– ನಾನು ಪಿಜಿಆರ್ ಸಿಂಧ್ಯಾರನ್ನ ʻರಾಯʼ ಎಂದು ಕರೆಯುತ್ತಿದ್ದೆ
ಬೆಂಗಳೂರು: ಮುಖ್ಯಮಂತ್ರಿ ಆಗೋದಕ್ಕೆ ಯಾರೂ ಅವಕಾಶ ಕೊಡೋದಿಲ್ಲ, ನಾವೇ ಅವಕಾಶವನ್ನ ಗಿಟ್ಟಿಸಿಕೊಳ್ಳಬೇಕು. ಅವಕಾಶಕ್ಕೆ ತಕ್ಕಂತ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಬೆಂಗಳೂರಿನಲ್ಲಿ ನಡೆದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ (PGR Sindhia) ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಆಗುವ ಎಲ್ಲಾ ಯೋಗ್ಯತೆ ಸಿಂಧ್ಯಾ ಅವರಲ್ಲೂ ಇದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ, ಪಿಜಿಆರ್ ಸಿಂಧ್ಯಾ ಅವರು ಆಗಲಿಲ್ಲ ಎಂದರಲ್ಲದೇ, ಮುಖ್ಯಮಂತ್ರಿ ಆಗಲು ಅವಕಾಶ ಯಾರೂ ಕೊಡುವುದಿಲ್ಲ, ಅವಕಾಶವನ್ನ ನಾವೇ ಗಿಟ್ಟಿಸಿಕೊಳ್ಳಬೇಕು. ಅವಕಾಶಕ್ಕೆ ತಕ್ಕಂತಹ ಕೆಲಸ ಮಾಡಬೇಕು. ಎಂದು ನುಡಿದರು.
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ “A Life Uncompromised” ಪುಸ್ತಕವನ್ನು ಇಂದು ಲೋಕಾರ್ಪಣೆಗೊಳಿಸಿ, ಅವರೊಂದಿಗಿನ ಒಡನಾಟವನ್ನು ಸ್ಮರಿಸಿದೆ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವರಾದ ಬಸವರಾಜ ರಾಯರೆಡ್ಡಿ, ಯು.ಟಿ. ಖಾದರ್, ಈಶ್ವರ… pic.twitter.com/1u5O1R8YEU
— Siddaramaiah (@siddaramaiah) September 19, 2026
ಪಿ.ಜಿ.ಆರ್ ಸಿಂಧ್ಯಾ ಅವರು ಯಾವುದೇ ಇಲಾಖೆ ನೀಡಿದರೂ ಅದನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ಹಾಗೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಹಾರ್ಡ್‌ವರ್ಕರ್. ಪಿ.ಜಿ.ಆರ್. ಸಿಂಧ್ಯಾ ಅವರ ಹುಟ್ಟುಹಬ್ಬ ಎಂಬುದು ನನಗೆ ಗೊತ್ತಿರಲಿಲ್ಲ. ‘ನನ್ನ ಪುಸ್ತಕ ರಿಲೀಸ್ ಇದೆ, ಬಿಡುಗಡೆ ಮಾಡುವುದಕ್ಕೆ ನೀವು ಬರಬೇಕು’ ಎಂದು ಆಹ್ವಾನಿಸಿದ್ದರು. ನನಗೆ ಯಾರು ಯಾರು ಬರುತ್ತಾರೆ ಎಂಬುದನ್ನೂ ಹೇಳಿರಲಿಲ್ಲ. ಆದರೆ ಅವರ ಮೇಲಿನ ಪ್ರೀತಿ, ಸ್ನೇಹ ಮತ್ತು ಅಭಿಮಾನದಿಂದ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.
