– ಪಾಕಿಸ್ತಾನದ ಕೃತ್ಯಗಳ ಬಗ್ಗೆ ಮಾತನಾಡಲು ನಾನು ಹೆದರಲ್ಲ ಎಂದ ತಸ್ಲೀಮಾ
ಜಿನೀವಾ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಕಾಶ್ಮೀರಿ ಮಹಿಳೆ ತಸ್ಲೀಮಾ ಅಖ್ತರ್ (Tasleema Akhtar) ಗುಡುಗಿದ್ದಾರೆ. ಪಾಕ್ ವಿರುದ್ಧ ಮಾತನಾಡುವುದಕ್ಕೆ ನನಗೆ ಯಾವುದೇ ಭಯವಿಲ್ಲ ಅಂತ ಖಡಕ್ ಆಗಿ ನುಡಿದಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (PoK) ಸ್ಮಶಾನವನ್ನಾಗಿ ಮಾಡಿದ್ದಾರೆ ಎಂದು ಪಾಕ್ ವಿರುದ್ಧ ಮಹಿಳೆ ಕಿಡಿಕಾರಿದ್ದಾರೆ. ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 63ನೇ ಅಧಿವೇಶನದಲ್ಲಿ ಬಾರಾಮುಲ್ಲಾದ ತಸ್ಲೀಮಾ ಮಾತನಾಡಿ, ಆ ಪ್ರದೇಶದಲ್ಲಿನ ಪ್ರತಿಭಟನೆಗಳ ವಿರುದ್ಧ ಪಾಕಿಸ್ತಾನ ನಡೆಸಿದ ದಮನಕಾರಿ ಕ್ರಮ ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತರಬೇತಿ ಮುಗಿಸಿ ವಾಪಸ್ ಬರುವಾಗ ದುರಂತ – ಅಮೆರಿಕದ ಮತ್ತೊಂದು F-16 ಯುದ್ಧವಿಮಾನ ಪತನ
ತಸ್ಲೀಮಾ ಅಖ್ತರ್ ಅವರು ಕಾಶ್ಮೀರದ ಭಯೋತ್ಪಾದನಾ ಸಂತ್ರಸ್ತರ ಸಂಘ (ATVK)ದೊಂದಿಗೆ ಸಂಬಂಧ ಹೊಂದಿರುವ ಸಾಮಾಜಿಕ-ರಾಜಕೀಯ ಕಾರ್ಯಕರ್ತೆ. ಜಿನೀವಾದಲ್ಲಿ ನಡೆದ UNHRC ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಿಒಕೆಯಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೂಲಭೂತ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಪ್ರತಿಯೊಂದು ಹತ್ಯೆಯ ಕುರಿತೂ ಸ್ವತಂತ್ರ ತನಿಖೆ ನಡೆಯಬೇಕು. ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಕ್ತ ಹಾಗೂ ನ್ಯಾಯಯುತವಾಗಿ ಪಡೆಯುವ ಅವಕಾಶವಿರಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಒತ್ತಾಯಿಸಿದ್ದಾರೆ.
ಸಭೆ ಬಳಿಕ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿ, ಪಾಕಿಸ್ತಾನವು ಎಂದಿಗೂ ಕಾಶ್ಮೀರಿಗಳ ಹಿತಾಸಕ್ತಿಯ ದೃಷ್ಟಿಯಿಂದ ಪ್ರಾಮಾಣಿಕವಾಗಿ ವರ್ತಿಸಲು ಸಾಧ್ಯವಿಲ್ಲ. ಮೊದಲು ಭಯೋತ್ಪಾದಕರನ್ನು ನುಸುಳಿಸುವ ಮೂಲಕ ಜಮ್ಮು-ಕಾಶ್ಮೀರವನ್ನು ಸ್ಮಶಾನವನ್ನಾಗಿ ಮಾಡಲು ಅವರು ಪ್ರಯತ್ನಿಸಿದರು. ಈಗ ಅಮಾಯಕ ಹಾಗೂ ನಿಶ್ಯಸ್ತ್ರ ಪ್ರತಿಭಟನಾಕಾರರನ್ನು ಕೊಲ್ಲುವ ಮೂಲಕ ಪಿಒಜೆಕೆ (PoJK) ಪ್ರದೇಶವನ್ನು ಸ್ಮಶಾನವನ್ನಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್ನಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ – ಟ್ರಂಪ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ!
ಪಾಕಿಸ್ತಾನ ಸರ್ಕಾರವು ನೂರಾರು ಕಾರ್ಯಕರ್ತರನ್ನು ಬಂಧಿಸಿತು. ಪ್ರಮುಖ ನಾಯಕರನ್ನು ವಶಕ್ಕೆ ಪಡೆಯಿತು. ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿತು. ಹಿಂಸಾತ್ಮಕ ಸಂಘರ್ಷಗಳಿಗೆ ಮುಂದಾಗಿ ಹತ್ತಾರು ಜನರ ಸಾವಿಗೆ ಕಾರಣವಾಯಿತು. ಇದು ಪಿಒಕೆ (PoK) ನಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಸಾರ್ವಜನಿಕ ಅಸಮಾಧಾನವನ್ನು ಬಹಿರಂಗಪಡಿಸಿದೆ ಎಂದು ತಿಳಿಸಿದ್ದಾರೆ.

