– ಸೋಮವಾರದಿಂದ 3 ದಿನಗಳ ವಿಶೇಷ ಅಧಿವೇಶನ
ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಮಹತ್ವದ ವಿಧಾನಮಂಡಲ ವಿಶೇಷ ಅಧಿವೇಶನ(Special Assembly Session) ಆರಂಭವಾಗಲಿದೆ. ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿ(Kasturirangan Report) ಹಾಗೂ ಕೇಂದ್ರ ಸರ್ಕಾರದ ಕರಡು ಅಧಿಸೂಚನೆ ಬಗ್ಗೆ ಈ ಕಲಾಪದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.
ಇದೇ ಸೆಪ್ಟೆಂಬರ್ 27ರ ಒಳಗೆ ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸಬೇಕಾಗಿರುವುದರಿಂದ, ಕರಡು ಅಧಿಸೂಚನೆಯನ್ನು ವಿರೋಧಿಸಿ ರಾಜ್ಯ ಸರ್ಕಾರ(Karnataka Government) ಸದನದಲ್ಲಿ ಅಧಿಕೃತ ನಿರ್ಣಯ ಅಂಗೀಕರಿಸುವ ಸಾಧ್ಯತೆಯಿದೆ. ಆದರೆ, ಕೇವಲ ಮೂರೇ ದಿನಕ್ಕೆ ಸೀಮಿತಗೊಳಿಸಿರುವ ಈ ಅಧಿವೇಶನದಲ್ಲಿ ಯಾವುದೇ ಪ್ರಶ್ನೋತ್ತರ ಹಾಗೂ ಗಮನಸೆಳೆಯುವ ಸೂಚನೆಗಳಿಗೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.
ಡಿಕೆಶಿ ಹೇಳಿದ್ದೇನು?
ಈ ವಿಶೇಷ ಅಧಿವೇಶನದಲ್ಲಿ ಕೇವಲ ರೈತರು ಮತ್ತು ಜನಸಾಮಾನ್ಯರಿಗೆ ಸಂಬಂಧಿಸಿದ ವಿಚಾರಗಳಷ್ಟೇ ಚರ್ಚೆಯಾಗಲಿವೆ. ಇದರಲ್ಲಿ ಯಾವುದೇ ಕಾಲಿಂಗ್ ಅಟೆನ್ಷನ್ ಅಥವಾ ಪ್ರಶ್ನೋತ್ತರಗಳು ಇರುವುದಿಲ್ಲ. ಅಂತಹ ವಿಚಾರಗಳಿಗೆ ಈಗಾಗಲೇ ಹಿಂದಿನ ಕಲಾಪಗಳಲ್ಲಿ ಬೇಕಾದಷ್ಟು ಸಮಯ ಹಾಗೂ ಅವಕಾಶ ನೀಡಲಾಗಿದೆ. ವಿಪಕ್ಷಗಳಿಗೆ ರಾಜಕಾರಣ ಮಾಡುವುದಷ್ಟೇ ಮುಖ್ಯ, ಆದರೆ ನಮಗೆ ಜನರ ಬದುಕು ಮುಖ್ಯ.
ಪರಮೇಶ್ವರ್ ಹೇಳಿದ್ದೇನು?
ಕಳೆದ ವರ್ಷ ರಾಜ್ಯದಲ್ಲಿ 39 ಸಾವಿರ ಕೋಟಿ ರೂ. ನಷ್ಟ ಸಂಭವಿಸಿತ್ತು. ನಾವು 18 ಸಾವಿರ ಕೋಟಿ ರೂ. ನೆರವು ಕೋರಿದ್ದೆವು, ಆದರೆ ಕೇಂದ್ರ ಸರ್ಕಾರದಿಂದ ಬಂದಿದ್ದು ಕೇವಲ 3,400 ಕೋಟಿ ರೂ. ಮಾತ್ರ. ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ದೇಶಾದ್ಯಂತ 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ಇಡೀ ದೇಶದ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಇದನ್ನೂ ಓದಿ: ಕಸ್ತೂರಿರಂಗನ್ ವರದಿ ವಿರೋಧಿಸಿ ಸೋಮವಾರ ಶೃಂಗೇರಿ ಬಂದ್
ಅಶೋಕ್ ಹೇಳಿದ್ದೇನು?
