– ಬನ್ನಿ ಹೂವಿನ ಲೋಕಕ್ಕೆ ಹೋಗೋಣ… ಬಣ್ಣಗಳ ಪರಿಮಳ ಅರಸಿ… ಸೌಂದರ್ಯ ಸವಿಯುತ್ತಾ… ಪ್ರಜಾಪ್ರಭುತ್ವದ ಆಶಯ ಅರಿಯುತ್ತಾ…
ʻಹೂವು ಚೆಲುವೆಲ್ಲ ನಂದೆಂದಿತು…ʼ
ʻಹೂವಿಗೆ ತಂಗಾಳಿ ಬೇಡವೇ… ತಂಗಾಳಿ ಬೇಡವೇ… ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ… ಮುನಿಸಿಕೊಂಡರೇ ಸುಗಂಧವೆಲ್ಲಿದೆ…?ʼ
ಹೀಗೆ ಹೂವಿನ ಸೊಬಗನ್ನು ಹಾಡಿ ಹೊಗಳುವ ಗೀತೆಗಳು ಕಿವಿಗೆ ಬೀಳುತ್ತಿದ್ದಂತೆಯೇ, ಮನಸ್ಸು ಕ್ಷಣಕಾಲ ಹೂವಿನ ಲೋಕದಲ್ಲಿ ವಿಹರಿಸಬೇಕೆನ್ನುತ್ತದೆ. ಬಣ್ಣ, ಪರಿಮಳ, ಸೌಂದರ್ಯ ರಾಶಿಗಳ ಸಂಗಮವಾಗಿರುವ ಹೂವುಗಳ ಜಗತ್ತೇ ಒಂದು ಪುಟ್ಟ ಸ್ವರ್ಗ… ಅಂಥದ್ದೇ ಒಂದು ಪುಷ್ಪಲೋಕ ಕಣ್ತುಂಬಿಕೊಳ್ಳುವ ಅವಕಾಶ ಇದೀಗ ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಸಿಕ್ಕಿದೆ.

ಹೌದು. ಮೈಸೂರು ದಸರಾ ಅಂದ್ರೆ ಕೇವಲ ಜಂಬೂಸವಾರಿ, ಸಾಂಸ್ಕೃತಿಕ ವೈಭವ, ದೀಪಾಲಂಕಾರ ಮಾತ್ರವಲ್ಲ… ಹೂವಿನ ಬಣ್ಣಗಳಲ್ಲಿ ಅರಳುವ ಪ್ರಕೃತಿಯ ಹಬ್ಬವೂ ಹೌದು. ಅಷ್ಟಕ್ಕೂ ಹೂವಿನ ಹಬ್ಬ ಹೇಗಿರುತ್ತೆ ಅಂತೀರಾ… ಮುಂದೆ ಓದಿ…
ಹೂವಿನ ಬಣ್ಣದಲ್ಲಿ ಅರಳಲಿದೆ ದಸರಾ!
ಮೈಸೂರು ತೋಟಗಾರಿಕೆ ಇಲಾಖೆ ವತಿಯಿಂದ ಈ ಬಾರಿ ಅದ್ಧೂರಿಯಾಗಿ ʻಮೈಸೂರು ದಸರಾ ಫಲಪುಷ್ಪ ಪ್ರದರ್ಶನʼ ಆಯೋಜಿಸಲಾಗುತ್ತಿದೆ. ಅದಕ್ಕೆ ತಯಾರಿಗಳೂ ಕೂಡ ಭರ್ಜರಿಯಾಗಿ ಸಾಗಿವೆ. ʻಪ್ರಜಾಪ್ರಭುತ್ವದ ಹಬ್ಬʼ ಎಂಬ ಥೀಮ್ ಕೇಂದ್ರವಾಗಿಟ್ಟುಕೊಂಡು, ಹೂವು, ಸಸ್ಯ, ಕಲಾಕೃತಿ ಮತ್ತು ಸೃಜನಶೀಲತೆಯ ಅದ್ಭುತ ಲೋಕವನ್ನೇ ಇಲ್ಲಿ ನಿರ್ಮಿಸಲಾಗಿದೆ.
ಯಾವಾಗ ಉದ್ಘಾಟನೆ?
ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನ (Dasara Flower Show) ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರ ಕಣ್ಮನ ಸೆಳೆಯಲಿದೆ. ಅಕ್ಟೋಬರ್ 11ರಂದು ಬೆಳಗ್ಗೆ 11.30ಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ಪ್ರವೇಶ ದರ
ವಯಸ್ಕರಿಗೆ – 60 ರೂಪಾಯಿ
ಮಕ್ಕಳಿಗೆ – 30 ರೂಪಾಯಿ
6 ವರ್ಷದೊಳಗಿನ ಮಕ್ಕಳಿಗೆ – ಉಚಿತ
ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಪ್ರವೇಶ.
ಗಾಜಿನ ಮನೆಯಲ್ಲಿ ಅರಳುವ ಕಲ್ಪನೆಯ ಲೋಕ!
ಮೈಸೂರಿನ ಗಾಜಿನ ಮನೆ ಈ ಬಾರಿ ಹೂವಿನ ಅಲಂಕಾರದಲ್ಲಿ ಮತ್ತಷ್ಟು ಕಂಗೊಳಿಸಲಿದೆ. ಇಲ್ಲಿ ಹೂವುಗಳಿಂದ ಅರಳಿದ ʻವಿಧಾನಸೌಧದʼ ಪ್ರತಿಕೃತಿ ಪ್ರಮುಖ ಆಕರ್ಷಣೆಯಾಗಲಿದೆ. 4 ವಿಶೇಷ ಬೆಡ್‌ಗಳು, ಅಲಂಕಾರಿಕಾ ಪುಷ್ಪಕುಂಡಗಳ ಜೋಡಣೆ, ಉಷ್ಣ ಮತ್ತು ಶೀತ ವಲಯದ ಹೂವಿನ ಕುಂಡಗಳಿಂದ ಮಾಡಲಾಗುವ ಅಲಂಕಾರ… ಇವೆಲ್ಲವೂ ಗಾಜಿನ ಮನೆಯ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಲಿವೆ. ಇದರ ಜೊತೆಗೆ ಮತ್ತೊಂದು ಬೆಡ್‌ನಲ್ಲಿ ʻಬೋನ್‌ಸಾಯಿ ಪ್ರದರ್ಶನʼವೂ ಇರಲಿದೆ. ಪುಟ್ಟ ಗಿಡಗಳಲ್ಲೇ ಪ್ರಕೃತಿಯ ವಿಶಾಲತೆಯನ್ನ ಕಾಣಿಸುವ ಬೋನ್‌ಸಾಯಿ ಲೋಕವೂ ಹೂವಿನ ಪ್ರೇಮಿಗಳಿಗೆ ವಿಶೇಷ ಅನುಭವ ನೀಡಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕ ನವೀನ್.

ಹೊರಾಂಗಣದಲ್ಲೂ ಹತ್ತಾರು ಆಕರ್ಷಣೆ!
ಗಾಜಿನ ಮನೆಯ ಹೊರಾಂಗಣವೂ ಈ ಬಾರಿ ಖಾಲಿ ಉಳಿಯುವುದಿಲ್ಲ. ಚಿಕ್ಕ ಮತ್ತು ದೊಡ್ಡ ಗಡಿಯಾರಗಳು, ಪ್ರಜಾಪ್ರಭುತ್ವದ ಸ್ತಂಭಗಳ ಪ್ರತಿಕೃತಿಗಳು, ಜಾನೂರ್ ಆರ್ಟ್… ಒಂದರ ಹಿಂದೆ ಒಂದರಂತೆ ಕಣ್ಮನ ಸೆಳೆಯಲಿವೆ. ಜಾನೂರ್ ಆರ್ಟ್ ಅಂದ್ರೆ ತೆಂಗಿನ ಎಳೆಯ ಗರಿಗಳನ್ನ ಬಳಸಿ ಅತ್ಯಂತ ಆಕರ್ಷಕ ಅಲಂಕಾರಿಕ ವಸ್ತುಗಳು ಮತ್ತು ಕಲಾಕೃತಿಗಳನ್ನ ಸಿದ್ಧಪಡಿಸುವ ವಿಶಿಷ್ಟ ಕಲೆ.
