ಲಕ್ನೋ: ವಿದ್ಯಾರ್ಥಿಗಳ ಮುಂದೆಯೇ ಮಾಜಿ ಪ್ರಿಯಕರ ಶಿಕ್ಷಕಿಗೆ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ (Uttara Pradesh) ಲಖಿಂಪುರ ಖೇರಿಯಲ್ಲಿ ನಡೆದಿದೆ.
ಸೋಮವಾರ (ಸೆ.21) ಲಖಿಂಪುರ ಖೇರಿಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸಾದರ್ ಕೊತ್ವಾಲಿಯ ಹಿದಾಯತ್ ನಗರ ನಿವಾಸಿ ನಿಶಾತ್ ಫಾತಿಮಾ (26) ಹಾಗೂ ಆರೋಪಿಯನ್ನು ಮೊಹಮ್ಮದ್ ಸೌದ್ (28) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಫಾತಿಮಾ ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆರೋಪಿ ಮೃತಳ ಮಾಜಿ ಪ್ರಿಯಕರ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ ಎಚ್ಚರಿಕೆ – ಬೆಂಗಳೂರು ಸೇರಿ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಣೆ
ಘಟನೆ ನಡೆದ ದಿನ ಬೆಳಿಗ್ಗೆ ಸುಮಾರು 11:30ಕ್ಕೆ ಆರೋಪಿ ಶಿಕ್ಷಕಿ ನಿಶಾತ್ ಫಾತಿಮಾ ಅವರನ್ನು ಭೇಟಿಯಾಗಲು ಶಾಲೆಗೆ ಬಂದಿದ್ದ. ಬಳಿಕ ಶಾಲೆಯ ಕೋಣೆಯೊಂದಕ್ಕೆ ತೆರಳಿ ನಿಶಾತ್ಳ ಕೈಹಿಡಿದು ಮೇಲ್ಮಹಡಿಗೆ ಕರೆದುಕೊಂಡು ಹೋಗಿ ಮಾತನಾಡುತ್ತಿದ್ದ. ಇಬ್ಬರು ಪರಸ್ಪರ ಮಾತನಾಡುತ್ತಿದ್ದ ವೇಳೆ ಏಕಾಏಕಿ ಬ್ಯಾಗ್ನಿಂದ ಪಿಸ್ತೂಲ್ ತೆಗೆದು, ಅಲ್ಲಿದ್ದ ವಿದ್ಯಾರ್ಥಿಗಳ ಮುಂದೆಯೇ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಆನಂತರ ಬಂಧನಭೀತಿಯಲ್ಲಿ ಅದೇ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಖೇರಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಗರ್ಗ್ ಅವರು ತಿಳಿಸಿದ್ದಾರೆ.ಇದನ್ನೂ ಓದಿ: 220 ಔಷಧಗಳು ನಕಲಿ – ಡ್ರಗ್ ಕಂಟ್ರೋಲ್ ರಿಪೋರ್ಟ್ನಲ್ಲಿ ಬೆಚ್ಚಿಬೀಳಿಸುವ ಮಾಹಿತಿ
ಮಾಹಿತಿ ತಿಳಿಯುತಿದ್ದಂತೆ ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿದ್ದು, ಶಾಲಾ ಆವರಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೊಲೀಸರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಶಾಲೆಯಿಂದ ಹೊರಕಳುಹಿಸಿದ್ದು, ಸದ್ಯ ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡವು ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದೆ. ಘಟನೆಯ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೃತ್ಯಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪ್ರತ್ಯಕ್ಷದರ್ಶಿಗಳು ಮತ್ತು ಇತರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಕೃತ್ಯದ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಮೃತರ ಕುಟುಂಬ ಸದಸ್ಯರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಲಂಬೋದರನಿಗಾಗಿ ಸಾಧ್ವಿ ಆದ ನಟಿ ಮೇಘನಾ ಗಾಂವ್ಕರ್

