ಚಂಡೀಗಢ: ಪಂಜಾಬ್‌ನ (Punjab) ಫಜಿಲ್ಕಾ (Fazilka) ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಭಾನುವಾರ ಮುಂಜಾನೆ ಸ್ಫೋಟ ಸಂಭವಿಸಿದ್ದು, ಘಟನೆಯ ಪರಿಣಾಮ ವಶಪಡಿಸಿಕೊಳ್ಳಲಾಗಿದ್ದ ಎರಡು ಕಾರುಗಳ ಗಾಜುಗಳು ಪುಡಿಪುಡಿಯಾಗಿದೆ.
ಜಲಾಲಾಬಾದ್ ಪೊಲೀಸ್ ಠಾಣೆಯ (Jalalabad Police Station) ಮುಖ್ಯ ಗೇಟ್ ಸಮೀಪ ಭಾನುವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಪೊಲೀಸ್ ವಶದಲ್ಲಿದ್ದ ಹಳೆಯ ಎರಡು ವಾಹನಗಳ ಗಾಜುಗಳು ಒಡೆದಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತಿಂದರ್ ಕುಮಾರ್ ತಿಳಿಸಿದ್ದಾರೆ.
ಘಟನೆಯ ಬಳಿಕ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಆದರೆ ಇದು ಗ್ರೆನೇಡ್ ದಾಳಿ ಎಂಬುದನ್ನು ಪೊಲೀಸರು ಈವರೆಗೆ ದೃಢಪಡಿಸಿಲ್ಲ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗಗನ್ ಅಜಿತ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾನುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಫೋಟದಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ. ಆದರೆ ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲೇ ಇಂತಹ ಘಟನೆ ನಡೆದಿರುವುದು ಪಂಜಾಬ್‌ನ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಘಟನೆಯನ್ನು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ತೀವ್ರವಾಗಿ ಟೀಕಿಸಿದ್ದಾರೆ. ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಅವರು ಆರೋಪಿಸಿದ್ದಾರೆ.
ಪಂಜಾಬ್ ಅರಾಜಕತೆಯಲ್ಲಿದೆ. ಪೊಲೀಸ್ ಠಾಣೆಗಳೇ ಸುರಕ್ಷಿತವಾಗಿಲ್ಲದಿದ್ದರೆ, ಪಂಜಾಬಿಗಳು ಹೇಗೆ ಸುರಕ್ಷಿತರಾಗಿರಲು ಸಾಧ್ಯ? ಎಂದು ಹಿರಿಯ ಅಕಾಲಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಪ್ರಶ್ನಿಸಿದ್ದಾರೆ. ಇದು ಕಾನೂನಿನ ಆಡಳಿತವಲ್ಲ, ಗ್ಯಾಂಗ್‌ಸ್ಟರ್‌ಗಳ ಆಡಳಿತವಾಗಿದೆ ಎಂದು ಮಜಿಥಿಯಾ ಆರೋಪಿಸಿದ್ದಾರೆ. ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


