ಗಣೇಶ ಚತುರ್ಥಿ ಎಂಬುದು ಕೇವಲ ಹಬ್ಬವಲ್ಲ. ಅದು ಶ್ರದ್ಧೆ, ಹೊಸ ಆರಂಭಗಳು ಮತ್ತು ಸಂತೋಷ ಹಾಗೂ ಸಂಭ್ರಮದ ಸಂಕೇತವಾಗಿದೆ. ಈ ಹಬ್ಬದ ಸಮಯದಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಪ್ರತಿಯೊಂದು ಮನೆಯು ಭಕ್ತಿಯಿಂದ, ಬಣ್ಣಗಳಿಂದ, ಸಂಗೀತದಿಂದ ಮತ್ತು ಅವರದ್ದೇ ಆದ ಕೌಟುಂಬಿಕ ಸಂಪ್ರದಾಯಗಳಿಂದ ತುಂಬಿಕೊಂಡಿರುತ್ತದೆ. 2026ರ ಗಣೇಶ ಚತುರ್ಥಿ ಹಬ್ಬವನ್ನು ಸೆಪ್ಟೆಂಬರ್ 14, ಸೋಮವಾರದಂದು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಪ್ರಾರಂಭವಾಗುವ ಈ ಹಬ್ಬವು ಅನಂತ ಚತುರ್ದಶಿಯ ದಿನದಂದು ಮುಕ್ತಾಯವಾಗಲಿದೆ.
ಈ ಹಬ್ಬದ ಮತ್ತೊಂದು ವಿಶೇಷವೆಂದರೆ ಈ ದಿನ ವಿಘ್ನ ವಿನಾಶಕನಿಗೆ 21 ಪತ್ರೆಗಳಿಂದ ಅಲಂಕಾರ ಮಾಡಲಾಗುತ್ತದೆ.
ಹೌದು. ಗಣೇಶ ಚತುರ್ಥಿಯ ದಿನದಂದು ಗಣಪತಿಗೆ 21 ವಿಧದ ಎಲೆಗಳಿಂದ (ಪತ್ರೆಗಳಿಂದ) ಪೂಜೆ ಮಾಡುವುದನ್ನು ‘ಏಕವಿಂಶತಿ ಪತ್ರ ಪೂಜೆ’ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮ ಮತ್ತು ಆಯುರ್ವೇದದಲ್ಲಿ ಈ 21 ಸಂಖ್ಯೆಗೆ ಮತ್ತು ಈ ಎಲೆಗಳಿಗೆ ಆಳವಾದ ರಹಸ್ಯ ಹಾಗೂ ಮಹತ್ವವಿದೆ.
ನಮ್ಮ ದೇಹವು 21 ತತ್ವಗಳಿಂದ (ಪಂಚಭೂತಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು ಮತ್ತು ಮನಸ್ಸು) ಮಾಡಲ್ಪಟ್ಟಿದೆ ಎಂಬ ನಂಬಿಕೆಯಿದೆ. ಈ 21 ತತ್ವಗಳನ್ನು ಭಗವಂತನಿಗೆ ಸಮರ್ಪಿಸುವ ಸಂಕೇತವಾಗಿ 21 ಪತ್ರೆಗಳನ್ನು ಅರ್ಪಿಸಲಾಗುತ್ತದೆ. ಮತ್ತೊಂದೆಡೆ, ಮಳೆಗಾಲದ ನಂತರ ಪ್ರಕೃತಿಯಲ್ಲಿ ಸಿಗುವ ಈ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಪರಿಸರ ಮತ್ತು ಆರೋಗ್ಯವನ್ನು ರಕ್ಷಿಸುತ್ತವೆ. ಹೀಗಾಗಿ ವಿಘ್ನವಿನಾಶಕನಿಗೆ 21 ಪತ್ರೆಗಳಿಂದ ಪೂಜೆ ಸಲ್ಲಿಸಲಾಗುತ್ತದೆ.
ಮಾಚಿ ಪತ್ರೆ (Artemisia)
ಇದು ಮಾನಸಿಕ ಶಾಂತಿ ನೀಡುತ್ತದೆ. ಚರ್ಮ ರೋಗ ಹಾಗೂ ಕ್ರಿಮಿನಾಶಕವಾಗಿ ಕೆಲಸ ಮಾಡುತ್ತದೆ.
ಬೃಹತಿ ಪತ್ರೆ (ಸುಂಡೆಕಾಯಿ ಎಲೆ)
ಕೆಮ್ಮು, ಕಫ ಹಾಗೂ ಉಸಿರಾಟದ ಸಮಸ್ಯೆಗೆ ರಾಮಬಾಣ. ಧೈರ್ಯ ಮತ್ತು ಜ್ಞಾನದ ಸಂಕೇತ.
ಬಿಲ್ವ ಪತ್ರೆ (Bael)
ಶಿವನಿಗೆ ಪ್ರಿಯವಾದ ಇದು ತ್ರಿಗುಣಗಳನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆ ಮತ್ತು ಮಧುಮೇಹಕ್ಕೆ ಒಳ್ಳೆಯದು.
ಗರಿಕೆ ಪತ್ರೆ (Durva)
ಗಣೇಶನಿಗೆ ಅತ್ಯಂತ ಪ್ರಿಯವಾದದ್ದು. ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಮತ್ತು ನರಗಳ ದೌರ್ಬಲ್ಯ ನಿವಾರಿಸುತ್ತದೆ.
ದತ್ತೂರ ಪತ್ರೆ (Ummatti)
ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಆಸ್ತಮಾ ಮತ್ತು ಕೀಲು ನೋವಿನ ನಿವಾರಣೆಗೆ ಆಯುರ್ವೇದದಲ್ಲಿ ಬಳಕೆಯಾಗುತ್ತದೆ.
