– 100 ದಿನದೊಳಗೆ ವರದಿ ಸಲ್ಲಿಕೆಗೆ ಸೂಚನೆ
ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಈಗ ಎಸ್‌ಐಟಿ ತೆಕ್ಕೆಗೆ ಸೇರಿದೆ. ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ (Division Bench of Dharwad High Court) ಆದೇಶಿಸಿದೆ.
ಪ್ರಕರಣವನ್ನ ಸಿಬಿಐ (CBI) ವಹಿಸುವಂತೆ ಕೋರಿ ದೂರುದಾರ ಮಂಜುನಾಥ್ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ, ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಸೋಮವಾರ (ಸೆ.21) ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ, ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ತಂಡ ರಚಿಸಿ, 100 ದಿನಗಳ ಒಳಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ. ಇದನ್ನೂ ಓದಿ: ದಪ್ಪ ಚರ್ಮದ ಸರ್ಕಾರದ ಚಳಿ ಬಿಡಿಸುತ್ತೇವೆ, ಮತ್ತೊಂದು ವಿಕೆಟ್ ಬೀಳುವ ಭಯ: ಆಶೋಕ್
ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ಡಿಜಿಪಿ ಅಲೋಕ್ ಕುಮಾರ್, ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಷಾಲ್ ಚೋಕ್ಸಿ ಹಾಗೂ ಕ್ಷಮಾ ಮಿಶ್ರಾ ಇದ್ದಾರೆ. ಒಂದು ವಾರದಲ್ಲಿ ಪ್ರಕರಣವನ್ನ ಸಿಐಡಿ ಎಸ್‌ಐಟಿಗೆ ಹಸ್ತಾಂತರ ಮಾಡಬೇಕು. ಸಿಐಡಿಯಲ್ಲಿ ನಡೆಯುತ್ತಿರುವ ತನಿಖೆಯ ಎಲ್ಲಾ ಮಾಹಿತಿ, ದಾಖಲೆಗಳನ್ನು ಎಸ್‌ಐಟಿಗೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದೆ.
30 ದಿನಕ್ಕೊಮ್ಮೆ ಹೈಕೋರ್ಟ್‌ಗೆ ವರದಿ ನೀಡಬೇಕು ಎಂದಿರುವ ಹೈಕೋರ್ಟ್ 17 ನಿಯಮಗಳ ಹಾಕಿದ್ದು, ಆ ನಿಯಮದಂತೆ ತನಿಖೆಗೆ ಆದೇಶಿಸಿದೆ. ಜೊತೆಗೆ 2027 ಜನವರಿ 17 ರಂದು ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಬಗ್ಗೆ ಹೈಕೋರ್ಟ್ ಮಾಹಿತಿ ನೀಡಿದೆ.ಇದನ್ನೂ ಓದಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ – ಜೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ
ಎಸ್‌ಐಟಿ ತನಿಖೆಗೆ ಹೈಕೋರ್ಟ್ ನಿರ್ದೇಶನಗಳು:
- ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳು ಹಾಗೂ ತನಿಖೆಯ ಸಂದರ್ಭದಲ್ಲಿ ಹೊರಹೊಮ್ಮುವ ಪ್ರಕರಣಗಳನ್ನು ಎಸ್‌ಐಟಿ ತನಿಖೆ ನಡೆಸಬೇಕು
- ತನಿಖೆಯು ಈಗ ಮಿತಿಗೊಳಿಸಿರುವುದಕ್ಕೆ ಮಾತ್ರ ಸೀಮಿತವಾಗಬಾರದು
- ತನಿಖೆಯ ವ್ಯಾಪ್ತಿ ವಿಸ್ತರಿಸಿದರೆ ಅದಕ್ಕೂ ಎಸ್‌ಐಟಿ ಮುಂದಾಗಬೇಕು
- ತಿಂಗಳಿಗೊಮ್ಮೆ ವರದಿಯನ್ನು ರಾಜ್ಯ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಸಲ್ಲಿಸಬೇಕು
- ಭೌತಿಕವಾಗಿ ನ್ಯಾಯಾಲಯದಲ್ಲಿ ಹಾಜರಿದ್ದು, ಅಗತ್ಯ ಸಹಕಾರ ಮತ್ತು ನೆರವನ್ನು ಪಿಪಿ ನೀಡಬೇಕು.
- ಸಿಐಡಿಯು ಸಂಗ್ರಹಿಸಿರುವ ಎಲ್ಲಾ ದಾಖಲೆ ಎಸ್‌ಐಟಿಗೆ ಒಂದು ವಾರದಲ್ಲಿ ವರ್ಗಾಯಿಸಬೇಕು
- ಸಿಐಡಿ ಮತ್ತು ವ್ಯಾಪ್ತಿ ಹೊಂದಿರುವ ಪೊಲೀಸರು ಎಸ್‌ಐಟಿ ಕೋರುವ ಎಲ್ಲಾ ನೆರವು ಒದಗಿಸಬೇಕು
- ಸರ್ಕಾರದ ಎಲ್ಲಾ ಇಲಾಖೆಗಳು, ತನಿಖಾ ಸಂಸ್ಥೆಗಳು, ಸಾರ್ವಜನಿಕ ಪ್ರಾಧಿಕಾರಗಳು, ಸಂಬಂಧಿತ ಅಧಿಕಾರಿಗಳು ಸಂಪೂರ್ಣವಾದ ಸಹಕಾರ ಎಸ್‌ಐಟಿಗೆ ನೀಡಬೇಕು
- ತನಗೆ ಅಗತ್ಯವಾದ ವಿಧಿ ವಿಜ್ಞಾನ ಪ್ರಯೋಗಾಲಯದ ಸೌಲಭ್ಯ, ಆರ್ಥಿಕ, ತಾಂತ್ರಿಕ ಮತ್ತು ಇತರೆ ವಿಶೇಷ ನೆರವು ಪಡೆಯಲು ಎಸ್‌ಐಟಿ ಸ್ವತಂತ್ರವಾಗಿದೆ
- ಎಸ್‌ಐಟಿಯು ಸ್ವತಂತ್ರ, ಪಾರದರ್ಶಕ ಮತ್ತು ಯಾವುದೇ ಪ್ರಭಾವಗಳಿಗೆ ಒಳಗಾಗದೇ ತನಿಖೆ ನಡೆಸಬೇಕು
- ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ತನಿಖೆಯಲ್ಲಿ ಮೂಗು ತೂರಿಸಬಾರದು, ಪ್ರಭಾವ ಬೀರಲು ಯತ್ನಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ
- ಇ.ಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಕೇಸ್ ದಾಖಲಿಸಿದೆ ಅಂತ ಆದೇಶದಲ್ಲಿ ಉಲ್ಲೇಖಿಸಿದ ಪೀಠ
- ಪ್ರಕರಣ ರದ್ದತಿ ಕೋರಿರುವ ಅರ್ಜಿಗಳನ್ನು ಎಸ್‌ಐಟಿ ವರದಿ ಪರಿಗಣಿಸಿ ನಿರ್ಧರಿಸಲಾಗುವುದು
- ಆ ಅರ್ಜಿಗಳು ವಿಚಾರಣೆಗೆ ಬಾಕಿ ಉಳಿಯಲಿವೆ ಎಂದು ಆದೇಶಿಸಿದ ಪೀಠ

