ಬೆಂಗಳೂರು: ಕೆಪಿಎಸ್ಸಿ(KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಸದಸ್ಯೆ ಡಾ. ಶಾಂತಾ ಹೊಸಮನಿ(Shantha Hosamani) ಕೊನೆಗೂ ಸಿಐಡಿ ಮುಂದೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಕೆಎಎಸ್ ಸೇರಿದಂತೆ 3 ಪ್ರಮುಖ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಕೆಪಿಎಸ್ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ 52ನೇ ಸಿಸಿಹೆಚ್ (ಸೆಷನ್ಸ್) ನ್ಯಾಯಾಲಯ ಕಳೆದ ವಾರ ವಜಾಗೊಳಿಸಿತ್ತು. ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಐಡಿ ಮುಂದೆ ಹಾಜರಾಗಿದ್ದಾರೆ.
ಕೆಎಎಸ್ (KAS), ಪಶುವೈದ್ಯಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ AEE ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದು ಹುದ್ದೆ ಕೊಡಿಸಲು ಮುಂದಾಗಿದ್ದಾರೆ ಎಂಬ ಗಂಭೀರ ಆರೋಪಗಳು ಇವರ ಮೇಲಿವೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿತ್ತು.
ಜಾರಿ ನಿರ್ದೇಶನಾಲಯ ಹಾಗೂ ಸಿಐಡಿ ಪ್ರಕರಣ ತನಿಖೆ ಕೈಗೆತ್ತಿಕೊಂಡ ಬಳಿಕ ಅವರು ತಲೆಮರೆಸಿಕೊಂಡಿದ್ದರು. ಶಾಂತಾ ಹೊಸಮನಿ ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ಲುಕ್ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು. ಇದನ್ನೂ ಓದಿ: ಪಶುವೈದ್ಯಕೀಯ ಆಯ್ತು ಈಗ ಕೆಎಎಸ್ ಪರೀಕ್ಷೆಯಲ್ಲೂ ಅಕ್ರಮ?
ಅಭ್ಯರ್ಥಿಯಿಂದ ಹಣ:
2023-24ರ ಕೆಎಎಸ್ ಪರೀಕ್ಷೆ ಬರೆದು ಸಂದರ್ಶನ ಮುಗಿಸಿ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿ ಮಮಿತಾ ಶಾಂತಾ ಹೊಸಮನಿ ಅವರ ಮೂಲಕ ಅಕ್ರಮವಾಗಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪದ ಬೆನ್ನಲ್ಲೇ ಸಿಐಡಿ ಕಲಬುರಗಿ ನಗರದ ನ್ಯೂ ಓಝಾ ಲೇಔಟ್ನಲ್ಲಿರುವ ಮಮಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು.
ಡಾ. ಶಾಂತಾ ಹೊಸಮನಿ ಅವರು ಜೂನ್ 2021 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದರು. ಆಗಿನ ರಾಜ್ಯ ಸರ್ಕಾರವು ಅವರನ್ನು 6 ವರ್ಷಗಳ ಅವಧಿಗೆ ಅಧಿಕಾರಿಗಳ ವರ್ಗದ (Officer Category) ಅಡಿಯಲ್ಲಿ ಕೆಪಿಎಸ್ಸಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಇದಕ್ಕೂ ಮುನ್ನ ಅವರು ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

