ಗಾಂಧಿನಗರ: 10,000 ರೂ. ಬಾಕಿ ವೇತನವನ್ನು ಮಾಲೀಕ ಕೊಡದಿದ್ದಕ್ಕೆ 24 ಕೋಟಿ ರೂ. ಮೌಲ್ಯದ ಜವಳಿ ಮಳಿಗೆಯನ್ನು ಮಾಜಿ ಉದ್ಯೋಗಿಯೊಬ್ಬ ಸುಟ್ಟು ಹಾಕಿದ ಘಟನೆ ಗುಜರಾತ್ನ (Gujarat) ಸೂರತ್ನಲ್ಲಿ (Surat) ನಡೆದಿದೆ. ಈ ಕೃತ್ಯಕ್ಕೆ ಆರೋಪಿ ಬಳಸಿದ್ದು ಕೇವಲ 150 ರೂ. ಮೌಲ್ಯದ ಪೆಟ್ರೋಲ್ ಹಾಗೂ 2 ಬೆಂಕಿ ಪೊಟ್ಟಣ!
ವಿನೋದ್ ಪಂಡಿತ್ ಸಾವ್ಲೆ ತನ್ನ ಮಾಜಿ ಮಾಲೀಕರ ಅಂಗಡಿಗೆ ಬೆಂಕಿ ಹಚ್ಚಿದ ಆರೋಪಿ. ಸೆ.8ರ ರಾತ್ರಿ ಶ್ಯಾಮ್ ಸಂಗಿನಿ ಜವಳಿ ಮಾರುಕಟ್ಟೆಯಲ್ಲಿ ಆರೋಪಿ ಬೆಂಕಿ ಹಚ್ಚಿದ್ದ. ಆರಂಭದಲ್ಲಿ ಇದು ಆಕಸ್ಮಿಕ ಘಟನೆ ಎಂದು ಭಾವಿಸಲಾಗಿತ್ತು. ಆದರೆ ತನಿಖೆ ವೇಳೆ, ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬಟ್ಟೆಯ ಪಾರ್ಸೆಲ್ಗಳಿಗೆ ಮುಖ ಮುಚ್ಚಿಕೊಂಡ ವ್ಯಕ್ತಿಯೊಬ್ಬ ಬೆಂಕಿ ಹಚ್ಚುತ್ತಿರುವುದು ಗೊತ್ತಾಗಿತ್ತು. ಈ ಬೆಂಕಿ ಕನಿಷ್ಠ 14 ಅಂಗಡಿಗಳಿಗೆ ಹರಡಿ, 24 ಕೋಟಿ ರೂ. ಮೌಲ್ಯದ ಬಟ್ಟೆಯನ್ನು ಭಸ್ಮ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ
ಅಂಗಡಿಯನ್ನು ಸುಟ್ಟ ನಂತರ ಆರೋಪಿ ಖಾತು ಶ್ಯಾಮ್ ಮತ್ತು ಅಯೋಧ್ಯೆಗೆ ಪರಾರಿಯಾಗಿದ್ದ. ಆತ ಮತ್ತೆ ವಾಪಸಾದಾಗ ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸಾವ್ಲೆ, ಏ.2026 ರಿಂದ ಅಂಗಡಿ ಸಂಖ್ಯೆ 639 ರಲ್ಲಿ ಲೆಕ್ಕಪರಿಶೋಧಕನಾಗಿ ಮೂರು ತಿಂಗಳ ಕಾಲ ಕೆಲಸ ಮಾಡಿದ್ದ. ಲೆಕ್ಕಪತ್ರ ನಿರ್ವಹಣೆಯ ಕೆಲಸವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದ ಕಾರಣ ಆತನನ್ನು ಜೂನ್ನಲ್ಲಿ ಕೆಲಸದಿಂದ ತೆಗೆಯಲಾಗಿತ್ತು. ಇದಾದ ಬಳಿಕ ಆತ ಮಾಲೀಕನಿಂದ 10,000 ರೂ. ಬರಬೇಕಿದೆ ಎಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವ್ಲೆ ಹತ್ತಿರದ ಹಳ್ಳಿಯ ಪೆಟ್ರೋಲ್ ಪಂಪ್ನಿಂದ ಪ್ಲಾಸ್ಟಿಕ್ ಚೀಲ ಮತ್ತು ಬಾಟಲಿಯಲ್ಲಿ ಸುಮಾರು 150 ರೂ. ಮೌಲ್ಯದ ಪೆಟ್ರೋಲ್ ಖರೀದಿಸಿದ್ದ. ಸೆಪ್ಟೆಂಬರ್ 8 ರ ರಾತ್ರಿ 9 ಗಂಟೆ ಸುಮಾರಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದ. ಅಲ್ಲಿ ಐದನೇ ಮಹಡಿಯ ಮೆಟ್ಟಿಲುಗಳ ಬಳಿ ಅಡಗಿಕೊಂಡಿದ್ದ. ರಾತ್ರಿ 12:30 ರ ಸುಮಾರಿಗೆ, ಮಾರುಕಟ್ಟೆ ಜನಸಂಚಾರವಿಲ್ಲದೆ ಖಾಲಿಯಾದಾಗ ಹೋಗಿ ಬೆಂಕಿ ಹಚ್ಚಿದ್ದ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದರು. ಬಳಿಕ ಈ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದರು. ಎಫ್ಐಆರ್ ದಾಖಲಾದ ಬಗ್ಗೆ ಹಾಗೂ ಬೆಂಕಿ ಹಚ್ಚಿ ಓಡುತ್ತಿದ್ದ ದೃಶ್ಯ ಸೆರೆಯಾದ ವಿಡಿಯೋ ವೈರಲ್ ಆದ ಬಳಿಕ ಆರೋಪಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಪತ್ನಿ ಹಾಗೂ ಮಗುವಿನೊಂದಿಗೆ ಸೂರತ್ನಿಂದ ರಾಜಸ್ಥಾನದ ಖಾತು ಶ್ಯಾಮ್ ದೇವಾಲಯಕ್ಕೆ ಮತ್ತು ನಂತರ ಅಯೋಧ್ಯೆಗೆ ತೆರಳಿದ್ದ. ಬಳಿಕ ಸೂರತ್ಗೆ ಹಿಂತಿರುಗಿದ ನಂತರ ದಿಂಡೋಲಿಯ ಫ್ಲವರ್ ಗಾರ್ಡನ್ ಬಳಿ ಕ್ರೈಮ್ ಬ್ರಾಂಚ್ ತಂಡವು ಸಾವ್ಲೆನನ್ನು ಬಂಧಿಸಿದೆ.
ಸಾವ್ಲೆ ಪೆಟ್ರೋಲ್ ಹೇಗೆ ಖರೀದಿಸಿದ. ಪೆಟ್ರೋಲ್ ಪಂಪ್ ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಕೂಡ ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಿರ್ಲಕ್ಷ್ಯ ಕಂಡುಬಂದಲ್ಲಿ ಪಂಪ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಆತ ಒಬ್ಬನೇ ಈ ಅಗ್ನಿ ಅನಾಹುತದ ಸಂಚು ರೂಪಿಸಿದ್ದನೇ ಅಥವಾ ಬೇರೆ ಯಾರಾದರೂ ಇದರಲ್ಲಿ ಭಾಗಿಯಾಗಿದ್ದರೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಗಣೇಶೋತ್ಸವ ಅನ್ನದಾನಕ್ಕೆ ಮಾಡಿದ್ದ ಸಾಂಬಾರ್ಗೆ ಬಿದ್ದು ಮಹಿಳೆ ಸಾವು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

