ಶಿವಮೊಗ್ಗ: ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಶಾಸಕರನ್ನೇ ಹೊತ್ತು ಕುಣಿದ ಪೊಲೀಸ್ ಸಿಬ್ಬಂದಿಯನ್ನ (Shivamogga ) ಶಿಸ್ತುಕ್ರಮದ ಭಾಗವಾಗಿ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದ ಬಳಿ ಸಾಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಚನ್ನಬಸಪ್ಪ ಅವರು ಭಾಗಿಯಾಗಿದ್ದರು. ಈ ವೇಳೆ ಶಾಸಕರನ್ನ ಹೊತ್ತು ಕುಣಿದ ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಗಣೇಶ್ ಹಾಗೂ ಪ್ರಕಾಶ್.ಎ.ಕೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ಗಣೇಶ್ ರನ್ನ ತೀರ್ಥಹಳ್ಳಿಯ ಆಗುಂಬೆ ಪೊಲೀಸ್ ಠಾಣೆಗೆ, ಪ್ರಕಾಶ್.ಎ.ಕೆ ರನ್ನ ಸೊರಬದ ಆನವಟ್ಟಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಎಸ್ಪಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಅಮಾವಾಸ್ಯೆ ದಿನ ಒಡವೆಗೆ ಪೂಜೆ ನೆಪದಲ್ಲಿ ವಂಚನೆ – ನಕಲಿ ಜ್ಯೋತಿಷಿ ನಂಬಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆ
ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಣಪತಿಯನ್ನ ಪ್ರತಿಷ್ಟಾಪಿಸಲಾಗಿತ್ತು. ಪೂಜೆಯ ಬಳಿಕ ಅದೇ ದಿನ ಸಂಜೆ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆಗೆ ಮೆರವಣಿಗೆ ನಡೆಸಲಾಗಿತ್ತು.
ಪೂರ್ವ ಸಂಚಾರಿ ಪೊಲೀಸ್ ಠಾಣೆಯಿಂದ ತುಂಗಾ ನದಿಯ ಭೀಮನಮಡು ಕಡೆಗೆ ಸಾಗುತ್ತಿದ್ದ ಮೆರವಣಿಗೆಯಲ್ಲಿ ಶಾಸಕ ಚನ್ನಬಸಪ್ಪರನ್ನ ಟ್ರಾಫಿಕ್ ಠಾಣೆ ಪೊಲೀಸ್ ಸಿಬ್ಬಂದಿ ಹೊತ್ತು ಕುಣಿದಿದ್ದರು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ದಾಳಿ ಎಚ್ಚರಿಕೆ- ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ
ಯೂನಿಫಾರ್ಮ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ, ಶಾಸಕರ ಹೊತ್ತು ಕುಣಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜೊತೆಗೆ ಶಿವಮೊಗ್ಗದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.

