– ರತ್ನಖಚಿತ ಕಿರೀಟಧಾರಿ ಚೆಲುವನಾರಾಯಣನ ಕಣ್ತುಂಬಿಕೊಂಡ ಭಕ್ತಸಾಗರ
ಮಂಡ್ಯ: ದಕ್ಷಿಣ ಬದರಿ ಎಂದೇ ಪ್ರಸಿದ್ಧವಾಗಿರುವ ಮಂಡ್ಯ (Mandya) ಜಿಲ್ಲೆ ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ (Melukote) ಕಾರ್ತಿಕ ಮಾಸದ ಪ್ರಮುಖ ಆಕರ್ಷಣೆಯಾದ ಶ್ರೀ ಚೆಲುವನಾರಾಯಣಸ್ವಾಮಿಯ (Cheluvanarayanaswamy Temple) ವೈಭವದ ರಾಜಮುಡಿ ಬ್ರಹ್ಮೋತ್ಸವವು (Rajamudi Utsav) ಕಳೆದ ರಾತ್ರಿ ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ನೆರವೇರಿತು.
ಮೈಸೂರು ಒಡೆಯರ್ ಸಂಸ್ಥಾನದ ಅರಸರು ಶ್ರೀ ಕ್ಷೇತ್ರಕ್ಕೆ ಭಕ್ತಿಯಿಂದ ಸಮರ್ಪಿಸಿದ್ದ ಐತಿಹಾಸಿಕ ಸಿಂಹಲಾಂಛನ, ವಜ್ರಖಚಿತ ರಾಜಮುಡಿ ಕಿರೀಟ, ಗಂಡಭೇರುಂಡ, ಪದ್ಮಪೀಠ ಹಾಗೂ ಶಂಖ-ಚಕ್ರಗಳ ದಿವ್ಯಾಭರಣಗಳಿಂದ ಅಲಂಕೃತನಾಗಿದ್ದ ಚೆಲುವನಾರಾಯಣಸ್ವಾಮಿಯ ದರ್ಶನ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ರತ್ನಖಚಿತ ರಾಜಮುಡಿ ಧರಿಸಿ ಕಂಗೊಳಿಸುತ್ತಿದ್ದ ಉತ್ಸವಮೂರ್ತಿಯು ರಾಜಬೀದಿಯಲ್ಲಿ ಸಾಗುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿ ಪುನೀತರಾದರು. ಇದನ್ನೂ ಓದಿ: ಹಾವೇರಿಯ ಕಬ್ಬು ಬೆಳೆಗಾರರಿಂದ ಬೃಹತ್ ಹೋರಾಟ – ಸಚಿವ ರುದ್ರಪ್ಪ ಲಮಾಣಿ ಮನೆ ಮುಂದೆ ಧರಣಿಗೆ ಕರೆ
ಕಳೆದ ರಾತ್ರಿ ನಡೆದ ಈ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಸಾಲುಗಟ್ಟಿ ನಿಂತು ಸ್ವಾಮಿಯ ಕೃಪೆಗೆ ಪಾತ್ರರಾದರು. ರಾಜಮುಡಿ ಉತ್ಸವ ಸಂಪನ್ನಗೊಂಡ ಬೆನ್ನಲ್ಲೇ, ನವೆಂಬರ್ 19ರಂದು ಮೇಲುಕೋಟೆಯ ಪ್ರಸಿದ್ಧ ತೊಟ್ಟಿಲಮಡು ಜಾತ್ರಾ ಮಹೋತ್ಸವವು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ – ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
