ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ರಚಿಸಲಾಗಿದ್ದ ಡಾ. ಕಸ್ತೂರಿರಂಗನ್ ಸಮಿತಿ(Kasturirangan Report) ವರದಿಯು ಮಲೆನಾಡು(Malnad) ಹಾಗೂ ಕರಾವಳಿ(Coastal Karnataka) ಭಾಗದ ಜನರಲ್ಲಿ ತೀವ್ರ ಕಳವಳ ಮೂಡಿಸಿದ್ದು, ವರದಿ ಜಾರಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಬಾಹ್ಯಾಕಾಶ ತಜ್ಞ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ನೇತೃತ್ವದ ಸಮಿತಿಯು 2013ರಲ್ಲಿ ಸಲ್ಲಿಸಿದ್ದ ಈ ವರದಿಯು ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯಗಳಲ್ಲಿ ಮತ್ತೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವರದಿಯಲ್ಲಿ ಏನಿದೆ?
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಒಟ್ಟು 6 ರಾಜ್ಯಗಳಲ್ಲಿ ಹರಡಿರುವ 1,64,280 ಚದರ ಕಿಲೋಮೀಟರ್ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಶೇ. 37ರಷ್ಟನ್ನು (ಅಂದರೆ 56,825.8 ಚ.ಕಿ.ಮೀ.) ‘ಪರಿಸರ ಸೂಕ್ಷ್ಮ ಪ್ರದೇಶ’ (Eco-Sensitive Area – ESA) ಎಂದು ಘೋಷಿಸಲು ಸಮಿತಿ ಶಿಫಾರಸು ಮಾಡಿದೆ.
ಕರ್ನಾಟಕದಲ್ಲಿರುವ ಒಟ್ಟು 44,448 ಚ.ಕಿ.ಮೀ. ಪಶ್ಚಿಮ ಘಟ್ಟ ವ್ಯಾಪ್ತಿಯ ಪೈಕಿ ಬರೋಬ್ಬರಿ 20,668 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಈ ವಲಯದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಹಾಗೂ ಮಾಲಿನ್ಯಕಾರಕ ‘ಕೆಂಪು ವರ್ಗ’ದ ಕೈಗಾರಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲು ಸೂಚಿಸಲಾಗಿದೆ.
ಇದರೊಂದಿಗೆ ಟೌನ್‌ಶಿಪ್‌ಗಳು, ಬೃಹತ್ ಕಟ್ಟಡ ನಿರ್ಮಾಣ, ಉಷ್ಣವಿದ್ಯುತ್, ಜಲವಿದ್ಯುತ್ ಹಾಗೂ ಪವನಶಕ್ತಿ ಯೋಜನೆಗಳಿಗೂ ನಿರ್ಬಂಧ ಹೇರಲು ಶಿಫಾರಸು ಮಾಡಲಾಗಿದ್ದು, ವಾಣಿಜ್ಯ ಪ್ರವಾಸೋದ್ಯಮಕ್ಕೂ ಕಠಿಣ ಕಡಿವಾಣ ಹಾಕಲು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆತಂಕಕ್ಕೆ ಕಾರಣಗಳೇನು?
