ನವದೆಹಲಿ: ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಇಂಗಾಲ ಹೊರಸೂಸುವಿಕೆಯ ಹೊಣೆಗಾರಿಕೆಯನ್ನು ಅನ್ಯಾಯವಾಗಿ ಹೊರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಭಾರತದ ತಲಾ ಇಂಗಾಲ ಹೊರಸೂಸುವಿಕೆ ಜಾಗತಿಕ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆ ಇದೆ ಎಂದು ತಿಳಿಸಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆಯೋಜಿಸಿದ್ದ ‘ದಿ ಫ್ಯೂಚರ್ ಆಫ್ ಎನ್ವಿರಾನ್‌ಮೆಂಟ್ & ಕ್ಲೈಮೇಟ್ ಡೈನಾಮಿಕ್ಸ್’ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಬನ್ ಹೊರಸೂಸುವಿಕೆಯ ಹೊಣೆಗಾರಿಕೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೆಚ್ಚಾಗಿ ಹೊರಿಸಲಾಗುತ್ತಿದೆ. ಆದರೆ ಐತಿಹಾಸಿಕ ವಾಸ್ತವವನ್ನು ಗಮನಿಸಿದರೆ, ಇಂದಿಗೂ ಭಾರತದ ತಲಾ ಕಾರ್ಬನ್ ಹೊರಸೂಸುವಿಕೆ ಜಾಗತಿಕ ಸರಾಸರಿಯ ಅರ್ಧಕ್ಕಿಂತ ಕಡಿಮೆ ಇದೆ ಎಂದು ಮೋದಿ ಹೇಳಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತಲಾ ಹೊರಸೂಸುವಿಕೆ ಭಾರತದ ಮಟ್ಟಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ ಎಂಬ ಅಂಶವನ್ನೂ ಅವರು ಪ್ರಸ್ತಾಪಿಸಿದರು. ಇದನ್ನೂ ಓದಿ: TMC ಹೆಸರು, ಚಿಹ್ನೆ ಬಳಕೆಗೆ ತಡೆ – ಚುನಾವಣಾ ಆಯೋಗ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಮತಾ
ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ 2023ರ ಅಂಕಿಅಂಶಗಳ ಪ್ರಕಾರ, ಭಾರತದ ತಲಾ CO₂ ಹೊರಸೂಸುವಿಕೆ ಸುಮಾರು 2 ಟನ್‌ಗಳಷ್ಟಿದ್ದು, ಜಾಗತಿಕ ಸರಾಸರಿಯ ಅರ್ಧಕ್ಕಿಂತ ಕಡಿಮೆ ಇದೆ. ಇದೇ ವೇಳೆ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ತಲಾ ಹೊರಸೂಸುವಿಕೆ ಜಾಗತಿಕ ಸರಾಸರಿಗಿಂತ ಸುಮಾರು ಶೇ.70ರಷ್ಟು ಹೆಚ್ಚಿತ್ತು.
ಕಳೆದ 12 ವರ್ಷಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಪ್ರಧಾನಿ ಹೇಳಿದರು. ವಿಶೇಷವಾಗಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಇದು ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ಸೌರಶಕ್ತಿ ಸೇರಿದಂತೆ ಪಳೆಯುಳಿಕೆ ಇಂಧನವಲ್ಲದ ಇಂಧನ ಮೂಲಗಳ ಸಾಮರ್ಥ್ಯ ವಿಸ್ತರಣೆಯಲ್ಲಿ ಭಾರತದ ಕ್ರಮಗಳು ಜಾಗತಿಕವಾಗಿ ಗಮನ ಸೆಳೆದಿವೆ ಎಂದು ಮೋದಿ ಹೇಳಿದರು. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸುವುದು ಭಾರತದ ನೀತಿಯ ಪ್ರಮುಖ ಅಂಶವಾಗಿದೆ ಎಂದು ಪ್ರತಿಪಾದಿಸಿದರು.
