿಲ್ಲ.
ದಾಳಿಯ ನಂತರ ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ದಾಳಿಕೋರರ ಗುರುತಿನ ಬಗ್ಗೆ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಎನ್ಎಸ್ಸಿಎನ್ (ಕೆ-ವೈಎ) [NSCN (K-YA)] ಸಂಘಟನೆಗೆ ಸೇರಿದ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಚಂಗ್ಲಾಂಗ್ ಎಸ್ಪಿ ಕಿರ್ಲಿ ಪಾಡು ಮಾತನಾಡಿ, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹೆಚ್ಚಿನ ವಿವರಗಳನ್ನು ಸಂಗ್ರಹಿಸುವಂತೆ ಚಂಗ್ಲಾಂಗ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರನ್ನು ನೇಮಿಸಿಕೊಳ್ಳಲು ಪೋರ್ನ್ ಸೈಟ್ಗಳ ಬಳಕೆ – ಪಾಕ್ನಿಂದ ಹೊಸ ಕುತಂತ್ರ