ವರದಿಯ ಅನ್ವಯ ರಾಜ್ಯದ 10 ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಒಟ್ಟು 1,439 ಹಳ್ಳಿಗಳು ಪರಿಸರ ಸೂಕ್ಷ್ಮ ವಲಯದ ಪಟ್ಟಿಗೆ ಸೇರುತ್ತವೆ. ಈ ವರದಿ ಯಥಾವತ್ತಾಗಿ ಜಾರಿಯಾದರೆ ಮಲೆನಾಡು ಮತ್ತು ಕರಾವಳಿಯ ಜನಜೀವನ ಅಸ್ತವ್ಯಸ್ತಗೊಳ್ಳುವ ಭೀತಿ ಎದುರಾಗಿದೆ
ಸೂಕ್ಷ್ಮ ವಲಯ ಘೋಷಣೆಯಿಂದ ಮಾನವ ಹಸ್ತಕ್ಷೇಪಕ್ಕೆ ಕಠಿಣ ನಿಯಮಗಳು ಅನ್ವಯವಾಗಲಿದ್ದು, ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಹಾಗೂ ದೈನಂದಿನ ಜೀವನೋಪಾಯಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಅಡಿಕೆ, ಕಾಫಿ, ರಬ್ಬರ್, ಕಾಳುಮೆಣಸು ಬೆಳೆಗಾರರಿಗೆ ಕೀಟನಾಶಕ, ರಸಗೊಬ್ಬರ ಬಳಕೆ ಹಾಗೂ ಹೊಸದಾಗಿ ತೋಟ ವಿಸ್ತರಿಸಲು ಕಠಿಣ ಪರಿಸರ ನಿಯಮಗಳ ಅಡ್ಡಿ ಉಂಟಾಗುವ ಆತಂಕವಿದೆ.
ಗ್ರಾಮಗಳು ನಿರ್ಬಂಧಿತ ವಲಯಕ್ಕೆ ಒಳಪಡುವುದರಿಂದ ಜನವಸತಿ ಪ್ರದೇಶಗಳ ರಕ್ಷಣೆ ಕಷ್ಟಸಾಧ್ಯವಾಗಲಿದ್ದು, ಜನರನ್ನು ಒಕ್ಕಲೆಬ್ಬಿಸಿ ಸ್ಥಳಾಂತರಿಸಬಹುದೆಂಬ ಭಯ ಸ್ಥಳೀಯರನ್ನು ಕಾಡುತ್ತಿದೆ. ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ವಿರುದ್ಧ ನಿರ್ಣಯಕ್ಕೆ ಸರ್ಕಾರದ ಸಜ್ಜು, ಕಲಾಪ ವಿಸ್ತರಣೆಗೆ ಬಿಜೆಪಿ ಪಟ್ಟು
ಸ್ಥಳೀಯ ವಾಸ್ತವ ಸ್ಥಿತಿ ಹಾಗೂ ಭೌಗೋಳಿಕ ಪರಿಸ್ಥಿತಿಯನ್ನು ಸಮರ್ಪಕವಾಗಿ ಅಧ್ಯಯನ ಮಾಡದೆ ಉಪಗ್ರಹ ಆಧಾರಿತ ಸಮೀಕ್ಷೆಯನ್ನಷ್ಟೇ ನೆಚ್ಚಿಕೊಂಡು ತಯಾರಿಸಲಾಗಿರುವ ಈ ವರದಿಯು ಸಂಪೂರ್ಣ ‘ಅವೈಜ್ಞಾನಿಕ’ ಎಂದು ಸ್ಥಳೀಯ ನಾಗರಿಕರು ಹಾಗೂ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಈ ಪ್ರದೇಶಗಳು ಪರಿಸರ ಸೂಕ್ಷ್ಮ ವಲಯವಾದರೆ ಜಮೀನು ಪರಭಾರೆ, ಮಾರಾಟ ಅಥವಾ ಬ್ಯಾಂಕ್ ಸಾಲ ಪಡೆಯುವ ಪ್ರಕ್ರಿಯೆ ಕಷ್ಟಕರವಾಗಿ ಆಸ್ತಿ ಮೌಲ್ಯ ಕುಸಿಯಬಹುದು ಎಂಬ ಭಯವಿದೆ.
ಈಗ ಅಧಿಸೂಚನೆ ಹೊರಡಿಸಿದ್ದು ಯಾಕೆ?
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ ಮತ್ತೆ ಕರಡು ಅಧಿಸೂಚನೆಯನ್ನು (Draft Notification) ಹೊರಡಿಸಿದೆ.
