ಬೆಂಗಳೂರು/ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ(Mangaluru) ಇದೇ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ(Cabinet Meeting) ನಡೆಯುಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ದಶಕಗಳ ಬೇಡಿಕೆಗಳಿಗೆ ಸರ್ಕಾರದಿಂದ ಮಹತ್ವದ ಸ್ಪಂದನೆ ಸಿಗುವ ನಿರೀಕ್ಷೆ ಗರಿಗೆದರಿದೆ.
ಇಂದಿನ ಕ್ಯಾಬಿನೆಟ್ ಸಭೆಯ ಅಜೆಂಡಾದಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗೆ ಸಂಬಂಧಿಸಿದ 16 ಪ್ರಮುಖ ವಿಚಾರಗಳು ಸ್ಥಾನ ಪಡೆದುಕೊಂಡಿದ್ದು, ವಿಸ್ತೃತ ಚರ್ಚೆ ನಡೆಯಲಿದೆ.
ಕರಾವಳಿ(Coastal Karnataka) ಭಾಗದ ಆರ್ಥಿಕ, ಸಾಮಾಜಿಕ ಹಾಗೂ ಕೈಗಾರಿಕಾ ಪ್ರಗತಿಗೆ ವೇಗ ನೀಡಲು ಸರ್ಕಾರವು ಮಹತ್ವಾಕಾಂಕ್ಷೆಯ ಸಮಗ್ರ ಅಭಿವೃದ್ಧಿ ‘ಬ್ಲೂ ಪ್ರಿಂಟ್’ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಜಿಲ್ಲೆಯ ಮೂಲಸೌಕರ್ಯ, ಬಂದರು ವಿಸ್ತರಣೆ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ವಲಯಕ್ಕೆ ಸಂಬಂಧಿಸಿದ ಪ್ರಮುಖ ಪ್ರಸ್ತಾವನೆಗಳಿಗೆ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಗುವ ನಿರೀಕ್ಷೆಯಿದೆ.
ಒಂದೇ ಕ್ಯಾಬಿನೆಟ್ ಸಭೆಯ ಮೂಲಕ ನೂರಾರು ನಿರೀಕ್ಷೆಗಳನ್ನು ಹೊತ್ತಿರುವ ಜಿಲ್ಲೆಯ ನಾಗರಿಕರು, ಕರಾವಳಿಗೆ ವಿಶೇಷ ಪ್ಯಾಕೇಜ್ ಅಥವಾ ಅನುದಾನದ ಬಂಪರ್ ಕೊಡುಗೆ ದೊರೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಬೆಳವಣಿಗೆಗೆ ಪೂರಕವಾದ ಹಲವು ಹೊಸ ಯೋಜನೆಗಳು ಹಾಗೂ ಅನುದಾನ ಹಂಚಿಕೆಗೆ ಈ ಸಭೆಯು ವೇದಿಕೆಯಾಗಲಿದ್ದು, ಸರ್ಕಾರದ ಅಂತಿಮ ತೀರ್ಮಾನಗಳತ್ತ ಎಲ್ಲರ ಚಿತ್ತ ನೆಟ್ಟಿದೆ. ಸಂಪುಟ ಸಭೆಯ ಮುಂದೆ ಪ್ರವಾಸೋದ್ಯಮ, ಬಂದರು, ಸೇತುವೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಮುಖ ಪ್ರಸ್ತಾವನೆಗಳು ಅಂತಿಮ ತೀರ್ಮಾನಕ್ಕೆ ಸಜ್ಜಾಗಿವೆ.
ವಿವಿಧ ಸಂಸ್ಕೃತಿಗಳ ನೆಲೆ – ಕರಾವಳಿ
ಮಂಗಳೂರಿನ ಸಚಿವ ಸಂಪುಟ ಸಭೆಯ ಪೂರ್ವಭಾವಿ ಔತಣಕೂಟದ ವೇಳೆ ಏರ್ಪಡಿಸಲಾಗಿದ್ದ ಕರಾವಳಿಯ ಸಾಂಸ್ಕೃತಿಕ ವಸ್ತುಪ್ರದರ್ಶನವನ್ನು ಕಣ್ತುಂಬಿಕೊಂಡೆ.
