ಬೆಂಗಳೂರು: ಪಶ್ಚಿಮ ಘಟ್ಟ(Western Ghats) ಸಂರಕ್ಷಣೆ ವಿಚಾರದಲ್ಲಿ ಎದುರಾಗಿರುವ ಪ್ರಸ್ತುತ ಬಿಕ್ಕಟ್ಟಿಗೆ ಅಂದಿನ ಯುಪಿಎ ಸರ್ಕಾರ (UPA Govt) ರಚಿಸಿದ ಮಾಧವ ಗಾಡ್ಗೀಳ್(Madhav Gadgil) ವರದಿಯೇ ಮೂಲ ಕಾರಣ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್(R Ashok) ಆರೋಪಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಕುರಿತು ವಿಧಾನಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವರದಿಯ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸುವುದರ ಜತೆಗೆ ರಾಜ್ಯ ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದರು.
ತಾಪಿ ನದಿಯಿಂದ ಕನ್ಯಾಕುಮಾರಿವರೆಗೆ ಹರಡಿರುವ 1,400 ಕಿ.ಮೀ ಉದ್ದದ ಪಶ್ಚಿಮ ಘಟ್ಟವು 40 ಲಕ್ಷ ಟನ್ ಕಾರ್ಬನ್ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, 320ಕ್ಕೂ ಹೆಚ್ಚು ಜೀವಪ್ರಭೇದಗಳು ಹಾಗೂ 75ಕ್ಕೂ ಹೆಚ್ಚು ಉಭಯಚರ ಪ್ರಭೇದಗಳಿಗೆ ಆಶ್ರಯ ತಾಣವಾಗಿದೆ. ಇಲ್ಲಿನ 39 ತಾಣಗಳು ಯುನೆಸ್ಕೋ ಪಟ್ಟಿಗೆ ಸೇರಿವೆ. ಈ ಪರಿಸರ ಉಳಿಯಬೇಕು ಎಂಬುದು ಪರಿಸರವಾದಿಗಳ ವಾದ. ಆದರೆ 2010ರಲ್ಲಿ ಯುಪಿಎ ಸರ್ಕಾರದ ಅರಣ್ಯ ಸಚಿವರಾಗಿದ್ದ ಜೈರಾಮ್ ರಮೇಶ್(Jairam Ramesh) ಅವರು ಮಾಧವ ಗಾಡ್ಗೀಳ್ ನೇತೃತ್ವದಲ್ಲಿ 15 ಸದಸ್ಯರ ಸಮಿತಿ ರಚಿಸಿದ್ದರು. ಸುಪ್ರೀಂ ಕೋರ್ಟ್ ಸೂಚಿಸದಿದ್ದರೂ ಯುಪಿಎ ಸರ್ಕಾರವೇ ಈ ಸಮಿತಿ ರಚಿಸಿತ್ತು ಎಂದು ಅಶೋಕ್ ವಿವರಿಸಿದರು.
ಚರ್ಚೆಯ ಮಧ್ಯೆ ಸಚಿವ ಬಸವರಾಜ ರಾಯರೆಡ್ಡಿ ಅವರು ಗಾಡ್ಗೀಳ್ ವರದಿ ಬಗ್ಗೆ ಚರ್ಚೆ ಅನವಶ್ಯಕ ಎಂದು ಮಧ್ಯಪ್ರವೇಶಿಸಿದಾಗ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಗೋವಾ ಫೌಂಡೇಶನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಗಾಡ್ಗೀಳ್ ವರದಿ ಜಾರಿಗೆಯೇ ಹೊರತು ಕಸ್ತೂರಿ ರಂಗನ್ ವರದಿಯ ಜಾರಿಗೆ ಅಲ್ಲ. ಹೀಗಾಗಿ ಗಾಡ್ಗೀಳ್ ವರದಿಯೇ ಇಡೀ ಸಮಸ್ಯೆಗೆ ಮೂಲ. ಈ ಚರ್ಚೆಯೇ ಅನವಶ್ಯಕ ಎಂದಾದರೆ ಸಿಎಂ ವಿಶೇಷ ಚರ್ಚೆ ಕರೆದಿರುವುದೂ ಅನವಶ್ಯಕವೇ? ಎಂದು ಪ್ರಶ್ನಿಸಿದರು. ಅಲ್ಲದೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನಿಮ್ಮ ಖಾತೆಯನ್ನು ರಾಯರೆಡ್ಡಿಗೆ ನೀಡಿ ಇಬ್ಬರೂ ಅದಲು-ಬದಲು ಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದರು.
ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್(Kasturirangan Report) ಎರಡೂ ವರದಿಗಳು ರಾಜ್ಯದ 10 ಜಿಲ್ಲೆಗಳಿಗೆ ಅತ್ಯಂತ ಮಾರಕವಾಗಿವೆ ಎಂದ ಅಶೋಕ್, ಈ ವರದಿ ಜಾರಿಯಾದರೆ ಯಾವುದೇ ವಿದ್ಯುತ್ ಸ್ಥಾವರ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ವರದಿಯನ್ವಯ ರಾಜ್ಯದ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ಎಂದು ಗುರುತಿಸಲಾಗಿದೆ. ಇದರಲ್ಲಿ 10 ಜಿಲ್ಲೆಗಳ 1,540 ಗ್ರಾಮಗಳು ಹಾಗೂ ಕಾಡಂಚಿನ ಪ್ರದೇಶಗಳು ಒಳಪಡುತ್ತವೆ. ಸಮಿತಿಯು ಕೇವಲ ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿ, ಹಸಿರು ಕಂಡ ಜಾಗಗಳನ್ನೆಲ್ಲ—ಕಾಫಿ ತೋಟಗಳನ್ನೂ ಒಳಗೊಂಡಂತೆ—ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಇದು ಜನಸಾಮಾನ್ಯರಿಗೆ ಮತ್ತು ರೈತರಿಗೆ ದೊಡ್ಡ ಸಮಸ್ಯೆಯಾಗಲಿದೆ. ಇದರ ಜತೆಗೆ ಈಗಾಗಲೇ ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಜಟಾಪಟಿ ನಡೆಯುತ್ತಿದ್ದು, ಮೊದಲು ಈ ಎರಡೂ ಇಲಾಖೆಗಳ ಮಧ್ಯೆ ಸಮನ್ವಯ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಕ್ಕೆ ಆರ್. ಅಶೋಕ್ ನೀಡಿದ 3 ಪ್ರಮುಖ ಸಲಹೆಗಳು:
– ಕಸ್ತೂರಿ ರಂಗನ್ ಸಮಿತಿ ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿದೆ. ಕರ್ನಾಟಕ ಸರ್ಕಾರವು ತಕ್ಷಣವೇ ವಾಸ್ತವಿಕ ಸ್ಥಿತಿ ತಿಳಿಯಲು ಭೌತಿಕ ಸಮೀಕ್ಷೆ ನಡೆಸಬೇಕು. ಇದೇ ರೀತಿ ಮಾಡಿ ಕೇರಳ ಸರ್ಕಾರವು ತನ್ನ ಬಫರ್ ಜೋನ್ ಅನ್ನು ಶೂನ್ಯ ಮಾಡಿಕೊಂಡಿದೆ.
– ವಾಸ್ತವ ಸ್ಥಿತಿಯ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಈ ಸಂಬಂಧ ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ವಿಪಕ್ಷವೂ ಸಿದ್ಧವಿದೆ.
– ಅತ್ಯುತ್ತಮ ವಕೀಲರ ತಂಡವನ್ನು ರಚಿಸಿ ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ಕಾನೂನು ಸಮರ ನಡೆಸಬೇಕು. ಈ ಮೂಲಕ ರೈತರ ಮತ್ತು ಸ್ಥಳೀಯ ಜನರ ಹಿತರಕ್ಷಣೆ ಮಾಡಬೇಕು.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಪಶ್ಚಿಮ ಘಟ್ಟಗಳ ಪರಿಸರ ನಾಶವನ್ನು ತಡೆಯಲು ಮೊದಲು 2011 ರಲ್ಲಿ ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಗಾಡ್ಗೀಳ್ ವರದಿ ತೀರಾ ಕಠಿಣವಾಗಿದೆ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ ಎಂದು ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳು ವಿರೋಧಿಸಿದಾಗ, ಆ ವರದಿಯನ್ನು ಪರಿಶೀಲಿಸಿ ಪ್ರಾಯೋಗಿಕ ಪರಿಹಾರ ಹುಡುಕಲು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸಲಾಯಿತು. ಅಂದರೆ ಗಾಡ್ಗೀಳ್ ವರದಿಯ ಮುಂದುವರಿದ ಅಥವಾ ಮಾರ್ಪಡಿಸಿದ ರೂಪವೇ ಕಸ್ತೂರಿ ರಂಗನ್ ವರದಿಯಾಗಿದೆ.

