– 16 ಲಕ್ಷ ವೆಚ್ಚದಲ್ಲಿ ಭವ್ಯ ಮಂಟಪ ನಿರ್ಮಾಣ
ಬೆಂಗಳೂರು: ನಾಡಿನೆಲ್ಲೆಡೆ ವಿನಾಯಕನ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇನ್ನೂ ಒಂದು ವಾರ, ಕೆಲವು ಕಡೆ 15 ದಿನ ಸಂಭ್ರಮ, ಸಡಗರದಿಂದ ಗಣೇಶ ಹಬ್ಬವನ್ನ ಆಚರಣೆ ಮಾಡಲಾಗುತ್ತೆ. ಈ ಬಾರಿ ಬೆಂಗಳೂರಿಗೆ ಕಾಸ್ಟ್ಲಿ ಗಣೇಶ ಎಂಟ್ರಿ ಕೊಟ್ಟಿದ್ದು, ಅಮೆರಿಕನ್ ಡೈಮಂಡ್ (Diamond Ganesha) ಗಣೇಶ ಕೂಡಿಸಲಾಗ್ತಿದೆ.
ವಿಘ್ನ ನಿವಾರಕ ವಿಘ್ನೇಶ್ವರಿಗೆ ನಾಡಿನೆಲ್ಲೆಡೆ ಬಹುದೊಡ್ಡ ಭಕ್ತಗಣವಿದ್ದು, ಗಣೇಶೋತ್ಸವ ದೊಡ್ಡ ಹಬ್ಬವಾಗಿದೆ. ಈ ಹಬ್ಬ ಕೇವಲ ಸಂಭ್ರಮಾಚರಣೆಯ ಸಂಕೇತ ಮಾತ್ರವಲ್ಲ, ಸಹಬಾಳ್ವೆ, ಒಗ್ಗಟ್ಟಿನ ಸಂಕೇತವೂ ಸಹ ಹೌದು. ಪ್ರತಿ ಗಲ್ಲಿ-ಗಲ್ಲಿಗಳಲ್ಲೂ ಗಣೇಶನನ್ನ ಕೂಡಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಬೆಂಗಳೂರಿನ (Bengaluru) ಮಿಲ್ಕ್ ಕಾಲೋನಿಯ ಸ್ವಸ್ತಿಕ ಯುವಕರ ಸಂಘ 41 ವರ್ಷಗಳಿಂದ ಅದ್ಧೂರಿ ಗಣೇಶೋತ್ಸವ (Ganesha Festival) ಆಚರಿಸಿಕೊಂಡು ಬರ್ತಿದೆ.

ಈ ವರ್ಷ ರಾಜಧಾನಿಯ ಅತ್ಯಂತ ದುಬಾರಿಯಾದ ಅಂದ್ರೇ ಬರೋಬ್ಬರಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಅಮೆರಿಕನ್ ಡೈಮಂಡ್, ಮುತ್ತು, ರತ್ನ, ಹವಳ ಉಳ್ಳ ಗಣೇಶ ಮೂರ್ತಿಯನ್ನ ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಈ ಮೂರ್ತಿಯನ್ನ ಸುಮಾರು 3 ತಿಂಗಳ ಶ್ರಮವಹಿಸಿ ಸೊಲ್ಲಾಪುರದ ಕುಶಲ ಕರ್ಮಿಗಳು ತಯಾರಿಸಿದ್ದಾರೆ. ಈ ಅದ್ಬುತವಾದ ಮೂರ್ತಿಯನ್ನ ನೋಡಲು 2 ಕಣ್ಣುಗಳು ಸಾಲದಾಗಿದೆ. ಈ ಏಕದಂತನ ಮೂರ್ತಿ ಸುಮಾರು 5 ಅಡಿಯಷ್ಟು ಎತ್ತರವಿದ್ದು, ಸುಮಾರು 700 ಕೆ.ಜಿಯಷ್ಟು ತೂಕವಿದೆ.

ಇನ್ನೂ ಲಂಬೋದರ ಮೂರ್ತಿಯಷ್ಟೇ ವಿಶೇಷವಾಗಿಲ್ಲ. ಲಂಬೋದರ ಕೂರುವ ಮಂಟಪ ಕೂಡ ಅಷ್ಟೇ ವೈಶಿಷ್ಟ್ಯತೆಯಿಂದ ಕೂಡಿದೆ. ಸುಮಾರು 16 ಲಕ್ಷ ಮೌಲ್ಯದ ಆಂಧ್ರಪ್ರದೇಶದ ಲೇಪಾಕ್ಷಿಯಂತೆ ಭವ್ಯ ಮಂಟಪ ನಿರ್ಮಿಸಲಾಗಿದೆ.

