– ಮಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಸ್ವಯಂಚಾಲಿತ ಡ್ರೋನ್
ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮತ್ತೊಂದು ನೀರೊಳಗಿನ ದೈತ್ಯ ಡ್ರೋನ್ (Drone) ಅನ್ನು ವಶಕ್ಕೆ ಪಡೆದಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.
ವಶಪಡಿಸಿಕೊಂಡ ಡ್ರೋನ್‌ಅನ್ನು ಎಂಕೆ-18 ಮೋಡ್-2 ಕಿಂಗ್‌ಫಿಶ್ (Mk 18 Mod 2 Kingfish) ಎಂದು ಗುರುತಿಸಲಾಗಿದೆ. ಇರಾನ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಡ್ರೋನ್‌ಅನ್ನು ʻREMUS 600ʼ ಎಂದು ಈ ಹಿಂದೆ ಗುರುತಿಸಿದ್ದರು. ಇದೀಗ ಅದರ ಗುರುತಿನ ಅಪ್‌ಡೇಟ್ ಕೊಟ್ಟಿದ್ದಾರೆ. ಆದ್ರೆ ಇರಾನ್‌ನ ಹೇಳಿಕೆಯನ್ನು ಅಮೆರಿಕ ಸಾರಸಗಟಾಗಿ ನಿರಾಕರಿಸಿದೆ.
Mk 18 Mod 2 Kingfish ವಶಕ್ಕೆ
ಐಆರ್‌ಜಿಸಿ ವಕ್ತಾರ ಸೆಕೆಂಡ್ ಬ್ರಿಗೇಡಿಯರ್ ಜನರಲ್ ಹೊಸೇನ್ ಮೊಹೆಬ್ಬಿ ಅವರು ಈ ಬಗ್ಗೆ ‘X’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅಮೆರಿಕದ ʻMk 18 Mod 2 Kingfishʼ ಸ್ವಯಂಚಾಲಿತ ನೀರೊಳಗಿನ ಡ್ರೋನ್ ಅನ್ನು (AUV) ಇರಾನ್‌ನ ನೌಕಾಪಡೆ ವಶಕ್ಕೆ ಪಡೆದಿದೆ ಎಂದು ತಿಳಿಸಿದ್ದಾರೆ.
تنگه هرمز نه تنها باز نیست، بلکه شکارگاه نیروی دریایی سپاه برای زیرسطحیهای آمریکایی است؛ دومین شکار هم صید شد، اینبار Mk 18 Mod 2 Kingfish؛ یک AUV پیشرفته، خودمختار، مجهز به سونار و ناوبری دقیق و با ارزش چندمیلیوندلاری. فقط شکار نیست؛ غنیمت فناوری و اطلاعاتی است. pic.twitter.com/S47rAjjbP9
— سخنگوی سپاه (@Irgcspeaker) September 27, 2026
ಐಆರ್‌ಜಿಸಿ ಈ ಬಾರಿ ಅತ್ಯಾಧುನಿಕ ನೀರೊಳಗಿನ ಡ್ರೋನ್ ಅನ್ನು ವಶಪಡಿಸಿಕೊಂಡಿದೆ. ಇದು ಸೋನಾರ್ ಮತ್ತು ನಿಖರ ನ್ಯಾವಿಗೇಷನ್ ವ್ಯವಸ್ಥೆ ಹೊಂದಿರುವ, ಹಲವು ಮಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಸ್ವಯಂಚಾಲಿತ AUV ಆಗಿದೆ. ಇದು ಕೇವಲ ಬೇಟೆಯಲ್ಲ, ತಂತ್ರಜ್ಞಾನ ಮತ್ತು ಗುಪ್ತಚರ ಮಾಹಿತಿಯ ಟ್ರೋಫಿಯಾಗಿದೆ ಎಂದು ಇರಾನ್ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ.
ಸಾಧನದ ಮಾಹಿತಿ ಪರಿಶೀಲಿಸುತ್ತಿರುವ ಇರಾನ್
ವಶಪಡಿಸಿಕೊಂಡ ಸಾಧನವನ್ನು ಆರಂಭದಲ್ಲಿ IRGC ನೌಕಾಪಡೆ, REMUS 600 ಎಂದು ಗುರುತಿಸಿತ್ತು. ಇರಾನ್ ಅಧಿಕಾರಿಗಳ ಪ್ರಕಾರ, ಇದು ಬುದ್ಧಿವಂತ ಹಾಗೂ ಸ್ವಯಂಚಾಲಿತ ನೀರೊಳಗಿನ ವಾಹನವಾಗಿದ್ದು, ಜಲಸಂಧಿಯಲ್ಲಿ ಬೇಹುಗಾರಿಕೆ ಕಾರ್ಯಾಚರಣೆ ನಡೆಸುತ್ತಿತ್ತು. ಅದರಲ್ಲಿನ ಮಾಹಿತಿ ಪಡೆದುಕೊಳ್ಳಲು ಇರಾನ್ ತಂತ್ರಜ್ಞರ ತಂಡ ಪರಿಶೀಲಿಸುತ್ತಿದೆ.
ಹಾರ್ಮುಜ್ ಜಲಸಂಧಿ ಬಂದ್
ಇದೇ ವೇಳೆ, ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಸಂಚಾರದ ಕುರಿತು ತನ್ನ ನಿಲುವನ್ನು ಇರಾನ್ ನೌಕಾಪಡೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಜಲಸಂಧಿ ಬಂದ್ ಆಗಲಿದೆ, ಅನುಮತಿಯಿಲ್ಲದ ಸಂಚಾರ ಹಾಗೂ ಅಪಾಯಕಾರಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ.

