ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಆರಂಭಗೊಂಡ ಮಳೆ (Rain) ಇಂದು (ಸೆ.25) ಸಹ ಮುಂದುವರೆದಿದೆ. ಇದರ ನಡುವೆಯೇ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ ನೀರು ಕಂದು ಬಣ್ಣಕ್ಕೆ ತಿರುಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಮಡಿಕೇರಿ (Madikeri) ತಾಲೂಕಿನ ಎಮ್ಮೆಮಾಡು, ಮರುಗೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂದು ಬಣ್ಣದ ಮಳೆನೀರು ಕಂಡುಬಂದಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಸ್ಥಳೀಯರಲ್ಲಿ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಪಾರದರ್ಶಕವಾಗಿ ಕಾಣುವ ಮಳೆನೀರು ಕೆಲವೆಡೆ ಕಂದು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಉಂಟಾಗಿದೆ. ಇದನ್ನೂ ಓದಿ: ಹಲವು ದಿನಗಳ ಬಳಿಕ ಕೊಡಗಿನಲ್ಲಿ ಮಳೆ ಆರ್ಭಟ – ವಾಹನ ಸವಾರರ ಪರದಾಟ
ಮೋಡ ಬಿತ್ತನೆ ಮಾಡಲಾಗಿದೆಯೇ? ಮೋಡ ಬಿತ್ತನೆಯಿಂದಲೇ ಮಳೆನೀರು ಕಂದು ಬಣ್ಣಕ್ಕೆ ತಿರುಗಿದೆಯೇ? ಎಂಬ ಚರ್ಚೆಯೂ ಇದೀಗ ನಡೆಯುತ್ತಿದೆ. ಆದರೆ ಮಳೆನೀರಿನ ಬಣ್ಣ ಬದಲಾವಣೆಗೆ ಹಲವು ನೈಸರ್ಗಿಕ ಕಾರಣಗಳಿರುವ ಸಾಧ್ಯತೆಯಿದೆ. ಮಳೆಯ ವೇಳೆ ಗಾಳಿಯಲ್ಲಿರುವ ಧೂಳು, ಮಣ್ಣಿನ ಸೂಕ್ಷ್ಮ ಕಣಗಳು ಸೇರಿದಂತೆ ವಿವಿಧ ಕಣಗಳು ಮಳೆಯೊಂದಿಗೆ ಕೆಳಗೆ ಬರುವುದರಿಂದ ನೀರಿನ ಬಣ್ಣ ಬದಲಾಗುವ ಸಾಧ್ಯತೆ ಇದೆ.
ಮಳೆ ನೀರಿನ ಬಣ್ಣ ಬದಲಾವಣೆಗೆ ನಿಖರ ಕಾರಣವೇನು ಎಂಬ ಬಗ್ಗೆ ವೈಜ್ಞಾನಿಕ ಪರಿಶೀಲನೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ. ಹೀಗಾಗಿ ಕಂದು ಬಣ್ಣಕ್ಕೆ ತಿರುಗಿದ ಮಳೆ ನೀರಿನ ಮಾದರಿಯನ್ನು ಪರಿಶೀಲಿಸಿ, ಬಣ್ಣ ಬದಲಾವಣೆಯ ನೈಜ ಕಾರಣವನ್ನು ಪತ್ತೆಹಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದೆ ಬಾಗ್ಮತಿ ನದಿ – ನೇಪಾಳದಲ್ಲಿ ಕಟ್ಟೆಚ್ಚರ, ವೀಡಿಯೋ ವೈರಲ್