ನಿಯಮಗಳ ಪ್ರಕಾರ, ಯಾವುದೇ ಕರಡು ಅಧಿಸೂಚನೆ ಹೊರಡಿಸಿದ ನಂತರ ನಿರ್ದಿಷ್ಟ ಕಾಲಮಿತಿಯೊಳಗೆ (ಸಾಮಾನ್ಯವಾಗಿ 545 ದಿನಗಳು) ಅದನ್ನು ಅಂತಿಮಗೊಳಿಸದಿದ್ದರೆ, ಅದು ತಾನಾಗಿಯೇ ರದ್ದಾಗುತ್ತದೆ. ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಗಳು ಅಂತಿಮವಾಗದೆ ಕಾಲಮಿತಿ ಮುಗಿದಿದ್ದರಿಂದ, ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ಜೀವಂತವಾಗಿಡಲು ಕೇಂದ್ರ ಸರ್ಕಾರವು ಹೊಸದಾಗಿ ಕರಡು ಅಧಿಸೂಚನೆಯನ್ನು ಮರುಜಾರಿ ಮಾಡಬೇಕಾಗುತ್ತದೆ.
ಕರ್ನಾಟಕ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳು (ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಗುಜರಾತ್) ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಸತತವಾಗಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿವೆ. ಜನವಸತಿ ಪ್ರದೇಶಗಳು, ಕೃಷಿ ಭೂಮಿ ಮತ್ತು ತೋಟಗಾರಿಕಾ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡಬೇಕೆಂದು ರಾಜ್ಯಗಳು ಪಟ್ಟುಹಿಡಿದಿರುವುದರಿಂದ, ರಾಜ್ಯಗಳ ಒಪ್ಪಿಗೆ ಇಲ್ಲದೆ ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಕಸ್ತೂರಿರಂಗನ್ ವರದಿ ವಿರೋಧಿಸಿ ಸೋಮವಾರ ಶೃಂಗೇರಿ ಬಂದ್
ಪಶ್ಚಿಮ ಘಟ್ಟಗಳ ಪರಿಸರ ನಾಶ ತಡೆಯಲು ಕಸ್ತೂರಿರಂಗನ್ ಅಥವಾ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮತ್ತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿವೆ. ಈ ನ್ಯಾಯಾಲಯದ ಆದೇಶಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಕೇಂದ್ರಕ್ಕಿದೆ.
ಹೊಸದಾಗಿ ಕರಡು ಅಧಿಸೂಚನೆ ಹೊರಡಿಸುವ ಮೂಲಕ ಬಾಧಿತ ಗ್ರಾಮಗಳ ಜನರಿಗೆ, ರೈತರಿಗೆ, ಜನಪ್ರತಿನಿಧಿಗಳಿಗೆ ಹಾಗೂ ರಾಜ್ಯ ಸರ್ಕಾರಗಳಿಗೆ ತಮ್ಮ ಆಕ್ಷೇಪಣೆಗಳು, ಸಲಹೆಗಳು ಮತ್ತು ಗಡಿ ಬದಲಾವಣೆಯ ಬೇಡಿಕೆಗಳನ್ನು ಸಲ್ಲಿಸಲು ಮತ್ತೊಮ್ಮೆ 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ (ಉದಾಹರಣೆಗೆ ವಯನಾಡು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗಗಳಲ್ಲಿ) ಸಂಭವಿಸುತ್ತಿರುವ ಭಾರಿ ಭೂಕುಸಿತಗಳು ಮತ್ತು ಮೇಘಸ್ಫೋಟದಂತಹ ಅನಾಹುತಗಳು ಪರಿಸರ ತಜ್ಞರಲ್ಲಿ ಭಾರಿ ಕಳವಳ ಮೂಡಿಸಿವೆ. ಪರಿಸರ ನಾಶ ತಡೆದು ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸುವುದು ತುರ್ತು ಅಗತ್ಯ ಎಂಬ ಕೂಗು ಬಲವಾಗಿರುವುದರಿಂದ ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಮುಂದುವರಿಸಿದೆ.

