– ರಷ್ಯಾ – ಚೀನಾ ಅಧ್ಯಕ್ಷರ ಕಾರುಗಳ ವಿಶೇಷತೆ ಏನು?
ನವದೆಹಲಿ: ರಾಜಧಾನಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (XI Jinping) ಭಾರತಕ್ಕೆ ಬಂದಿದ್ದು ಅವರ ಭದ್ರತೆ ಮತ್ತು ಅಧಿಕೃತ ವಾಹನಗಳು ಗಮನ ಸೆಳೆದಿವೆ. ಇಬ್ಬರೂ ತಮ್ಮದೇ ದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ವಿಶೇಷ ಆರ್ಮರ್ಡ್ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದು, ರಾಷ್ಟ್ರಾಧ್ಯಕ್ಷರ ಈ ವಾಹನಗಳನ್ನು ಭದ್ರತೆಯ ದೃಷ್ಟಿಯಿಂದ ‘ಚಲಿಸುವ ಭದ್ರಕೋಟೆ’ ಗಳೆಂದು ಪರಿಗಣಿಸಲಾಗುತ್ತದೆ.
ಪುಟಿನ್ ಅವರ ಅಧಿಕೃತ ಕಾರು ಔರಸ್ ಸೆನೆಟ್ (Aurus Senat Car), ರಷ್ಯಾದ ಔರಸ್ ಕಂಪನಿ, ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರಾಧ್ಯಕ್ಷರ ಅಗತ್ಯಗಳನ್ನ ಗಮನದಲ್ಲಿಟ್ಟುಕೊಂಡು ಈ ಕಾರನ್ನ ಅಭಿವೃದ್ಧಿಪಡಿಸಿದೆ. ಸುಮಾರು 7 ಮೀಟರ್ ಉದ್ದದ ಈ ಕಾರು ಸಾಮಾನ್ಯ ಐಷಾರಾಮಿ ಸೆಡಾನ್‌ಗಳಿಗಿಂತ ದೊಡ್ಡದಾಗಿದೆ.

ಪುಟಿನ್ ಕಾರಿನ ವಿಶೇಷತೆ ಏನು?
ಔರಸ್ ಸೆನೆಟ್‌ನಲ್ಲಿ 4.4 ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಜತೆಗೆ ಹೈಬ್ರಿಡ್ ವ್ಯವಸ್ಥೆ ಇದೆ. ಇದರ ಶಕ್ತಿ ಸುಮಾರು 598 ಹಾರ್ಸ್‌ಪವರ್ ಹಾಗೂ ಟಾರ್ಕ್ ಸುಮಾರು 880 ಎನ್‌ಎಂ ಇದೆ. 0 ದಿಂದ 100 ಕಿ.ಮೀ. ವೇಗವನ್ನು ಸುಮಾರು 6 ರಿಂದ 9 ಸೆಕೆಂಡ್‌ಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ ವೇಗ ಸುಮಾರು 249 ಕಿಮೀ ಪ್ರತಿ ಗಂಟೆ ಎನ್ನಲಾಗಿದೆ.
ಔರಸ್ ಸೆನೆಟ್‌ನ ಆರ್ಮರ್ಡ್ ಆವೃತ್ತಿಯಲ್ಲಿ VR10 ಬ್ಯಾಲಿಸ್ಟಿಕ್ ರಕ್ಷಣಾ ವ್ಯವಸ್ಥೆ ಇದೆ ಎಂಬ ವರದಿಗಳಿವೆ. ಬುಲೆಟ್‌ಪ್ರೂಫ್ ಗ್ಲಾಸ್, ರನ್-ಫ್ಲ್ಯಾಟ್ ಟೈರ್‌ಗಳು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣೆ ನೀಡುವ ವ್ಯವಸ್ಥೆಗಳಿವೆ ಎಂದು ಹೇಳಲಾಗಿದೆ. ಬೆಂಕಿ ಹಾಗೂ ರಾಸಾಯನಿಕ ದಾಳಿಯಂತಹ ಪರಿಸ್ಥಿತಿಗಳಲ್ಲೂ ರಕ್ಷಣೆ ನೀಡುವ ವಿಶೇಷ ವ್ಯವಸ್ಥೆಗಳ ಉಲ್ಲೇಖವಿದೆ. ಆದರೆ ರಾಷ್ಟ್ರಾಧ್ಯಕ್ಷರ ವಾಹನಗಳ ನಿಖರ ಭದ್ರತಾ ಸಾಮರ್ಥ್ಯ ಮತ್ತು ಸಂಪೂರ್ಣ ತಾಂತ್ರಿಕ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದಿಲ್ಲ.
