– ಎಸ್‌ಐಆರ್‌ಗೂ ಸವಾಲು
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ( Supreme Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.
ರಾಕೇಶ್ ಕುಮಾರ್ ಸಿಂಗ್ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ, ಸಂವಿಧಾನದ 324ನೇ ವಿಧಿಯಡಿ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರವು ಸಾಮೂಹಿಕವಾಗಿದ್ದು, ಅದನ್ನು ಒಬ್ಬ ಸದಸ್ಯರು ಏಕಪಕ್ಷೀಯವಾಗಿ ಚಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಎತ್ತಲಾಗಿದೆ. ಈ ಹಿನ್ನೆಲೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರು ಯಾವ ಅಧಿಕಾರದ ಆಧಾರದ ಮೇಲೆ ಇಂತಹ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ವಿವರಿಸುವಂತೆ ಕ್ವೋ ವಾರಂಟೋ ರಿಟ್(Quo Warranto) ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಮ್ಮು – ಕಾಶ್ಮೀರ ವಿಧಾನಸಭೆಯಲ್ಲಿ ಪ್ರತಿಭಟನೆ
ಪ್ರಸ್ತುತ ಚುನಾವಣಾ ಆಯೋಗದಲ್ಲಿ ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದು, ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಚುನಾವಣಾ ಆಯುಕ್ತರಾಗಿದ್ದಾರೆ. ಯಾವುದೇ ವಿಷಯದಲ್ಲಿ ಮೂವರ ನಡುವೆ ಒಮ್ಮತ ಮೂಡದಿದ್ದರೆ ಬಹುಮತದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿದಾರರ ಪ್ರಕಾರ, 2025ರ ಅಕ್ಟೋಬರ್ 28ರಿಂದ 2026ರ ಆಗಸ್ಟ್ 14ರವರೆಗೆ ಕನಿಷ್ಠ 14 ಪ್ರತ್ಯೇಕ ಸಂದರ್ಭಗಳಲ್ಲಿ, ಇತರೆ ಇಬ್ಬರು ಚುನಾವಣಾ ಆಯುಕ್ತರು ತಮ್ಮ ಅನುಮತಿ ಇಲ್ಲದೆ ಅಥವಾ ಚುನಾವಣಾ ಆಯೋಗದ ಅನುಮೋದನೆಯಿಲ್ಲದೆ ಆಯೋಗದ ಹೆಸರಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆಯೋಗದ ಸಭೆಗಳ ಕಾರ್ಯಸೂಚಿ ಮತ್ತು ಕಾರ್ಯವಿವರಗಳನ್ನು ಪ್ರಕಟಿಸುವಲ್ಲಿ ವಿಳಂಬ ಅಥವಾ ಅವುಗಳ ಲಭ್ಯತೆಯ ಕೊರತೆ, ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಬದಲಾವಣೆ ಹಾಗೂ ಇತರೆ ಚುನಾವಣಾ ಆಯುಕ್ತರಿಗೆ ಮಾಹಿತಿ ಅಥವಾ ಅನುಮತಿ ಇಲ್ಲದೆ ಮೇಲ್ಮನವಿ ಸಲ್ಲಿಸಿರುವಂತಹ ವಿಚಾರಗಳನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ ಹಾಗೂ ಸೇವಾ ಷರತ್ತುಗಳಿಗೆ ಸಂಬಂಧಿಸಿದ 2023ರ ಕಾನೂನನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಾಧ್ಯವಾದಷ್ಟು ಚುನಾವಣಾ ಆಯೋಗದ ಕಾರ್ಯಗಳು ಒಮ್ಮತದ ಆಧಾರದ ಮೇಲೆ ನಡೆಯಬೇಕು. ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಬಹುಮತದ ಅಭಿಪ್ರಾಯದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು ಎಂಬ ಅಂಶವನ್ನು ಅರ್ಜಿದಾರರು ಮುಂದಿಟ್ಟಿದ್ದಾರೆ.
ಎಸ್‌ಐಆರ್‌ಗೂ ಸವಾಲು
ಇದೇ ಅರ್ಜಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನೂ ಪ್ರಶ್ನಿಸಲಾಗಿದೆ. ಎಸ್‌ಐಆರ್ ಅಡಿಯಲ್ಲಿ ಕೈಗೊಂಡಿರುವ ಎಲ್ಲಾ ಕ್ರಮಗಳು, ನಿರ್ಧಾರಗಳು, ನಿರ್ದೇಶನಗಳು ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ಆರಂಭದಿಂದಲೇ ಕಾನೂನುಬದ್ಧ ಅಧಿಕಾರವಿಲ್ಲದವು ಎಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.
ಮತದಾರರ ಪಟ್ಟಿಯಲ್ಲಿ ಯಾರು ಇರಬೇಕು, ಯಾರು ಮತ ಚಲಾಯಿಸಬಹುದು ಎಂಬುದನ್ನು ನಿರ್ಧರಿಸುವಂತಹ ಮಹತ್ವದ ಅಧಿಕಾರಗಳನ್ನು ಸಂವಿಧಾನವು ಬಹುಸದಸ್ಯ ಚುನಾವಣಾ ಆಯೋಗಕ್ಕೆ ನೀಡಿದೆ. ಆ ಅಧಿಕಾರವನ್ನು ಅಗತ್ಯ ಸದಸ್ಯರ ಭಾಗವಹಿಸುವಿಕೆ ಇಲ್ಲದೆ ಒಬ್ಬ ಸದಸ್ಯರು ಬಳಸಬಹುದೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಇದನ್ನೂ ಓದಿ: SIR ವಿವಾದದ ನಡುವೆ ಯುಪಿಯಲ್ಲಿ ಜ್ಞಾನೇಶ್ ಕುಮಾರ್ ಕಾರ್ಯಕ್ರಮ ಮುಂದೂಡಿಕೆ