ಸಾಂಪ್ರದಾಯಿಕ ವಾದ್ಯಗಳು, ಪುರಾತನ ಕೃಷಿ ಸಲಕರಣೆಗಳು, ದೈವಾರಾಧನೆ ಮತ್ತು ಕಂಬಳದ ಪರಿಕರಗಳು ಕಡಲತೀರದ ಜನಜೀವನ ಹಾಗೂ ಶ್ರೀಮಂತ ಪರಂಪರೆಯನ್ನು ಅತ್ಯಂತ ನೈಜವಾಗಿ… pic.twitter.com/nNKRXZUTsA
— DK Shivakumar (@DKShivakumar) September 17, 2026
ಏನು ನಿರೀಕ್ಷೆ?
ಕರಾವಳಿ ಭಾಗದ ಸರ್ವಾಂಗೀಣ ಪ್ರಗತಿಗೆ ಬೃಹತ್ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಜನರ ಬಹುದಿನಗಳ ಕನಸಾದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಂಪುಟದಲ್ಲಿ ಚಾಲನೆ ದೊರೆಯುವ ನಿರೀಕ್ಷೆಯಿದೆ.
ಕರಾವಳಿ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿಶೇಷ ಅನುದಾನ ಹಂಚಿಕೆಯಾಗುವ ಸಾಧ್ಯತೆಯಿದೆ.
ಬಂದರು ಹಾಗೂ ಪ್ರವಾಸೋದ್ಯಮ ಯೋಜನೆಗಳು
ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರಿನಲ್ಲಿ ಬಹು ಉದ್ದೇಶಿತ ಬಂದರು ಹಾಗೂ ಹಡಗು ನಿರ್ಮಾಣ ಅಂಗಳವನ್ನು (Multipurpose Harbour & Shipyard) PPP-DBFOT ಮಾದರಿಯಲ್ಲಿ ರೂ. 6,925 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಪುಟದ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ.
ಕಾರವಾರ ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನಾ ವೆಚ್ಚವನ್ನು . 98.24 ಕೋಟಿಗಳಿಂದ 250.05 ಕೋಟಿ ರೂ.ಗಳಿಗೆ ಹೆಚ್ಚಿಸಿ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ. ಇದನ್ನೂ ಓದಿ: ಕರಾವಳಿಯ ಪ್ರತಿ ಕ್ಷೇತ್ರಕ್ಕೆ 200 ಕೋಟಿ ಅನುದಾನ ಬಿಡುಗಡೆ ಮಾಡಿ: ವಿಜಯೇಂದ್ರ ಆಗ್ರಹ
ಉಡುಪಿಯ ಅಯೋಬಾ, ದರಿಯಾ ಬಹದೂರ್‌ಗಢ ಮತ್ತು ಮಲ್ಪೆ ದ್ವೀಪಗಳನ್ನು 279.03 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆಯಿದೆ.
ಮಂಗಳೂರಿನ ಗುರುಪುರ ನದಿ ದ್ವೀಪಗಳನ್ನು 125.43 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ PPP ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಲೈಟ್‌ಹೌಸ್ ಸುತ್ತಲಿನ ಪರಿಸರವನ್ನು ಪ್ರವಾಸೋದ್ಯಮ ಮತ್ತು ಆತಿಥ್ಯ ಕೇಂದ್ರವನ್ನಾಗಿ ರೂಪಿಸಲು 60.34 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
ಕರ್ನಾಟಕ ಒಳನಾಡು ಹಡಗುಗಳ (ದಂಡನೆ ಮತ್ತು ಮೇಲ್ಮನವಿ) ನಿಯಮಗಳು, 2026 ಜಾರಿಗೆ ಸಚಿವ ಸಂಪುಟದ ಒಪ್ಪಿಗೆ ಲಭಿಸುವ ನಿರೀಕ್ಷೆಯಿದೆ.
