ಹೈದರಾಬಾದ್: ಗಣೇಶ ವಿಸರ್ಜನಾ ಮೆರವಣಿಗೆ (Ganesh Procession) ವೇಳೆ ಅಪಾರ್ಟ್ಮೆಂಟ್ ಕಟ್ಟಡವೊಂದರ ಏಳನೇ ಮಹಡಿಯಿಂದ ಮಾಂಸವನ್ನು ಎಸೆದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
ಈ ಘಟನೆಯು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ. ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ಚಾರ್ಮಿನಾರ್ ವಲಯದ ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿವೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಸಾವು
ಘಟನೆಗೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ನ ಮೂವರು ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಚಾರ್ಮಿನಾರ್ ವಲಯದ ಡಿಸಿಪಿ ಖರೆ ಕಿರಣ್ ತಿಳಿಸಿದ್ದಾರೆ. ಮೊಹಮ್ಮದ್ ಇಮ್ರಾನ್ ಖುರೇಷಿ, ಅರ್ಷಿಯಾ ಬೇಗಂ ಮತ್ತು ಸಬೀನಾ ಬಂಧಿತರು.
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳು ಅಥವಾ ಪರಿಶೀಲಿಸದ ಮಾಹಿತಿಯನ್ನು ನಂಬಬೇಡಿ. ಇತರರಿಗೆ ಹರಡದಂತೆ ಡಿಸಿಪಿ (DCP) ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

