– ಪಾಕ್ ರಾಯಭಾರಿಗೆ ಭಾರತದಿಂದ ಸಮನ್ಸ್
ನವದೆಹಲಿ: ಅರಬ್ಬಿ ಸಮುದ್ರದಲ್ಲಿ(North Arabian Sea) ಮಂಗಳವಾರ ಸಂಜೆ ಭಾರತೀಯ ನೌಕಾಪಡೆಯ ಯುದ್ಧನೌಕೆ(Indian Navy) ಮತ್ತು ಪಾಕಿಸ್ತಾನ ನೌಕಾಪಡೆಯ(Pakistan Navy Ship) ಹಡಗಿನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ.
ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ನೌಕೆ ನಿಯಮಿತ ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದಾಗ, ಪಾಕಿಸ್ತಾನದ ಹಡಗು ಅತಿ ವೇಗವಾಗಿ ಚಲಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಯಾವುದೇ ಪ್ರಮುಖ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ದೆಹಲಿಯಲ್ಲಿರುವ ಪಾಕಿಸ್ತಾನದ ಉನ್ನತ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿ ತೀವ್ರ ಪ್ರತಿಭಟನೆ ದಾಖಲಿಸಿದೆ.
ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದ ಈ ಘಟನೆಯು ಯಾವುದೇ ದೊಡ್ಡ ಹಾನಿಯನ್ನುಂಟು ಮಾಡಿಲ್ಲವಾದರೂ, ಪಾಕಿಸ್ತಾನ ನೌಕಾಪಡೆಯ ಹಡಗಿನ ಈ ಅಸುರಕ್ಷಿತ ಮತ್ತು ವೃತ್ತಿಪರವಲ್ಲದ ನಡವಳಿಕೆಯು 1991ರ ಏಪ್ರಿಲ್‌ನಲ್ಲಿ ಉಭಯ ದೇಶಗಳ ನಡುವೆ ಏರ್ಪಟ್ಟ ಸೇನಾ ಸಮರಾಭ್ಯಾಸಗಳು, ಚಲನವಲನಗಳ ಮುನ್ಸೂಚನೆ ಒಪ್ಪಂದದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪಾಕಿಸ್ತಾನದ ಎಲ್ಲಾ ಸೇನಾ ಪಡೆಗಳು ಎಚ್ಚರಿಕೆ ವಹಿಸಬೇಕು ಮತ್ತು ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸಂದೇಶವನ್ನು ಸಂಬಂಧಪಟ್ಟ ಪಾಕ್ ಅಧಿಕಾರಿಗಳಿಗೆ ರವಾನಿಸುವಂತೆ ಪಾಕ್ ರಾಯಭಾರಿಗೆ ತಾಕೀತು ಮಾಡಲಾಗಿದೆ.

