ನವದೆಹಲಿ: ಯುಪಿಐ ವಹಿವಾಟುಗಳ ಮೇಲಿನ ಹೊಸ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಕಟ್ಟುಪಾಡುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಅಮೆರಿಕದ ಒತ್ತಡಕ್ಕೆ ಶರಣಾಗಿ ಭಾರತೀಯರ ಮೇಲೆ ಯುಪಿಐ ತೆರಿಗೆ ವಿಧಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಂದಿರಾ ಗಾಂಧಿ ಉದಾಹರಣೆ ನೀಡಿದ ರಾಹುಲ್
ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ಒಮ್ಮೆ ಇಂದಿರಾ ಗಾಂಧಿಯವರನ್ನು ನೀವು ಎಡಪಂಥೀಯರೇ ಅಥವಾ ಬಲಪಂಥೀಯರೇ ಎಂದು ಕೇಳಲಾಗಿತ್ತು. ಅದಕ್ಕೆ ಅವರು ‘ನಾನು ಎಡಕ್ಕೂ ಹೋಗುವುದಿಲ್ಲ, ಬಲಕ್ಕೂ ಹೋಗುವುದಿಲ್ಲ, ನೆಟ್ಟಗೆ ನಿಲ್ಲುತ್ತೇನೆ’ ಎಂದಿದ್ದರು ಎಂದು ಹೇಳಿದ್ದಾರೆ. ಆದರೆ, ಮೋದಿಯವರು ಅದಕ್ಕೆ ಸಂಪೂರ್ಣ ಭಿನ್ನ. ಅವರು ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ, ಡೊನಾಲ್ಡ್ ಟ್ರಂಪ್ ಮುಂದೆ ಸಂಪೂರ್ಣವಾಗಿ ಅಡ್ಡಬಿದ್ದು ಶರಣಾಗಲು ನಿರ್ಧರಿಸಿದ್ದಾರೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಮೂಲಕ ಭಾರತೀಯರ ಜೇಬಿಗೆ ಕನ್ನಹಾಕಿ, ಅಮೆರಿಕನ್ ಸಂಸ್ಥೆಗಳಿಗೆ ಹಾಗೂ ಅಮೆರಿಕಕ್ಕೆ ಅಪಾರ ಪ್ರಮಾಣದ ಹಣ ಹರಿದುಹೋಗುವಂತೆ ಮಾಡಲಾಗುತ್ತಿದೆ. ಅಮೆರಿಕದ ಎದುರು ಸಾಷ್ಟಾಂಗ ನಮಸ್ಕಾರ ಮಾಡುವುದನ್ನು ನಿಲ್ಲಿಸಿ, ಸ್ವಲ್ಪ ಬೆನ್ನೆಲುಬು ಪ್ರದರ್ಶಿಸಿ ದೇಶದ ಜನರ ಮೇಲಿನ ಈ ಹೊಸ ಯುಪಿಐ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಹೊಸ ಯುಪಿಐ ನಿಯಮ
ರಾಷ್ಟ್ರೀಯ ಪಾವತಿ ನಿಗಮದ ಅಧಿಸೂಚನೆ ಪ್ರಕಾರ, 2,000 ರೂ.ಗಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳ ಮೇಲೆ ಶೇ. 0.4ರಷ್ಟು MDR ಶುಲ್ಕ ಅನ್ವಯಿಸಲಿದೆ. 75,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಈ ಶುಲ್ಕವನ್ನು ಗರಿಷ್ಠ 300 ರೂ.ಗೆ ಸೀಮಿತಗೊಳಿಸಲಾಗಿದೆ. ಇದನ್ನೂ ಓದಿ: ಬಡವರಿಗೆ ನಿವೇಶನ; ತಿಂಗಳಾಂತ್ಯದೊಳಗೆ ಭೂಮಿ ಗುರುತಿಸುವ ಕಾರ್ಯ ಪೂರ್ಣಗೊಳಿಸಿ: ಪರಮೇಶ್ವರ್
ಈ ಶುಲ್ಕವನ್ನು ನೇರವಾಗಿ ಗ್ರಾಹಕರಿಂದ ವಸೂಲಿ ಮಾಡುವುದಿಲ್ಲ. ಬದಲಾಗಿ ವ್ಯಾಪಾರಿಗಳೇ ಪಾವತಿಸಬೇಕಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಸಾಮಾನ್ಯ ಯುಪಿಐ ಪಾವತಿಗಳು ಉಚಿತವಾಗಿರಲಿವೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಆದರೆ, ಸರ್ಕಾರ ಗ್ರಾಹಕರಿಂದ ನೇರವಾಗಿ ಶುಲ್ಕ ವಸೂಲಿ ಮಾಡುವುದಿಲ್ಲ ಎಂದಿದ್ದರೂ, ವ್ಯಾಪಾರಿಗಳು ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಈ ವೆಚ್ಚವನ್ನು ಅಂತಿಮವಾಗಿ ಗ್ರಾಹಕರ ಮೇಲೆಯೇ ಹೊರಿಸಬಹುದು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.ಇದನ್ನೂ ಓದಿ: ಯುಜಿ ನೀಟ್ 2ನೇ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ: ಕೆಇಎ

