ಮುಂಬೈ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ಶಾಲಾ ದಿನಗಳ ಗೆಳೆಯ 81 ವರ್ಷದ ಅಸ್ಗರ್ ಅಲಿ ವೋರಾ(Asgar Ali Vora) ಅವರಿಗೆ ದಶಕಗಳಿಂದ ಬಾಕಿ ಇದ್ದ ವಿವಾದಿತ ಜಮೀನು(Land) ಕೊನೆಗೂ ಮರಳಿ ಸಿಕ್ಕಿದೆ.
ಮಹಾರಾಷ್ಟ್ರದ ಮೀರಾ-ಭಯಂದರ್ನಲ್ಲಿರುವ ತಮ್ಮ ಜಮೀನನ್ನು ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರ ಹಿಂಬಾಲಕರು ಕಬಳಿಸಿದ್ದಾರೆ ಎಂದು ಆರೋಪಿಸಿ ವೋರಾ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಈ ಭೇಟಿಯ ಕೆಲವೇ ದಿನಗಳಲ್ಲಿ ಶಾಸಕ ನರೇಂದ್ರ ಮೆಹ್ತಾ ಸೈಟಿನ ಹಕ್ಕನ್ನು ಬಿಟ್ಟುಕೊಟ್ಟಿದ್ದು ವೋರಾ ವಿರುದ್ಧ ದಾಖಲಿಸಿದ್ದ ಪೊಲೀಸ್ ದೂರನ್ನು ವಾಪಸ್ ಪಡೆದಿದ್ದಾರೆ.
ಗುಜರಾತ್ನ ವಡ್ನಗರದ ಬಿಎನ್ ಶಾಲೆಯಲ್ಲಿ ಪ್ರಧಾನಿ ಮೋದಿಯವರ ಜೊತೆ ಓದಿದ್ದ ಅಸ್ಗರ್ ಅಲಿ ವೋರಾ, ಸೆಪ್ಟೆಂಬರ್ 8 ರಂದು ಪ್ರಧಾನಿಯವರನ್ನು ಭೇಟಿಯಾಗಿ ತನ್ನ ಜಮೀನನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದರು.
ಏನಿದು ಭೂ ವಿವಾದ?
1989 ರಲ್ಲಿ ಭಯಂದರ್ ಪೂರ್ವದ ನವಘರ್ನಲ್ಲಿ 2,810 ಚದರ ಮೀಟರ್ ಜಮೀನನ್ನು ನೋಂದಾಯಿತ ಒಪ್ಪಂದದ ಮೂಲಕ ಖರೀದಿಸಿದ್ದೆ. ಬಳಿಕ ಈ ಜಾಗವನ್ನು ನಾನು ಯಾರಿಗೂ ಮಾರಾಟ ಮಾಡಿಲ್ಲ ಎಂದು ವೋರಾ ತಿಳಿಸಿದ್ದರು. ಆದರೆ 2011 ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಅರಿವಿಗೆ ಬಾರದಂತೆ ಜಮೀನನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ದಾಳಿ ಎಚ್ಚರಿಕೆ- ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ

ಇದರಲ್ಲಿ ಒಂದು ಭಾಗ ಸ್ವಯಂ ಬಿಲ್ಡರ್ಸ್ ವಶದಲ್ಲಿದ್ದರೆ, ಮತ್ತೊಂದು ಭಾಗ ಶಾಸಕ ನರೇಂದ್ರ ಮೆಹ್ತಾ ಅವರೊಂದಿಗೆ ಗುರುತಿಸಿಕೊಂಡಿರುವ ಸೆವೆನ್ ಇಲೆವೆನ್ ಕನ್ಸ್ಟ್ರಕ್ಷನ್ಸ್ಗೆ ಸೇರಿದೆ ಎಂದು ತೋರಿಸಲಾಗಿತ್ತು. ತಮ್ಮ ಮಾಲೀಕತ್ವದ ಹಕ್ಕು ಇದ್ದರೂ ಮೀರಾ-ಭಯಂದರ್ ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗವು ಈ ವಿವಾದಿತ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತ್ತು ಎಂದು ವೋರಾ ಗಂಭೀರ ಆರೋಪ ಮಾಡಿದ್ದರು.
ಅಧಿಕಾರಿಗಳ ಸಭೆ, ಜಾಗ ವಾಪಸ್
ಪ್ರಧಾನಿ ಭೇಟಿಯ ನಂತರ ಮಹಾರಾಷ್ಟ್ರ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಯಿತು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಪರದೇಶಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ವೋರಾ, ಶಾಸಕ ಮೆಹ್ತಾ, ಮಹಾನಗರ ಪಾಲಿಕೆ ಆಯುಕ್ತೆ ರಾಧಾ ವಿನೋದ್ ಶರ್ಮಾ ಮತ್ತು ನಗರ ಯೋಜಕ ಪುರುಷೋತ್ತಮ್ ಶಿಂಧೆ ಭಾಗವಹಿಸಿದ್ದರು.
ಸಭೆಯಲ್ಲಿ ಶಾಸಕ ನರೇಂದ್ರ ಮೆಹ್ತಾ, ತಾವು ಈ ವಿವಾದಿತ ಜಮೀನಿನ ಮೇಲಿನ ಸ್ವಾಧೀನವನ್ನು ಬಿಟ್ಟುಕೊಡುತ್ತಿರುವುದಾಗಿ ಮತ್ತು ಕಟ್ಟಡ ನಿರ್ಮಾಣ ಅನುಮತಿಯನ್ನು ವಾಪಸ್ ನೀಡುತ್ತಿರುವುದಾಗಿ ನಗರ ಯೋಜನಾ ಇಲಾಖೆಗೆ ಪತ್ರ ಸಲ್ಲಿಸಿದರು. ಅಲ್ಲದೆ ಪೊಲೀಸ್ ಆಯುಕ್ತರಿಗೆ ಪ್ರತ್ಯೇಕ ಪತ್ರ ಬರೆದು ಇಬ್ಬರ ನಡುವೆ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ವೋರಾ ವಿರುದ್ಧದ ದೂರನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೇ ಆ ಭೂಮಿಯನ್ನು 2019ರಲ್ಲಿ ಮೆರ್ವಿನ್ ಫರ್ನಾಂಡಿಸ್ ಅವರಿಂದ ಖರೀದಿಸಲಾಗಿತ್ತು ಎಂದು ಅವರು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ 2015 ರಲ್ಲೇ ಎಫ್ಐಆರ್ ದಾಖಲಾಗಿದ್ದರೂ ಸಿಐಡಿ ವರದಿ ತಡವಾಗಿದ್ದರ ಬಗ್ಗೆ ಪ್ರಶ್ನಿಸಿದ್ದ ವೋರಾ, ಈ ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಭಾಗಿಯಾದ ಬಿಲ್ಡರ್ಗಳು ಹಾಗೂ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

