ಹಾವೇರಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (PM Modi) ಮಹತ್ವಾಕಾಂಕ್ಷೆಯ ಯೋಜನೆಗಳು ಜನಸಾಮಾನ್ಯರ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ, ಅದರಲ್ಲೂ ಶೇಕಡಾ 80ರಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ವಿಶಾಲ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಭಾಗ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ ಸ್ವಾತಂತ್ರ್ಯದ ನಂತರ ಇಂತಹ ಸವಾಲುಗಳನ್ನು ಮೆಟ್ಟಿ ನಿಂತು, ಪ್ರಧಾನಿ ಮೋದಿಯವರು ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಉಚಿತ ಆರೋಗ್ಯ ಸೇವೆ
ಈ ಯೋಜನೆಯ ಮೂಲಕ ಬಡವರು ಆಸ್ಪತ್ರೆಗೆ ಹೋದರೆ 5 ಲಕ್ಷ ರೂಪಾಯಿಗಳವರೆಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಡೀ ದೇಶದಲ್ಲಿ 60 ಕೋಟಿ ಜನ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಎರಡು ಕೋಟಿ ಜನರಿಗೆ ಈಗಾಗಲೇ ಆಯುಷ್ಮಾನ್ ಕಾರ್ಡ್ ಇದೆ. ಸುಮಾರು 90 ಲಕ್ಷ ಜನ ಈಗಾಗಲೇ ಇದರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಈ ಯೋಜನೆಯಲ್ಲಿ ಈ ಹಿಂದೆ ಸೇರಿಸದಿದ್ದ ಹೊಸ ಹೊಸ ರೋಗಗಳು ಹಾಗೂ ವಿವಿಧ ಪ್ರೊಸೀಜರ್ಗಳನ್ನು ಕಾಲಕಾಲಕ್ಕೆ ಸೇರಿಸಲಾಗುತ್ತಿದೆ. ಉದಾಹರಣೆಗೆ ಹೃದಯ, ಕಿಡ್ನಿ ಸಮಸ್ಯೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗಳನ್ನೂ ಈಗ ಯೋಜನೆಯಲ್ಲಿ ಸೇರಿಸಲಾಗಿದೆ ಎಂದರು.
60 ವರ್ಷ ಮೇಲ್ಪಟ್ಟವರಿಗೆ ಯಾವುದೇ ರೀತಿಯ ಕಾರ್ಡ್ ಅಥವಾ ಇನ್ನಿತರ ದಾಖಲೆಗಳಿಲ್ಲದಿದ್ದರೂ ಚಿಕಿತ್ಸೆ ನೀಡಬೇಕು ಎಂಬ ವ್ಯವಸ್ಥೆಯೂ ಬಂದಿದೆ. 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಚಿಕಿತ್ಸೆ ಅಗತ್ಯವಿದ್ದರೂ ವಯಸ್ಸಾದವರಿಗೆ ಚಿಕಿತ್ಸೆ ನೀಡಬೇಕು ಎಂಬ ವ್ಯವಸ್ಥೆ ಇದೆ. ಆದರೆ ಕರ್ನಾಟಕ ರಾಜ್ಯ ಇದನ್ನು ಇನ್ನೂ ಜಾರಿಗೆ ತಂದಿಲ್ಲ. ಜಾರಿಗೆ ತಂದರೆ ಹಿರಿಯ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ವೈದ್ಯಕೀಯ ಸಿಬ್ಬಂದಿಗೆ ಸಹಕಾರ
ಈ ಕಟ್ಟಡದಲ್ಲಿ ತುರ್ತು ಚಿಕಿತ್ಸೆ ಸೇರಿದಂತೆ ಗ್ರಾಮದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಇದೆ. ಸಣ್ಣಪುಟ್ಟ ಗಾಯಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬ್ಲಡ್ ಟೆಸ್ಟ್, ಶುಗರ್ ಮತ್ತು ಬಿಪಿ ಪರೀಕ್ಷೆ ಮಾಡಲು ಲ್ಯಾಬ್ ವ್ಯವಸ್ಥೆಯೂ ಇದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ತಂದೆಯನ್ನೇ ಕೊಚ್ಚಿ ಕೊಂದ ಮಗ
ಇಲ್ಲಿನ ಆರೋಗ್ಯ ಅಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ (ಸಿಎಚ್ಒ) ಸೇರಿದಂತೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಮುದಾಯ ಆರೋಗ್ಯ ಅಧಿಕಾರಿ ಇಲ್ಲೇ ಇರಲು ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ. 24/7 ಸೇವೆ ನೀಡುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಾಗ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ತೆರಳಬೇಕಾಗುತ್ತದೆ ಎಂದರು.
ಆ ನಿಟ್ಟಿನಲ್ಲಿ ಇಂದು ಈ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಿದ್ದೇವೆ. ಗ್ರಾಮಸ್ಥರಿಗೆ ಎಲ್ಲಾ ರೀತಿಯ ಉತ್ತಮ ಸೇವೆ ಸಿಗಬೇಕು. ಇದರ ಲಾಭವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು. ಇಲ್ಲಿಗೆ ಬಂದು ಕೆಲಸ ಮಾಡುವ ಆರೋಗ್ಯ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಎಎನ್ಎಂ ನರ್ಸ್ಗಳು ಹಾಗೂ ಲ್ಯಾಬ್ ಅಸಿಸ್ಟೆಂಟ್ ಸೇರಿದಂತೆ ನಾಲ್ಕೈದು ಮಂದಿ ಸಿಬ್ಬಂದಿಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಬೇಕು. ನೀವು ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ಸೇವೆ ನೀಡಲು ಅವರಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡಿನ ದಾಳಿ
ಕೆಲವು ಊರುಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳು ಹಾಗೂ ತಾಲೂಕು ಕಚೇರಿಗಳಿದ್ದರೂ ವೈದ್ಯರು ಅಲ್ಲಿ ಉಳಿದುಕೊಳ್ಳದ ಪರಿಸ್ಥಿತಿ ಇದೆ. ಯಾವ ವೈದ್ಯರೂ ಉಳಿದುಕೊಳ್ಳಲು ಬಿಡದಂತಹ ವಾತಾವರಣ ನಿರ್ಮಾಣವಾಗಿರುತ್ತದೆ. ಅಂತಹ ಪರಿಸ್ಥಿತಿ ಇಲ್ಲೂ ಆಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವೀರಭೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ನಾಗಪ್ಪ ಕುಮ್ಮೂರ, ಭರಮಪ್ಪ ಜಾಲವಾಡಗಿ, ಎಂ.ಎಸ್. ಪಾಟೀಲ್, ಶಂಭಣ್ಣ ಪಾಟೀಲ್, ಡಾ. ರಾಜಶೇಖರ, ಶಂಕ್ರಪ್ಪ ಸಣ್ಣಮನಿ, ರುದ್ರೇಶ ಚಿನ್ನಣ್ಣನವರ, ಪರಮೇಶಪ್ಪ ಮಣ್ಣನ್ನವರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.