ನನಗೆ 80 ವರ್ಷವಾಗಿದೆ, ಅವರು ನನಗಿಂತ 2 ವರ್ಷ ಚಿಕ್ಕವರು. ಅವರಿಗೆ ಆಯಸ್ಸು, ಆರೋಗ್ಯ ದೊರೆಯಲಿ. ಇನ್ನಷ್ಟು ವರ್ಷಗಳ ಕಾಲ ಜನಸೇವೆ ಹಾಗೂ ಸಮಾಜ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಸಿಂಧ್ಯಾ ಅವರ ಧರ್ಮಪತ್ನಿ ಗೀತಾ ಸಿಂಧ್ಯಾ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವುದನ್ನ ಉಲ್ಲೇಖಿಸಿದ ಸಿದ್ರಾಮಯ್ಯ ಸಿಂಧ್ಯಾ ಅವರ ಮನೆಯಲ್ಲಿ ತಾನು ಅನೇಕ ಬಾರಿ ಊಟ ಮಾಡಿದ್ದೇನೆ. ನೀವಿಬ್ಬರೂ ಚೆನ್ನಾಗಿದ್ದೀರಿಯಲ್ವಾ? ಅದೇ ನನಗೆ ಬಹಳ ಸಂತೋಷ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಿಂಧ್ಯಾ ಅವರ ಸಾರ್ವಜನಿಕ ಜೀವನ ಮದುವೆಯಾದ ನಂತರ ಪ್ರಾರಂಭವಾಯಿತೋ ಅಥವಾ ಅದಕ್ಕೂ ಮುಂಚೆಯೇ ಪ್ರಾರಂಭವಾಯಿತೋ ಗೊತ್ತಿಲ್ಲ. 1980ರಲ್ಲಿ ಮದುವೆಯಾದರು ಎಂದು ನೆನಪಿದೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಮಂತ್ರಿಯಾದರು. ನನಗಿಂತ ಮೊದಲೇ ಮಂತ್ರಿಯಾದರು. ಆದ್ರೆ ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ, ಸಿಂಧ್ಯಾ ಅವರು ಆಗಲಿಲ್ಲ ಎಂದಾಗ, ಮುಖ್ಯಮಂತ್ರಿ ಆಗಲು ಅವಕಾಶ ಯಾರೂ ಕೊಡುವುದಿಲ್ಲ, ಅವಕಾಶವನ್ನ ನಾವೇ ಪಡೆದುಕೊಳ್ಳಬೇಕು. ಅವಕಾಶಕ್ಕೆ ತಕ್ಕಂತಹ ಕೆಲಸ ಮಾಡಬೇಕು ಎಂದರು.
ಮುಖ್ಯಮಂತ್ರಿ ಆಗುವ ಎಲ್ಲಾ ಯೋಗ್ಯತೆ ಸಿಂಧ್ಯಾ ಅವರಲ್ಲೂ ಇದೆ. ಸಿಂಧ್ಯಾ ಅವರು ಹಳ್ಳಿಯಿಂದ ಬಂದವರು. ಮಲವಾಡಿ ಅವರ ಊರು. ಅವರ ತಂದೆಯ ಹೆಸರು ಪಾಂಡುರಂಗರಾವ್ ಸಿಂಧ್ಯಾ. ಸಿಂಧ್ಯಾ ಅವರ ನಿಜವಾದ ಹೆಸರು ಗಣೇಶ್ ರಾವ್ ಸಿಂಧ್ಯಾ. ಪಾಂಡುರಂಗರಾವ್ ಅವರ ಮಗ ಗಣೇಶ್ ರಾವ್ ಸಿಂಧ್ಯಾ. ಅದಕ್ಕಾಗಿ ನಾನು ಅವರನ್ನ ಯಾವಾಗಲೂ ‘ರಾಯ’ ಎಂದು ಕರೆಯುತ್ತಿದ್ದೆ. ಅವರು ಅದಕ್ಕೆ ಎಂದಿಗೂ ಕೋಪಿಸಿಕೊಳ್ಳುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು.
