– ಖಾಕಿ ಕೈಗೆ ತಗ್ಲಾಕೊಂಡ ಸೈಕೋ ಕಿಲ್ಲರ್
ಬೆಂಗಳೂರು: ಪಟಾಕಿ (Firecrackers) ಕೊಡಿಸೋದಾಗಿ ನೆರೆಮನೆಯ 13 ವರ್ಷದ ಬಾಲಕನನ್ನ ಕರೆದೊಯ್ದು, ಹಣಕ್ಕಾಗಿ ಡಿಮ್ಯಾಂಡ್ ಇಟ್ಟು, ಮಗುವನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಬಳಿಕ ಅಪಘಾತದಿಂದ ಸತ್ತಿದ್ದಾನೆ ಅಂತಾ ನಾಟಕವಾಡಿ, ಕೊನೆಗೆ ತಾನೇ ಸರಣಿ ಅಪಘಾತವೆಸಗಿದ ಸೈಕೊ ಕಿಲ್ಲರ್ (Psycho killer) ಖಾಕಿ ಕೈಗೆ ಲಾಕ್ ಆಗಿದ್ದಾನೆ. ಏನಿದು ಸೈಕೋ ಕಿಲ್ಲರ್ ಕಥೆ ಅಂತೀರಾ ಮುಂದೆ ಓದಿ…
ಹೌದು. ಏನೂ ತಪ್ಪು ಮಾಡದ ಹುಡುಗ ಇವತ್ತು ಜೀವಂತ ಇಲ್ಲ. ನೆರೆಮನೆಯವನನ್ನ ನಂಬಿ ಆತನ ಕಾರು ಹತ್ತಿದ್ದೇ ತಪ್ಪಾಯ್ತು. ಹಣಕ್ಕಾಗಿ ಮಗುವನ್ನ ಬರ್ಬರವಾಗಿ ಕೊಲೆ (Murder) ಮಾಡಿದ್ದಾನೆ ಕೀಚಕ. ಯಲಹಂಕದ ವಿನಾಯಕ ನಗರದ ನಿವಾಸಿ 13 ವರ್ಷದ ಪ್ರಜ್ವಲ್ ಕೊಲೆಯಾದ ಬಾಲಕ. ನೆರೆಮನೆಯ ಭಾಸ್ಕರ್ ರೆಡ್ಡಿಯೇ ಪಾಪಿ ಕೊಲೆಗಾರ. ಮೊನ್ನೆ ಸಂಜೆ 7.30 ರ ಸುಮಾರಿಗೆ ಪಟಾಕಿ ತರೋಣ ಬಾ ಅಂತಾ ಬಾಲಕ ಪ್ರಜ್ವಲ್ ನನ್ನ ಈ ಭಾಸ್ಕರ್ ರೆಡ್ಡಿ ತನ್ನ ಕಾರಲ್ಲಿ ಕರೆದೊಯ್ದಿದ್ದಾನೆ.
ಆ ಬಳಿಕ ಮಗುವಿನಿಂದ ವೀಡಿಯೊ ಮಾಡಿಸಿ ಪೋಷಕರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದಾನೆ. ಇತ್ತ ಮಗುವನ್ಮ ಎಲ್ಲಾ ಕಡೆ ಹುಡುಕಾಡ್ತಿದ್ದ ಪೋಷಕರು ಆರೋಪಿ ಭಾಸ್ಕರ್ ರೆಡ್ಡಿಯ ತಂದೆಗೆ ವಿಚಾರ ಹೇಳಿದ್ದಾರೆ. ಇಬ್ರೂ ಮಗುವನ್ನ ಕರೆತರುವಂತೆ ಭಾಸ್ಕರ್ ರೆಡ್ಡಿಗೆ ವಾರ್ನ್ ಮಾಡಿದ್ದಾರೆ. ಗೊತ್ತಿರುವವನು ಅಲ್ಲವಾ ಕರ್ಕೊಂಡ್ ಬರ್ತಾನೆ ಅಂತಾ ಪೋಷಕರು ಸಹಜವಾಗಿ ಸುಮ್ಮನಾಗಿದ್ದಾರೆ.

