ಮೈಸೂರು: ಗಣೇಶೋತ್ಸವ ಮೆರವಣಿಗೆ(Ganesh Chaturthi Procession) ವಿಚಾರವಾಗಿ ಪೊಲೀಸ್ ಇನ್ಸ್ಪೆಕ್ಟರ್ ನೀಡಿದ ಹೇಳಿಕೆ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಸ್ಥಳವು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.
ಇನ್ಸ್ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಗಣೇಶನ ಮೂರ್ತಿ ಹಿಡಿದು ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಗೆ ಮುಂದಾದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್(R Ashok), ಸಂಸದ ಯದುವೀರ್ ಒಡೆಯರ್(Yaduveer Wadiyar), ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮತ್ತು ಶಾಸಕ ಶ್ರೀವತ್ಸ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿ.ನರಸೀಪುರದ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರು ಗಣೇಶೋತ್ಸವ ಆಚರಣೆ ಮಾಡುವ ಯುವಕರಿಗೆ ಮಸೀದಿ ಮುಂದೆ ಮೆರವಣಿಗೆ ಮಾಡಿ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಆಕ್ರೋಶದಿಂದ ಎಚ್ಚರಿಕೆ ನೀಡಿದ್ದರು ಎನ್ನಲಾದ ವಿಡಿಯೋ ಕಿಚ್ಚು ಹೊತ್ತಿಸಿದೆ. ಈ ಹೇಳಿಕೆಗೆ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ಸ್ಪೆಕ್ಟರ್ ವಿರುದ್ಧ ನೇರ ಸಮರ ಸಾರಿದ್ದಾರೆ. ಇದನ್ನೂ ಓದಿ: ಟಿ ನರಸೀಪುರ ಇನ್ಸ್ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಠಾಣೆಯ ಮುಂದೆ ಬಿಜೆಪಿ ಪ್ರತಿಭಟನೆ
ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. “ರಾಜ್ಯದಲ್ಲಿ ಹಿಂದೂ ವಿರೋಧಿ ಹಾಗೂ ತಾಲಿಬಾನಿ ಸರ್ಕಾರ ಆಡಳಿತ ನಡೆಸುತ್ತಿದೆ” ಎಂದು ಆಕ್ರೋಶ ಹೊರಹಾಕಿದ ಕೇಸರಿ ಪಡೆ, ಅಧಿಕಾರಿಯನ್ನು ಅಮಾನತು ಮಾಡುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಪಟ್ಟುಹಿಡಿಯಿತು.
ಇದನ್ನೂ ಓದಿ: ಪ್ರಿಯಾಂಕ್ ಜೈಲು ಸೇರುವ ಕಾಲ ಹತ್ತಿರ ಬಂದಿದೆ; ಗಣೇಶೋತ್ಸವಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ: ಪ್ರತಾಪ್ ಸಿಂಹ ತಿರುಗೇಟು
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆ ಧಾವಿಸಿತು. ಆದರೆ ಪ್ರತಿಭಟನಾಕಾರರು ಗಣೇಶನ ವಿಗ್ರಹವನ್ನು ಕೈಯಲ್ಲಿ ಹಿಡಿದು ಮೆರವಣಿಗೆ ನಡೆಸಲು ಮುಂದಾದಾಗ, ಪೊಲೀಸರು ಅವರನ್ನು ತಡೆದು ಬಲವಂತವಾಗಿ ವಾಹನಗಳಲ್ಲಿ ತುಂಬಿ ಸ್ಥಳದಿಂದ ಕರೆದೊಯ್ದು ವಶಕ್ಕೆ ಪಡೆದರು. ಸದ್ಯ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

