ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ (Mamata Banerjee), ಅರೂಪ್ ರಾಯ್ ಬಣಗಳಿಗೆ ಚುನಾವಣಾ ಆಯೋಗ (Election Commission) ಶಾಕ್ ಕೊಟ್ಟಿದೆ.
ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಹಾಗೂ ‘ಹೂವು ಮತ್ತು ಹುಲ್ಲು’ ಚುನಾವಣಾ ಚಿಹ್ನೆಯನ್ನ ಚುನಾವಣಾ ಆಯೋಗ ಗುರುವಾರ (ಇಂದು) ತಾತ್ಕಾಲಿಕವಾಗಿ ತಡೆಹಿಡಿದಿದೆ (EC Freezes). ಇದರೊಂದಿಗೆ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಅರೂಪ್ ರಾಯ್, ಋತಬ್ರತಾ ಬ್ಯಾನರ್ಜಿ ನೇತೃತ್ವದ ಎರಡೂ ಬಣಗಳು TMCಯ ಅಧಿಕೃತ ಹೆಸರು ಮತ್ತು ಚಿಹ್ನೆಯನ್ನು ಬಳಸುವುದನ್ನ ಆಯೋಗ ನಿರ್ಬಂಧಿಸಿದೆ.
ಪಕ್ಷದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದ ಹಿನ್ನೆಲೆ ಚುನಾವಣಾ ಆಯೋಗ ಈ ಮಧ್ಯಂತರ ಆದೇಶ ಹೊರಡಿಸಿದೆ. ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITMC) ಹೆಸರಾಗಲಿ, ‘ಹೂವು ಮತ್ತು ಹುಲ್ಲು’ ಚಿಹ್ನೆಯಾಗಲಿ ಯಾವುದೇ ಬಣ ಬಳಸುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗ ಹೇಳಿದ್ದೇನು?
TMCಯೊಳಗೆ ಎರಡು ಪ್ರತಿಸ್ಪರ್ಧಿ ಬಣಗಳಿವೆ. ಒಂದು ಬಣ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿದ್ದರೆ, ಮತ್ತೊಂದು ಅರೂಪ್ ರಾಯ್ ಮತ್ತು ಋತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿದೆ. ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ವಿವಾದವನ್ನು ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಆಯೋಗ ವಿಚಾರಣೆ ನಡೆಸಲಿದೆ.
ಪರ್ಯಾಯ ಹೆಸರು, ಚಿಹ್ನೆ ಸೂಚಿಸಲು ಗಡುವು
ಅಂತಿಮ ನಿರ್ಧಾರ ಹೊರಬೀಳುವವರೆಗೆ ಎರಡೂ ಬಣಗಳು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಎಂಬ ಪಕ್ಷದ ಹೆಸರನ್ನ ಹಾಗೂ ‘ಹೂವು ಮತ್ತು ಹುಲ್ಲು’ ಚುನಾವಣಾ ಚಿಹ್ನೆಯನ್ನ ಬಳಸುವಂತಿಲ್ಲ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಇದರೊಂದಿಗೆ ಎರಡೂ ಬಣಗಳು ತಮಗೆ ಬೇಕಾದ ಮೂರು ಪರ್ಯಾಯ ಪಕ್ಷದ ಹೆಸರುಗಳು ಹಾಗೂ 3 ಮುಕ್ತ ಚುನಾವಣಾ ಚಿಹ್ನೆಗಳ ಆಯ್ಕೆಗಳನ್ನ ಸೆಪ್ಟೆಂಬರ್ 18ರಂದು ಬೆಳಗ್ಗೆ 11 ಗಂಟೆಯೊಳಗೆ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಈ ಆಯ್ಕೆಗಳನ್ನು ಪರಿಗಣಿಸಿ ಆಯೋಗವು ಎರಡೂ ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಲಿದೆ.