ರಾಮಕೃಷ್ಣ ಹೆಗಡೆ ಅವರ ಮಂತ್ರಿಮಂಡಲದಲ್ಲಿ ಸಿಂಧ್ಯಾ ಅವರು ಮಂತ್ರಿಯಾಗಿದ್ದರು. ಆರೋಗ್ಯ ಸಚಿವರು, ಗೃಹ ಸಚಿವರು, ಸಾರಿಗೆ ಸಚಿವರು, ಸಮಾಜ ಕಲ್ಯಾಣ ಸಚಿವರು ಹಾಗೂ ಹಣಕಾಸು ಸಚಿವರಾಗಿ ವಿವಿಧ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು. ಸಿಂಧ್ಯಾ ಅವರು ಹಣಕಾಸು ಸಚಿವರಾದ ಸಂದರ್ಭದಲ್ಲಿ, ‘ಹೇಗಿದೆ ಇಲಾಖೆ?’ ಎಂದು ನಾನು ಕೇಳಿದ್ದೆ. ಅದಕ್ಕೆ ಅವರು, ‘ನನಗೆ ಆದೇಶ ಇದೆ, ನೀವೇನು ತಪ್ಪು ಮಾಡಿದ್ದೀರಿ ಎಂಬುದನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿದ್ದರು. ಆಗ ನಾನು, ‘ನಾನು ಏನೇನು ತಪ್ಪು ಮಾಡಿದ್ದೇನೆ ಎಂದು ಹುಡುಕುತ್ತಿದ್ದೀಯಾ?’ ಎಂದು ಕೇಳಿದ್ದೆ ಎಂದು ಸಿದ್ದರಾಮಯ್ಯ ಅವರು ನಗುತ್ತಾ ನೆನಪಿಸಿಕೊಂಡರು.
ದೇವೇಗೌಡರು ಮುಖ್ಯಮಂತ್ರಿಯಾದಾಗ ನಾನು, ಸಿಂಧ್ಯಾ, ಜಾಲಪ್ಪ ಮತ್ತು ದೇವೇಗೌಡರು ನಾಲ್ವರು ಸೇರಿ ಮಂತ್ರಿಮಂಡಲ ರಚನೆ ಕುರಿತು ಚರ್ಚೆ ಮಾಡಿದ್ದೆವು. ಕೋಲಾರದ ಜಾಲಪ್ಪನವರ ಗೆಸ್ಟ್‌ಹೌಸ್‌ನಲ್ಲಿ ಆ ಚರ್ಚೆ ನಡೆದಿತ್ತು. ಆಗ ನಾನು ದೇವೇಗೌಡರಿಗೆ ಕಂದಾಯ ಇಲಾಖೆ ನೀಡುವಂತೆ ಕೇಳುತ್ತಿದ್ದೆ. ಜಾಲಪ್ಪನವರು ಕೂಡ ಅದೇ ಇಲಾಖೆ ಕೇಳುತ್ತಿದ್ದರು. ಆಗ ದೇವೇಗೌಡರು ನಮಗೆ ನಂಬಿಕಸ್ಥರು ಬೇಕು, ನೀನೇ ಹಣಕಾಸು ಇಲಾಖೆ ತೆಗೆದುಕೋ ಎಂದು ನನಗೆ ಹೇಳಿದರು. ಹಾಗಾಗಿ ನಾನು ಹಣಕಾಸು ಸಚಿವನಾದೆ. ನಾನು ಎಕನಾಮಿಕ್ಸ್ ಓದಿರಲಿಲ್ಲ. ನಾನು ಬಿ.ಎಸ್ಸಿಯಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಓದಿದ್ದೆ. ನಂತರ ಕಾನೂನು ಓದಿದ್ದೆ. ಹಣಕಾಸು ಇಲಾಖೆ ಬೇಡ ಎಂದು ದೇವೇಗೌಡರಿಗೆ ಹೇಳಿದ್ದೆ. ಆದರೆ ಅವರು ನಮಗೆ ನಂಬಿಕಸ್ಥರು ಬೇಕು ಎಂದು ಹೇಳಿ ನನಗೆ ಹಣಕಾಸು ಇಲಾಖೆ ನೀಡಿದರು. ಸಿಂಧ್ಯಾ ಅವರು ಗೃಹ ಇಲಾಖೆ ಬೇಕು ಎಂದು ಕೇಳಿದ್ದರು ಎಂದು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು.