ಪ್ಯಾರಿಸ್ ಹವಾಮಾನ ಒಪ್ಪಂದದ ಅಡಿಯಲ್ಲಿ COP-21ರಲ್ಲಿ ಕೈಗೊಂಡ ಬದ್ಧತೆಗಳನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಈಡೇರಿಸಿದ G20 ರಾಷ್ಟ್ರಗಳಲ್ಲಿ ಭಾರತವೇ ಏಕೈಕ ದೇಶ ಎಂದು ಮೋದಿ ಹೇಳಿದರು. ಭಾರತದ ಪರಿಷ್ಕೃತ ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆ ಪ್ರಕಾರ, 2030ರ ವೇಳೆಗೆ 2005ರ ಮಟ್ಟಕ್ಕೆ ಹೋಲಿಸಿದರೆ GDPಯ ಹೊರಸೂಸುವಿಕೆ ತೀವ್ರತೆಯನ್ನು ಶೇ.45ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಇದೇ ಅವಧಿಯಲ್ಲಿ ವಿದ್ಯುತ್ ಸ್ಥಾಪಿತ ಸಾಮರ್ಥ್ಯದ ಸುಮಾರು ಶೇ.50 ರಷ್ಟನ್ನು ಪಳೆಯುಳಿಕೆ ಇಂಧನವಲ್ಲದ ಮೂಲಗಳಿಂದ ಪಡೆಯುವ ಗುರಿಯನ್ನೂ ಭಾರತ ಹೊಂದಿದೆ.
ಪರಮಾಣು ಇಂಧನ ವಿಸ್ತರಣೆಯ ಬಗ್ಗೆಯೂ ಪ್ರಸ್ತಾಪ
ಪರಮಾಣು ವಿದ್ಯುತ್ ಉತ್ಪಾದನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತ ಮುಂದುವರಿಯುವಾಗ ಪರಿಸರ ಸಂಘಟನೆಗಳಿಂದ ಕಾನೂನು ಸವಾಲುಗಳು ಎದುರಾಗಬಹುದು ಎಂದು ಮೋದಿ ಪ್ರಸ್ತಾಪಿಸಿದರು. ಪರಿಸರದ ಹೆಸರಿನಲ್ಲಿ ಪರಮಾಣು ಇಂಧನ ಉತ್ಪಾದನೆಗೆ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಶತಮಾನಗಳಿಂದಲೇ ಪ್ರಕೃತಿ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಭಾರತ ಜಗತ್ತಿಗೆ ಮಾರ್ಗದರ್ಶನ ನೀಡಿದೆ. ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಕೃತಿಯೊಂದಿಗಿನ ಸಂಬಂಧದ ಅನುಭವವನ್ನು ಆಧರಿಸಿ ಆಧುನಿಕ ಹವಾಮಾನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಎದುರಿಸಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಕರೆ ನೀಡಿದರು. ಇದನ್ನೂ ಓದಿ: ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣ – ಇಡಿಯಿಂದ ಕಂಪನಿ ಪ್ರಮೋಟರ್ ಬಂಧನ
NGT ಮೊಬೈಲ್ ಆ್ಯಪ್ ಬಿಡುಗಡೆ
ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದರು. ಪರಿಸರ ಸಂಬಂಧಿತ ನ್ಯಾಯಾಂಗ ಪ್ರಕ್ರಿಯೆಗಳು, ಮಾಹಿತಿ ಮತ್ತು ಸೇವೆಗಳಿಗೆ ಸಾರ್ವಜನಿಕರ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಈ ಆ್ಯಪ್ ಪರಿಚಯಿಸಲಾಗಿದೆ.
ಎರಡು ದಿನಗಳ ಸಮ್ಮೇಳನ ಸೆಪ್ಟೆಂಬರ್ 19 ಮತ್ತು 20ರಂದು ನಡೆಯುತ್ತಿದ್ದು, ಪರಿಸರ, ಹವಾಮಾನ ಬದಲಾವಣೆ ಹಾಗೂ ಅದಕ್ಕೆ ಸಂಬಂಧಿಸಿದ ನ್ಯಾಯಾಂಗ ಮತ್ತು ಆಡಳಿತಾತ್ಮಕ ಸವಾಲುಗಳ ಕುರಿತು ನ್ಯಾಯಾಂಗ, ಸರ್ಕಾರ ಮತ್ತು ಕಾನೂನು ಕ್ಷೇತ್ರದ ಪ್ರಮುಖರು ಚರ್ಚೆ ನಡೆಸುತ್ತಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಹಾಗೂ NGT ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

