ಡಿಯರ್ ಪ್ರೀತಮ್
ನಿನಗೊಂದು ಸಂತಸದ ವಿಚಾರ ಹೇಳ್ಬೇಕಿತ್ತು. ಈ ಮಾತನ್ನು ನೇರವಾಗಿ ಹೇಳ್ಬೇಕಿತ್ತು. ಆದ್ರೆ ನೀನು ಇಲ್ಲಿ ಇಲ್ವಲ್ಲ. ಅದಕ್ಕೇ ಈ ಪತ್ರದಲ್ಲಿ ಅಕ್ಷರಗಳ ರೂಪದಲ್ಲಿ ಹೇಳುತ್ತಿದ್ದೇನೆ.
ನಮ್ಮ ಪ್ರೀತಿ ಶುರುವಾದ ದಿನದಿಂದಲೂ ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. ನಮ್ಮ ಪ್ರೀತಿಗೆ ಗಣೇಶನ ಆಶೀರ್ವಾದ ಸಿಗಬೇಕು ಅಂತ. ಈಗ ಆ ಆಸೆ ನನಸಾಗಿದೆ. ಮೊನ್ನೆ ಗಣೇಶ ಹಬ್ಬದಂದು, ದೇವರ ಬಳಿ ನಮ್ಮ ಪ್ರೀತಿಯ ಬಗ್ಗೆ ಪ್ರಾರ್ಥನೆ ಮಾಡಿದೆ. ಆಗ ಗಣೇಶನ ಬಲಗಡೆಯಿಂದ ಮಲ್ಲಿಗೆಯ ಹೂವಿನ ಪ್ರಸಾದ ಆಯ್ತು.
ನಮ್ಮಿಬ್ಬರ ಪ್ರೀತಿಯ ದಾರಿಗೆ ಇದ್ದ ಗೊಂದಲಗಳೆಲ್ಲ ನಿಧಾನವಾಗಿ ದೂರ ಆಗ್ತಿದೆ ಅನ್ನಿಸ್ತಿದೆ. ಗಣೇಶನ ಮುಂದೆ ನಿಂತಾಗ, ʻನಮ್ಮ ಪ್ರೀತಿ ನಿಜವಾಗಿದ್ದರೆ ನೀನೇ ದಾರಿ ತೋರಿಸುʼ ಎಂದು ಮನಸ್ಸಿನಲ್ಲಿ ಕೇಳಿಕೊಂಡಿದ್ದೆ. ನಮಗೆ ಸಿಕ್ಕ ಈ ಶುಭ ಸೂಚನೆ ನನ್ನ ಹೃದಯಕ್ಕೆ ತುಂಬಾ ನೆಮ್ಮದಿ ಕೊಟ್ಟಿದೆ.

ಇನ್ನು ಮುಂದೆ ನಮ್ಮ ಪ್ರೀತಿ ಕೇವಲ ನಮ್ಮಿಬ್ಬರ ಕನಸಾಗಿರಬಾರದು. ಗಣೇಶನ ಆಶೀರ್ವಾದದೊಂದಿಗೆ ಸುಂದರವಾದ ಬದುಕಿನ ಪಯಣವಾಗಬೇಕು. ನಿನ್ನ ಕೈ ಹಿಡಿದು, ಜೀವನದ ಪ್ರತಿಯೊಂದು ಸುಖ-ದುಃಖದಲ್ಲೂ ಜೊತೆಯಾಗಿರಬೇಕು ಎಂಬ ನನ್ನ ಆಸೆ ಇನ್ನಷ್ಟು ಗಟ್ಟಿಯಾಗಿದೆ. ಅದೇ ಖುಷಿಯಲ್ಲಿ ಮುಂದಿನ ವರ್ಷ ಹಬ್ಬಕ್ಕೆ ಇಬ್ಬರೂ ಜೋಡಿಯಾಗಿ ಬಂದು ಪೂಜೆ ಮಾಡಿಸ್ತೀವಿ ಅಂತ ಬೇರೆ ದೇವರಿಗೆ ಹೇಳಿ ಬಂದ್ಬಿಟ್ಟೆ!
ದೇವರ ಆಶೀರ್ವಾದದ ಜೊತೆ, ಹಿರಿಯರಿಗೆ ಹೇಳಿ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇನ್ನೇನು ಬಿಡು, ನಮ್ಮ ಪ್ರೀತಿಗೆ ಗಣೇಶನೇ ಹಸಿರು ನಿಶಾನೆ ತೋರಿಸಿದ್ದಾನೆ ಅಂದಮೇಲೆ, ಇನ್ನು ನಮ್ಮ ಬದುಕು ಖಂಡಿತಾ ಸುಂದರವಾಗಿರುತ್ತೆ. ನಿನಗೇನ್ ಅನ್ಸುತ್ತೆ ಪ್ರೀತಮ್?
ನಿನ್ನುತ್ತರಕ್ಕೆ ಕಾದಿರುವ
ನಿನ್ನ ಪ್ರೀತಿಯ ಹುಡುಗಿ ಮೀರಾ