ಇನ್ನೂ ಆರೋಪಿ ಬಾಸ್ಕರ್ ರೆಡ್ಡಿ ಅಲ್ಲದೇ ಕಾರಲ್ಲಿ ಏಡುಕುಂಡಲರೆಡ್ಡಿ ಎಂಬಾತ ಸಹ ಜೊತೆಗಿದ್ದ. ನಶೆಯಿಂದಲೇ ಅಥವಾ ಕ್ರೋಧದಿಂದಲೋ ಏನೊಮಗುವಿನ ಕೈ ಕಾಲು ಹಾಗು ಬಾಯಿಗೆ ಟೇಪ್ ಹಾಕಿ ಹೊಡೆದಿದ್ದಾರೆ. ಮಗುವನ್ನ ನಿರ್ಜನ ಪ್ರದೇಶದ ಕಾಂಪೌಂಡ್ ಒಳಕ್ಕೆ ಎಸೆದಿದ್ದಾರೆ. ಮಗು ಅಮ್ಮಾ ಅಮ್ಮಾ ಅಂತಾ ನರಳಾಡ್ತಿದ್ರಿಂದ ಮಗುವಿನ ಮುಖ ಮತ್ತು ತಲೆಯ ಮೇಲೆ ಹ್ಯಾಲೋಬ್ರಿಕ್ ಹಾಕಿ ಕೊಲೆ ಮಾಡಿದ್ದಾರೆ. ಹೂಳಲು ಸಾಧ್ಯವಾಗದೇ ಮಗುವನ್ನ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಆಂಧ್ರದ ಕಡೆ ಎಸ್ಕೇಪ್ ಆಗ್ತಿದ್ರು.
ಮಗು ಕಾರು ಡಿಕ್ಕಿ ಹೊಡೆದು ಸತ್ತಿದೆ ಅಂತಾ ಕಥೆ ಕಟ್ಟಿದ ಪಾತಕಿ!
ಹತ್ಯೆಯ ಬಳಿಕ ಮೃತದೇಹವನ್ನ ಕಾರಿನ ಡಿಕ್ಕಿಯಲ್ಲಿಟ್ಟು ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಗಾಬರಿಯಲ್ಲಿ ಚಿಕ್ಕಜಾಲ ಸರ್ವೀಸ್ ರಸ್ತೆಯಲ್ಲಿ ಸರಣಿ ಅಪಘಾತ ಎಸಗಿ, ಸ್ವಿಫ್ಟ್ ಕಾರು ಹಾಗೂ ರಸ್ತೆ ಬದಿಯ ಫುಟ್ಪಾತ್ ಡಿಕ್ಕಿ ಹೊಡೆದು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸ್ಥಳಕ್ಕೆ ಬಂದ ಚಿಕ್ಕಜಾಲ ಠಾಣೆಯ ಪೊಲೀಸರು ಕಾರಿನ ಡಿಕ್ಕಿ ಪರಿಶೀಲಿಸಿದಾಗ ಬಾಲಕನ ಶವ ಪತ್ತೆಯಾಗಿದೆ. ಆರಂಭದಲ್ಲಿ ಬಾಲಕ ಕಾರಿಗೆ ಅಡ್ಡಬಂದು ಮೃತಪಟ್ಟಿದ್ದಾನೆ ಎಂದು ಅಪಘಾತದ ನಾಟಕವಾಡಲು ಯತ್ನಿಸಿದರೂ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಪಕ್ಕಾ ಪ್ಲ್ಯಾನ್ ಮಾಡಿಯೇ ಮಾಡಿದ ಕೊಲೆ ಎಂಬುದು ಸಾಬೀತಾಗಿದೆ.
ಸದ್ಯ ಆರೋಪಿ ಭಾಸ್ಕರ್ ರೆಡ್ಡಿಯನ್ನ ಬಂಧಿಸಿರುವ ಚಿಕ್ಕಜಾಲ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ತಲೆ ಮರೆಸಿಕೊಂಡಿರೊ ಮತ್ತೊಬ್ಬ ಆರೋಪಿ ಏಡುಕುಂಡಲ ರೆಡ್ಡಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ದುಃಖ ಆ ಪೋಷಕರಿಗೆ ಗೊತ್ತಿರುತ್ತೆ. ಪರಿಚಯಸ್ಥರು ಅಂತಾ ಮಕ್ಕಳನ್ನ ಅವರಿವರ ಜೊತೆ ಕಳಿಸುವ ಮುನ್ನ ಎಚ್ಚರದಿಂದಿರಿ.