ಸೇತುವೆ ಹಾಗೂ ರಸ್ತೆ ಕಾಮಗಾರಿಗಳು
ಕೋಟೆಪುರ-ಬೋಳಾರ ಸಂಪರ್ಕ ರಸ್ತೆ: ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಯ ಸಂಪರ್ಕ ರಸ್ತೆ ಮತ್ತು ಬಾಕಿ ಕಾಮಗಾರಿಗೆ 50.00 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ಲಭ್ಯವಾಗುವ ಸಾಧ್ಯತೆಯಿದೆ.
ಕಂದಲೂರು ಸೇತುವೆ: ಕುಂದಾಪುರ ತಾಲ್ಲೂಕಿನ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯ ಕಂದಲೂರಿನಲ್ಲಿ 55.00 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಯೋಜನೆಗೆ ಅನುಮತಿ ಸಿಗುವ ನಿರೀಕ್ಷೆಯಿದೆ.
ಮರವುರು ಸೇತುವೆ: ಮಂಗಳೂರು-ಅತ್ಯಾಡಿ ರಾಜ್ಯ ಹೆದ್ದಾರಿಯ ಮರವುರು ಬಳಿ 40.00 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ.
ಕಟೀಲು ಸೇತುವೆ: ಮಂಗಳೂರು-ಅತ್ಯಾಡಿ ಹೆದ್ದಾರಿಯ ಕಟೀಲು ಬಳಿ 33.00 ಕೋಟಿ ರೂ. ಮೊತ್ತದ ನೂತನ ಸೇತುವೆ ಕಾಮಗಾರಿಗೆ ಮಂಜೂರಾತಿ ದೊರೆಯುವ ನಿರೀಕ್ಷೆಯಿದೆ.
ಪಾಲಿಮಾರ್ ಸೇತುವೆ ಪುನರ್ ನಿರ್ಮಾಣ: ಮೂಲ್ಕಿ-ಮೂಡಬಿದ್ರೆ ವ್ಯಾಪ್ತಿಯ ಪಾಲಿಮಾರ್ ಸೇತುವೆಯನ್ನು 25.00 ಕೋಟಿ ರೂ. ವೆಚ್ಚದಲ್ಲಿ ಮರುನಿರ್ಮಾಣ ಮಾಡಲು ಸಂಪುಟ ಅನುಮೋದನೆ ನೀಡುವ ಸಾಧ್ಯತೆಯಿದೆ.
ಕುಡಿಯುವ ನೀರು ಮತ್ತು ಇತರೆ ಯೋಜನೆಗಳು
ಬಹುಗ್ರಾಮ ಕುಡಿಯುವ ನೀರು: ಮಂಗಳೂರಿನ ಮಳವೂರು (11.40 ಕೋಟಿ ರೂ.), ಬಂಟ್ವಾಳದ ಕರೋಪಾಡಿ (12.36 ಕೋಟಿ ರೂ.) ಮತ್ತು ಸಂಗಬೆಟ್ಟು (14.90 ಕೋಟಿ ರೂ.) ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ನಿರ್ವಹಣೆಗೆ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.
ಗ್ರಾಮ ಗ್ರಂಥಾಲಯಗಳ ಕಂಪ್ಯೂಟರೀಕರಣ: ಕೇಂದ್ರ ಸರ್ಕಾರದ ಬಂಡವಾಳ ಹೂಡಿಕೆ ವಿಶೇಷ ನೆರವು ಯೋಜನೆಯಡಿ ಹೊಸ ಗ್ರಾಮ ಗ್ರಂಥಾಲಯಗಳಿಗೆ 57.15 ಕೋಟಿ ರೂ. ವೆಚ್ಚದಲ್ಲಿ ಕಂಪ್ಯೂಟರ್ ಹಾಗೂ ಯುಪಿಎಸ್ ಖರೀದಿಸಲು ಒಪ್ಪಿಗೆ ಸಿಗುವ ಸಾಧ್ಯತೆಯಿದೆ.
ಕಾಂಗ್ರೆಸ್ ಭವನಕ್ಕೆ ಜಮೀನು:ಕಡಬ ತಾಲ್ಲೂಕಿನ ಕೋಡಿಂಬಾಳ ಗ್ರಾಮದಲ್ಲಿ 5 ಸೆಂಟ್ಸ್ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡುವ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