ಎಲಚಿ ಪತ್ರೆ (ಬೋರೆ ಗಿಡದ ಎಲೆ)
ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚಿಸುತ್ತದೆ. ಪಾಪ ನಿವಾರಕ ಎನ್ನಲಾಗುತ್ತದೆ.
ಉತ್ತರಾಣಿ ಪತ್ರೆ (Apamarga)
ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿ ಹೆಚ್ಚಿಸಲು ಸಹಕಾರಿ. ಹಲ್ಲಿನ ಆರೋಗ್ಯಕ್ಕೆ ಉತ್ತಮ.
ತುಳಸಿ ಪತ್ರೆ (Basil)
ಗಣೇಶ ಹಬ್ಬದ ಈ ಒಂದು ದಿನ ಮಾತ್ರ ಗಣೇಶನಿಗೆ ತುಳಸಿ ಅರ್ಪಿಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಮಾವಿನ ಪತ್ರೆ (Mango)
ಶುಭ ಕಾರ್ಯಗಳ ಸಂಕೇತ. ಗಾಳಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮತ್ತು ಪರಿಸರ ಶುದ್ಧೀಕರಿಸುವ ಗುಣ ಹೊಂದಿದೆ.
ಕಣಗಿಲೆ ಪತ್ರೆ (Karavira)
ಸೌಂದರ್ಯ ಮತ್ತು ಸಮೃದ್ಧಿಯ ಸಂಕೇತ. ಚರ್ಮದ ಅಲರ್ಜಿಗಳನ್ನು ನಿವಾರಿಸಲು ಆಯುರ್ವೇದದಲ್ಲಿ ಬಳಸುತ್ತಾರೆ.
ವಿಷ್ಣುಕ್ರಾಂತಿ ಪತ್ರೆ
ನರಗಳ ಆರೋಗ್ಯಕ್ಕೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಅತ್ಯುತ್ತಮ ಮೂಲಿಕೆ. ಮೋಕ್ಷ ಕಾರಕ ಎನ್ನಲಾಗುತ್ತದೆ.
ದಾಳಿಂಬೆ ಪತ್ರೆ (Pomegranate)
ರಕ್ತಹೀನತೆ ನಿವಾರಿಸಲು ಮತ್ತು ಅಜೀರ್ಣ ಸಮಸ್ಯೆಗೆ ರಾಮಬಾಣ. ಸಂತಾನೋತ್ಪತ್ತಿ ಆರೋಗ್ಯಕ್ಕೆ ಒಳ್ಳೆಯದು.
ದೇವದಾರು ಪತ್ರೆ (Cedar)
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಇದರ ಸುಗಂಧವು ಬ್ಯಾಕ್ಟೀರಿಯಾಗಳನ್ನ ನಾಶಪಡಿಸುತ್ತದೆ.
ಮರುಗ ಪತ್ರೆ (Maruvaka)
ಮನಸ್ಸಿಗೆ ಆಹ್ಲಾದಕರ ಭಾವನೆ ನೀಡುತ್ತದೆ. ಸುಗಂಧಭರಿತವಾಗಿದ್ದು ನೈಸರ್ಗಿಕ ಸ್ಯಾನಿಟೈಸರ್ ಆಗಿ ಕೆಲಸ ಮಾಡುತ್ತದೆ.
ಲಕ್ಕಿ ಪತ್ರೆ (Sindhuvara / Nirgundi)
ವಾತ ಮತ್ತು ಕೀಲು ನೋವುಗಳಿಗೆ ಇದು ಅತ್ಯುತ್ತಮ ಮದ್ದು. ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡುತ್ತದೆ.
ಜಾಜಿ ಪತ್ರೆ (Jasmine)
ಚರ್ಮದ ಆರೋಗ್ಯ ಮತ್ತು ತಲೆನೋವು ನಿವಾರಣೆಗೆ ಸಹಕಾರಿ. ಪ್ರಸನ್ನತೆ ಮತ್ತು ಪ್ರೀತಿಯ ಸಂಕೇತ.
ಗಣಿಕೆ ಪತ್ರೆ (Gandaki)
ಉದರ (ಹೊಟ್ಟೆಯ) ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುತ್ತದೆ. ದೃಷ್ಟಿ ದೋಷ ನಿವಾರಣೆಗೆ ಒಳ್ಳೆಯದು.
ಬನ್ನಿ ಪತ್ರೆ (Shami)
ಶನಿದೋಷ ನಿವಾರಕ ಮತ್ತು ವಿಜಯದ ಸಂಕೇತ. ಉಸಿರಾಟದ ತೊಂದರೆಗಳಿಗೆ ಇದು ಉತ್ತಮ ಮದ್ದು.
ಅರಳಿ ಪತ್ರೆ (Peepal)
ಅತಿ ಹೆಚ್ಚು ಆಮ್ಲಜನಕ ಕೊಡುವ ಮರ. ರಕ್ತದೊತ್ತಡ ನಿಯಂತ್ರಣ ಮತ್ತು ಆತಂಕ ನಿವಾರಣೆಗೆ ಸಹಕಾರಿ.
ಹೊಳೆ ಮತ್ತಿ ಪತ್ರೆ (Arjuna)
ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ರಕ್ತ ಪರಿಚಲನೆಯನ್ನು ಸರಿಪಡಿಸುತ್ತದೆ.
ಎಕ್ಕದ ಪತ್ರೆ (Arka)
ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಸೂರ್ಯನ ಶಕ್ತಿಯ ಸಂಕೇತವಾಗಿದ್ದು, ಚರ್ಮ ರೋಗಗಳಿಗೆ ಮದ್ದಾಗಿದೆ.

