ಬೆಂಗಳೂರು: ಪತಿಯೊಬ್ಬ ಪತ್ನಿ ಮೇಲೆ ಆ್ಯಸಿಡ್ ಎರಚಿ (Acid Attack), ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಜೆಪಿ ನಗರದ ನಾರಾಯಣ ಕ್ಲೀನಿಕ್ (J P Nagar) ಬಳಿ ನಡೆದಿದೆ.
26 ವರ್ಷದ ಮಧುಮಿತ ಹಲ್ಲೆಗೊಳಗಾದ ಮಹಿಳೆ. ಮಧುಮಿತ ಮೂಲತಃ ಕೊಲ್ಕತ್ತಾ ಮೂಲದವಳಾಗಿದ್ದು, ಕಳೆದ ಒಂದೂವರೆ ವರ್ಷದಿಂದ ನಾರಾಯಣ ಕ್ಲೀನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ತಿಂಡಿ ತಿನ್ನಲು ಹೊರಗೆ ಬಂದಿದ್ದ ವೇಳೆ ದಾಳಿ
ಬೆಳಿಗ್ಗೆ 9:15ರ ಸುಮಾರಿಗೆ ಮಧುಮಿತ ತಿಂಡಿ ತಿನ್ನಲು ಹೊರಗೆ ಹೋಗಿದ್ದ ವೇಳೆ ಪತಿ ವೆಂಕಟೇಶ್ ಬೈಕ್‌ನಲ್ಲಿ ಬಂದು ಆಕೆಯನ್ನು ಅಟ್ಟಾಡಿಸಿಕೊಂಡು ಬಂದಿದ್ದಾನೆ.
ಮಧುಮಿತ ಆಸ್ಪತ್ರೆಯ ಪಾರ್ಕಿಂಗ್ ಜಾಗದ ಬಳಿ ಕೂಗಾಡಿಕೊಂಡು ಬಂದಿದ್ದಾಳೆ. ಈ ವೇಳೆ ವೆಂಕಟೇಶ್ ಮಚ್ಚಿನಿಂದ ಹಲ್ಲೆ ನಡೆಸಿ ಆ್ಯಸಿಡ್ ಎರಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಮಹಿಳೆಯ ರಕ್ಷಣೆಗೆ ಮುಂದಾದ ಸ್ಥಳೀಯರು
ಹಲ್ಲೆ ನಡೆಯುತ್ತಿದ್ದ ವೇಳೆ ಸ್ಥಳೀಯರು ಮಧುಮಿತಳ ರಕ್ಷಣೆಗೆ ಮುಂದಾಗಿದ್ದಾರೆ. ಕೆಲವರು ಕಲ್ಲಿನಿಂದ ಹೊಡೆದು ಆರೋಪಿಯನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ರಕ್ಷಣೆಗೆ ಬಂದವರ ಮೇಲೂ ಆರೋಪಿ ಹಲ್ಲೆಗೆ ಮುಂದಾಗಿದ್ದ.
ಪಕ್ಕದ ಸಿಗ್ನಲ್‌ನಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಜೆಪಿ ನಗರ ಪೊಲೀಸರು ವೆಂಕಟೇಶ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮೂನಿ ಕೊನೆಗೂ ವಿಚಾರಣೆಗೆ ಹಾಜರು
ಗಂಭೀರವಾಗಿ ಗಾಯಗೊಂಡಿರುವ ಮಧುಮಿತ ಅವರಿಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಕಲಬುರಗಿಯಲ್ಲಿ ರಾತ್ರೋ ರಾತ್ರಿ 9 ಅಡಿ ಎತ್ತರದ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ

