ಚೆನ್ನೈ (ಕೃಷ್ಣಗಿರಿ): ತಮಿಳುನಾಡಿನ ಹೊಸೂರಿನಲ್ಲಿ ಮಂಗಳವಾರ ಮುಂಜಾನೆ ನಡೆಸಿದ ದಿಢೀರ್ ತಪಾಸಣೆಯಲ್ಲಿ 20ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO) ಸುಮಾರು 25 ಲಕ್ಷ ದಂಡ ವಿಧಿಸಿದ್ದಾರೆ. ಮುಂಜಾನೆ 2 ಗಂಟೆಯಿಂದ ಬೆಳಗಿನ ಜಾವದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತಪಾಸಣಾ ಕಾರ್ಯಾಚರಣೆ ನಡೆಯಿತು.
ಅತಿಯಾದ ಪ್ರಯಾಣ ದರ ವಸೂಲಿ ಮಾಡುತ್ತಿರುವ ಹಾಗೂ ಕಡ್ಡಾಯ ತೆರಿಗೆ ಪಾವತಿಸದ ಆರೋಪ ಎದುರಿಸುತ್ತಿರುವ ಬಸ್‌ಗಳ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಯಿತು. ಕೇರಳ, ಪುದುಚೇರಿ ಹಾಗೂ ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಬಸ್‌ಗಳನ್ನ ಅಧಿಕಾರಿಗಳು ತಪಾಸಣೆ ನಡೆಸಿದರು.

ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ನಿಗದಿತಕ್ಕಿಂತಲೂ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಹಾಗೂ ತೆರಿಗೆ ನಿಯಮಗಳನ್ನ ಪಾಲಿಸುತ್ತಿಲ್ಲ ಎಂಬ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆ ವೆಲ್ಲೂರು ಜಂಟಿ ಸಾರಿಗೆ ಆಯುಕ್ತ ಸುರೇಶ್ ಮತ್ತು ಹೊಸೂರು ಆರ್‌ಟಿಒ ದುರೈಸಾಮಿ ನೇತೃತ್ವದ ತಂಡ ತಪಾಸಣೆ ನಡೆಸಿತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಪ್ರತಿಯೊಂದು ಬಸ್ಸನ್ನು ಅಧಿಕಾರಿಗಳು ತಡೆದು, ಪ್ರಯಾಣ ದರದ ರಸೀದಿಗಳು, ಪರವಾನಗಿಗಳು ಹಾಗೂ ತೆರಿಗೆ ದಾಖಲೆಗಳನ್ನ ಪರಿಶೀಲಿಸಿದರು. ಹಲವು ಬಸ್‌ಗಳಲ್ಲಿ ಮಾನ್ಯ ದಾಖಲೆಗಳು ಇರಲಿಲ್ಲ. ಇನ್ನು ಕೆಲವು ಬಸ್‌ಗಳಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡಿರುವುದು ಪತ್ತೆಯಾಯಿತು. ಅಧಿಕಾರಿಗಳು ಸ್ಥಳದಲ್ಲೇ ದಂಡ ವಿಧಿಸಿ, ಬಸ್ ನಿರ್ವಾಹಕರಿಗೆ ಎಚ್ಚರಿಕೆ ನೀಡಿದರು.

