– ವಿದ್ಯುತ್ ಸಂಪರ್ಕ ಕಡಿತ ಆಗುತ್ತೆಂಬ ಭಯದಿಂದ ಟ್ರಾಫಿಕ್ ಫೈನ್ ಕಟ್ಟುತ್ತಾರೆ
– ಟ್ರಾಫಿಕ್ ದಂಡ ಕಟ್ಟದವರಿಗೆ ಬಿಸಿ ಮುಟ್ಟಿಸಲು ಕೋರ್ಟ್ ಸೂಚನೆ
ನವದೆಹಲಿ: ಸಂಚಾರ ಕಾನೂನು ಉಲ್ಲಂಘಿಸುವವರು ದಂಡ ಪಾವತಿಸುವಂತೆ ಮಾಡಲು ಸರ್ಕಾರವು ನವೀನ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ. ಜನರು ಟ್ರಾಫಿಕ್ ಚಲನ್ ದಂಡವನ್ನು ಪಾವತಿಸದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್ ಜೊತೆ ಲಿಂಗ್ ಮಾಡಿ ಎಂದು ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ದಂಡದ ಮೊತ್ತವನ್ನು ಪಾವತಿಸದ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಹಾಗೂ ಅವುಗಳ ಮಾಲೀಕತ್ವದ ವರ್ಗಾವಣೆಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸಲಹೆ ನೀಡಿತು. ಇದನ್ನೂ ಓದಿ: ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು – ನಾಲ್ವರು ಐಸಿಸ್ ಕಾರ್ಯಕರ್ತರಿಗೆ ಜೈಲು ಶಿಕ್ಷೆ
ಜನರು ಟ್ರಾಫಿಕ್ ಫೈನ್ ಕಟ್ಟದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್‌ಗೆ ಲಿಂಕ್ ಮಾಡಿ. ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭಯದಿಂದ ಅವರು ಬಿಲ್ ಪಾವತಿಸಲೇಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಕೇವಲ ಇ-ಚಲನ್‌ಗಳನ್ನು (e-challans) ವಿತರಿಸುತ್ತಾ ಹೋದರೆ ಸಾಲದು. ಪೊಲೀಸರು ಇಂತಹ ಸಾವಿರಾರು ಅಥವಾ ಲಕ್ಷಾಂತರ ಇ-ಚಲನ್‌ಗಳನ್ನು ವಿತರಿಸಬಹುದು. ಆದರೆ, ಆ ಚಲನ್‌ಗಳ ಮೂಲಕ ವಿಧಿಸಲಾದ ದಂಡದ ಮೊತ್ತವನ್ನು ವಸೂಲಿ ಮಾಡುವುದು ಮುಖ್ಯ ಪ್ರಶ್ನೆಯಾಗಿದೆ. ಜನರು ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸದಿದ್ದರೆ, ಆ ಮೊತ್ತವನ್ನು ಅವರ ವಿದ್ಯುತ್ ಬಿಲ್‌ನ ಬಾಕಿಗೆ ಸೇರಿಸಿ. ಅವರು ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ, ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಇದಕ್ಕೆ ಸೂಕ್ತ ಮಾರ್ಗವನ್ನು ಕಂಡುಕೊಳ್ಳಿ. ಈ ದೇಶದಲ್ಲಿ, ನೀವು ಇದಕ್ಕೆ ಪರಿಹಾರವೊಂದನ್ನು ಹುಡುಕಲೇಬೇಕು ಎಂದು ನ್ಯಾಯಪೀಠ ಹೇಳಿತು. ಇದನ್ನೂ ಓದಿ: ದರ್ಶನ್‌ಗೆ ಬಿಗ್ ಶಾಕ್- ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ಮಾಫಿ ಸಾಕ್ಷ್ಯ ದಾಖಲು
ದೇಶಾದ್ಯಂತ ಒಟ್ಟು 45,000 ಕೋಟಿ ರೂ. ಮೌಲ್ಯದ ಇ-ಚಲನ್‌ಗಳಲ್ಲಿ ಇದುವರೆಗೆ 25,000 ಕೋಟಿ ರೂ. ಮಾತ್ರ ವಸೂಲಾಗಿದೆ. ಇನ್ನೂ 20,000 ಕೋಟಿ ದಂಡದ ಮೊತ್ತ ವಸೂಲಿ ಬಾಕಿ ಇದೆ.

