ಬಳ್ಳಾರಿ: ಗಣೇಶ ವಿಸರ್ಜನಾ ಮೆರವಣಿಗೆಗೆ(Ganesh Procession) ಹೂವಿನಹಡಗಲಿಯ ಇಸ್ಲಾಂಪೇಟೆಯಲ್ಲಿ ಅಡ್ಡಿಪಡಿಸಿದ ಘಟನೆಯ ನಂತರ, ಜಿಲ್ಲಾಡಳಿತ ಹಾಗೂ ಮುಖಂಡರ ಸಂಧಾನ ಸಭೆಯ ಒಮ್ಮತದ ತೀರ್ಮಾನದಂತೆ ಇಂದು ಪಟ್ಟಣದ ಇಸ್ಲಾಂಪೇಟೆ ಪಕ್ಕದಲ್ಲಿರುವ ಕೊರವರ ಓಣಿಯಲ್ಲಿ ಗಣೇಶ ಮೂರ್ತಿಯನ್ನು ಪುನಃ ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾಯಿತು.
ಸ್ಥಳೀಯ ಶಾಸಕ ಕೃಷ್ಣ ನಾಯಕ್ ಹಾಗೂ ಹಿರೇಹಡಗಲಿಯ ಅಭಿನವ ಹಾಲಶ್ರೀಗಳ ನೇತೃತ್ವದಲ್ಲಿ ಗಣಪತಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು. ಇದನ್ನೂ ಓದಿ: 13 ಕೋಟಿ ಐಷಾರಾಮಿ ಕಾರ್ ವಿವಾದ; ಮೈಥಿಲಿ ಠಾಕೂರ್ ಪರ ನಿಂತ ಕಂಗನಾ
ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಇಸ್ಲಾಂಪೇಟೆ ಮಾರ್ಗವಾಗಿ ಸಾಗುತ್ತಿದ್ದಾಗ, ಮುಸ್ಲಿಂ ಸಮುದಾಯದ ಕೆಲ ಯುವಕರು ಹಾಗೂ ಮಹಿಳೆಯರು ರಸ್ತೆ ತಡೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಹಿಂದೂ(Hindu) ಮತ್ತು ಮುಸ್ಲಿಂ(Muslim) ಸಮುದಾಯದ ಪ್ರಮುಖ ಮುಖಂಡರ ಶಾಂತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಎರಡೂ ಸಮುದಾಯಗಳ ನಡುವೆ ಸೌಹಾರ್ದಯುತ ಒಮ್ಮತ ಮೂಡಿದ ಹಿನ್ನೆಲೆಯಲ್ಲಿ, ಇಂದು ಕೊರವರ ಓಣಿಯಲ್ಲಿ ಮತ್ತೆ ವಿಘ್ನವಿನಾಯಕನ ಪ್ರತಿಷ್ಠಾಪನೆ ಕಾರ್ಯ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಇದೀಗ ತೀರ್ಮಾನದಂತೆ ಬರುವ ಸೆಪ್ಟೆಂಬರ್ 28ರಂದು ಅದ್ಧೂರಿ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಲು ಸಿದ್ಧತೆಗಳು ನಡೆದಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