ಇದರೊಂದಿಗೆ ಹೂಗಳಿಂದ ರೂಪುಗೊಳ್ಳುವ ಬೃಹತ್ ಕೇಕ್ ಪ್ರತಿಕೃತಿ, ಐತಿಹಾಸಿಕ ನೆನಪುಗಳನ್ನು ಹೊತ್ತ ʻಹಂಪಿಯ ಕಲ್ಲಿನ ರಥʼದ ಪ್ರತಿಕೃತಿ, ʻನನ್ನ ಮತ, ನನ್ನ ಹಕ್ಕುʼ ಎಂಬ ಸಂದೇಶ ಸಾರುವ ಮತದಾನದ ಶಾಹಿ ಗುರುತಿನ ಪ್ರತಿಕೃತಿ… ಪ್ರಜಾಪ್ರಭುತ್ವದ ಆಶಯವನ್ನು ಹೂವಿನ ಭಾಷೆಯಲ್ಲಿ ಹೇಳಲಿವೆ. ʻವಿದ್ಯುನ್ಮಾನ ಮತಯಂತ್ರʼದ ಪ್ರತಿಕೃತಿ ಕೂಡ ಇಲ್ಲಿ ಇರಲಿದೆ.

ಅಷ್ಟೇ ಅಲ್ಲ… ಸುಮಾರು 60,000 ವಾರ್ಷಿಕ ಹೂಗಳ ಪ್ರದರ್ಶನ, ತರಕಾರಿ ಕುಂಡಗಳ ವೈವಿಧ್ಯಮಯ ಪ್ರದರ್ಶನ, ಆಹಾರ ಮಳಿಗೆಗಳು ಮತ್ತು ಸಂಗೀತ ಕಾರಂಜಿ ಕೂಡಾ ಫಲಪುಷ್ಪ ಪ್ರದರ್ಶನದ ಮೆರುಗನ್ನ ಹೆಚ್ಚಿಸಲಿವೆ.
ಲಿಂಗಾಂಬುಧಿ ಕೆರೆಯಲ್ಲೂ ಪುಷ್ಪ ಸಂಭ್ರಮ!
ಮೈಸೂರಿನ ಮತ್ತೊಂದು ತಾಣವಾದ ಲಿಂಗಾಂಬುಧಿ ಕೆರೆ ಮತ್ತು ಸಸ್ಯತೋಟ ಆವರಣದಲ್ಲೂ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ʻಪುಷ್ಪಮೇಳ ಮತ್ತು ಸಸ್ಯತೋಟ ಭೇಟಿʼ ಎಂಬ ವಸ್ತುವಿಷಯದೊಂದಿಗೆ ಇಲ್ಲಿ ಪ್ರಕೃತಿಯ ಮಡಿಲಲ್ಲಿ ಮತ್ತೊಂದು ಪುಷ್ಪಲೋಕವೇ ತೆರೆದುಕೊಳ್ಳಲಿದೆ. ಅಕ್ಟೋಬರ್ 11ರಂದು ಮಧ್ಯಾಹ್ನ 12.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ʻಊಟಿ ಹೂಗಳʼ ಹೃದಯಸ್ಪರ್ಶಿ ಸ್ವಾಗತ
ಜಾನೂರ್ ಕಲೆಯಲ್ಲಿ ರೂಪುಗೊಳ್ಳುವ ಪ್ರವೇಶ ಕಮಾನುದ್ವಾರವೇ ಪ್ರವಾಸಿಗರನ್ನು ಸ್ವಾಗತಿಸಲಿದೆ. ಇದರೊಂದಿಗೆ ಬಿದಿರಿನಿಂದ ನಿರ್ಮಿಸಲಾದ ʻಸ್ಕೈವಾಕ್ʼ, ಹೂಗಳಿಂದ ಅಲಂಕರಿಸಲಾದ ಎರಡು ಆನೆಗಳ ಆಕೃತಿಗಳು, ಕಣ್ಮನ ಸೆಳೆಯುವ ಗುಲಾಬಿ ತೋಟ… ಹೃದಯಾಕಾರದ ಕಮಾನುಗಳು ಮತ್ತು ವಿಶೇಷ ಬೋನ್‌ಸಾಯಿ ಪ್ರದರ್ಶನವೂ ಇರಲಿದೆ. ಈ ಫಲಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತುಂಬಲಿವೆ. ಇಲ್ಲಿನ ಸಸ್ಯಪಥದಿಂದ ಮುಖ್ಯ ತೋಟದವರೆಗೆ ಕಲ್ಲಿನ ಹಾಸು, ಊಟಿ ಹೂಗಳ ಪ್ರತಿಕೃತಿಗಳು ಮತ್ತು ಸಂಗೀತ ಕಾರಂಜಿ ಪ್ರಕೃತಿ ಪ್ರಿಯರಿಗೆ ಹೊಸ ಅನುಭವ ನೀಡಲಿವೆ.