ನಾವು ಕಸ್ತೂರಿ ರಂಗನ್ ವರದಿ ಮತ್ತು ಬರ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ನಾವೂ ಕಸ್ತೂರಿ ರಂಗನ್ ವರದಿಯ ವಿರುದ್ಧವೇ ಇದ್ದೇವೆ. ಆದರೆ ಕೇವಲ ಎರಡೇ ವಿಷಯಗಳಿಗೆ ಸೀಮಿತಗೊಳಿಸಿ, ಪ್ರಶ್ನೋತ್ತರವನ್ನೇ ರದ್ದು ಮಾಡಿರುವುದು ಸರಿಯಲ್ಲ. ಕನಿಷ್ಠ ಒಂದು ವಾರ ಅಧಿವೇಶನ ವಿಸ್ತರಿಸಬೇಕು. ಕೆಪಿಎಸ್‌ಸಿ ಹಗರಣ, ಬರಗಾಲದ ವೈಫಲ್ಯಗಳ ಕುರಿತು ನಾವು ಚರ್ಚೆ ಮಾಡಬೇಕಿದೆ. ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಮುನ್ನ, ಸರ್ಕಾರ ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮೊದಲು ಶ್ವೇತಪತ್ರ ಹೊರಡಿಸಲಿ. ರಾಜ್ಯ ಸರ್ಕಾರ ಬರಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬುದನ್ನು ಬಹಿರಂಗಪಡಿಸಲಿ.
ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?
ರಾಜ್ಯದಲ್ಲಿ ಇನ್ನೂ ಹತ್ತು ದಿನಗಳ ಕಾಲ ಚರ್ಚೆ ಮಾಡಬೇಕಾದಷ್ಟು ಜ್ವಲಂತ ಸಮಸ್ಯೆಗಳಿವೆ. ರೈತರು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕೆಪಿಎಸ್‌ಸಿ ಅಕ್ರಮಗಳು ನಡೆದಿವೆ, ಬಿಡದಿ, ನೈಸ್ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇವುಗಳಿಂದ ತಪ್ಪಿಸಿಕೊಳ್ಳಲು ಸರ್ಕಾರ ಕೇವಲ ಕಸ್ತೂರಿ ರಂಗನ್ ವಿಚಾರವನ್ನು ಮುಂದಿಡುತ್ತಿದೆ. ಅಧಿವೇಶನವನ್ನು ಒಂದು ವಾರ ವಿಸ್ತರಿಸಲೇಬೇಕು. ಸರ್ವಪಕ್ಷ ನಿಯೋಗದ ನೆಪವೊಡ್ಡಿ ವಿರೋಧ ಪಕ್ಷಗಳನ್ನು ಕಟ್ಟಿಹಾಕಲು ಸರ್ಕಾರ ಯತ್ನಿಸುತ್ತಿದೆ.
ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಲು ಕರೆಯಲಾಗಿರುವ ಈ ವಿಶೇಷ ಅಧಿವೇಶನದಲ್ಲಿ ಕಲಾಪ ವಿಸ್ತರಣೆ, ಕೆಪಿಎಸ್‌ಸಿ ಹಗರಣ ಹಾಗೂ ಸರ್ಕಾರದ ಆರ್ಥಿಕ ಸ್ಥಿತಿಗತಿಯ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಕಾವೇರಿದ ಮುಖಾಮುಖಿ ನಡೆಯುವುದು ನಿಶ್ಚಿತವಾಗಿದೆ.