60 ಅಡಿ ಎತ್ತರದಿಂದ ಕಾಣಲಿದೆ ಹಸಿರಿನ ಹರವಿನ ಸೊಬಗು!
ಲಿಂಗಾಂಬುಧಿ ಸಸ್ಯತೋಟದ ಮತ್ತೊಂದು ಪ್ರಮುಖ ಆಕರ್ಷಣೆ 60 ಅಡಿ ಎತ್ತರದ ಬರ್ಡ್ ವ್ಯೂ ಟವರ್. ಈ ಗೋಪುರದ ಮೇಲೆ ನಿಂತು ಕಣ್ಣು ಹಾಯಿಸಿದರೆ… ಇಡೀ ಲಿಂಗಾಂಬುಧಿ ಬಟಾನಿಕಲ್ ಗಾರ್ಡನ್‌ನ ಸ್ವಚ್ಛಂದ ಹಸಿರು, ಸಸ್ಯಸಂಪತ್ತು ಮತ್ತು ಪಕ್ಷಿ ಸಂಕುಲದ ಚಿತ್ತಾರ ಕಣ್ಮುಂದೆ ತೆರೆದುಕೊಳ್ಳಲಿದೆ. ಮಡಿಕೆ ಪ್ರತಿಕೃತಿ ಅಲಂಕಾರ, 10 ಅಡಿ ಎತ್ತರದ ಬಾಹುಬಲಿ ಪ್ರತಿಮೆ, ಚಾವುಂಡರಾಯನ ಪ್ರತಿಕೃತಿ… ಇವೆಲ್ಲವೂ ಈ ತಾಣದ ಸೌಂದರ್ಯಕ್ಕೆ ಮತ್ತೊಂದು ಆಯಾಮ ನೀಡಲಿವೆ. ಸ್ಥಳೀಯ ಹಾಗೂ ಅಳಿವಿನಂಚಿನಲ್ಲಿರುವ ಹೂವುಗಳ ಪ್ರದರ್ಶನದ ಮೂಲಕ ನಮ್ಮ ನೆಲದ ಸಸ್ಯಸಂಪತ್ತಿನ ವೈವಿಧ್ಯತೆಯ ಪರಿಚಯವೂ ಆಗಲಿದೆ.

ಒಟ್ಟಿನಲ್ಲಿ ಮೈಸೂರು ದಸರಾದ ಈ ಫಲಪುಷ್ಪ ಪ್ರದರ್ಶನ ಅಂದ್ರೆ… ಇದು ಕೇವಲ ಹೂವಿನ ಪ್ರದರ್ಶನವಲ್ಲ. ಪ್ರಕೃತಿಯೊಂದಿಗೆ ನಮ್ಮ ನಂಟನ್ನು ನೆನಪಿಸುವ ಒಂದು ಸುಂದರ ಪಯಣ.
ಇನ್ನೇಕೆ ತಡ? ಬನ್ನಿ… ಹೂವಿನ ಲೋಕಕ್ಕೆ ಹೋಗೋಣ… ಬಣ್ಣಗಳ ನಡುವೆ ಪರಿಮಳವನ್ನು ಅರಸಿ… ಹೂಗಳ ನಡುವೆ ಪ್ರಕೃತಿಯ ಸೌಂದರ್ಯ ಸವಿಯುತ್ತಾ… ಕಲಾಕೃತಿಗಳ ನಡುವೆ ನಮ್ಮ ಸಂಸ್ಕೃತಿಯ ಛಾಯೆ ಕಂಡುಕೊಳ್ಳುತ್ತಾ… ಪ್ರಜಾಪ್ರಭುತ್ವದ ಆಶಯವನ್ನ ಹೂವಿನ ಭಾಷೆಯಲ್ಲಿ ಅರಿಯುತ್ತಾ…