ಭದ್ರತೆಯ ಜೊತೆಗೆ ವಾಹನದಲ್ಲಿ ಐಷಾರಾಮಿ ಸೌಲಭ್ಯಗಳಿಗೂ ಆದ್ಯತೆ ನೀಡಲಾಗಿದೆ. ಪ್ರೀಮಿಯಂ ಲೆದರ್ ಆಸನಗಳು, ವುಡ್ ಫಿನಿಷ್, ದೊಡ್ಡ ಸ್ಕ್ರೀನ್‌ಗಳು, ನಿಯಂತ್ರಣ ವ್ಯವಸ್ಥೆಗಳು, ಮುಂಭಾಗ ಮತ್ತು ಹಿಂಭಾಗದ ನಡುವೆ ಪ್ರೈವಸಿ ಡಿವೈಡರ್, ಆಸನಗಳ ಹೀಟಿಂಗ್-ಕೂಲಿಂಗ್ ಹಾಗೂ ಮಸಾಜ್ ಸೌಲಭ್ಯಗಳಿವೆ. ವಿದೇಶ ಪ್ರವಾಸಗಳ ಸಂದರ್ಭದಲ್ಲೂ ಪುಟಿನ್ ಅವರ ಅಧಿಕೃತ ವಾಹನವನ್ನ ಅವರ ಕಾಫಿಲಿನೊಂದಿಗೆ ಕರೆದೊಯ್ಯಲಾಗುತ್ತದೆ. 2025ರಲ್ಲಿ ಚೀನಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಪುಟಿನ್ ಅವರೊಂದಿಗೆ ಔರಸ್ ಸೆನೆಟ್‌ನಲ್ಲಿ ಪ್ರಯಾಣಿಸಿದ್ದರು.

ಜಿನ್‌ಪಿಂಗ್‌ರ ‘ಹಾಂಗ್‌ಕಿ N701’
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಅಧಿಕೃತ ಕಾಫಿಲಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಾರು ಹಾಂಗ್‌ಕಿ N701. ‘ಹಾಂಗ್‌ಕಿ’ ಎಂಬ ಚೀನೀ ಪದದ ಅರ್ಥ ‘ಕೆಂಪು ಧ್ವಜ’. 1958 ರಲ್ಲಿ ಆರಂಭವಾದ ಈ ಬ್ರ್ಯಾಂಡ್ ಚೀನಾದ ಉನ್ನತ ಸರ್ಕಾರಿ ಅಧಿಕಾರಿಗಳು ಹಾಗೂ ಅಧಿಕೃತ ಕಾರ್ಯಕ್ರಮಗಳೊಂದಿಗೆ ದೀರ್ಘಕಾಲದಿಂದ ಗುರುತಿಸಿಕೊಂಡಿದೆ.
N701 ಸಾಮಾನ್ಯ ಗ್ರಾಹಕರಿಗಾಗಿ ತಯಾರಿಸಲಾದ ಕಾರಲ್ಲ. ಇದು ವಿಶೇಷ ಅಧ್ಯಕ್ಷೀಯ ಲಿಮೋಸಿನ್ ಆಗಿದ್ದು, ಸಾಮಾನ್ಯ ಡೀಲರ್‌ಶಿಪ್‌ಗಳಲ್ಲಿ ಖರೀದಿಸಲು ಸಾಧ್ಯವಿಲ್ಲ. 2022ರಲ್ಲಿ ಕ್ಸಿ ಜಿನ್‌ಪಿಂಗ್ ಅವರ ಹಾಂಗ್‌ಕಾಂಗ್ ಭೇಟಿಯ ವೇಳೆ ಈ ಕಾರು ಮೊದಲ ಬಾರಿಗೆ ಸಾರ್ವಜನಿಕವಾಗಿ ಗಮನ ಸೆಳೆಯಿತು. ನಂತರ ಅವರ ಅಧಿಕೃತ ವಿದೇಶ ಪ್ರವಾಸಗಳಲ್ಲೂ ಇದು ಕಾಣಿಸಿಕೊಂಡಿದೆ.
N701ರ ಭದ್ರತೆ ಇನ್ನೂ ರಹಸ್ಯ
ಹಾಂಗ್‌ಕಿ N701ರ ಭದ್ರತಾ ವ್ಯವಸ್ಥೆಗಳ ನಿಖರ ವಿವರಗಳನ್ನು ಚೀನಾ ಸರ್ಕಾರ ಸಾರ್ವಜನಿಕಗೊಳಿಸಿಲ್ಲ. ಆರ್ಮರ್ ಪ್ಲೇಟ್‌ನ ದಪ್ಪ, ಗಾಜಿನ ರಕ್ಷಣಾ ಮಟ್ಟ, ಯಾವ ರೀತಿಯ ದಾಳಿ ಅಥವಾ ಸ್ಫೋಟವನ್ನು ತಡೆದುಕೊಳ್ಳಬಲ್ಲದು ಹಾಗೂ ಇತರ ವಿಶೇಷ ಭದ್ರತಾ ವ್ಯವಸ್ಥೆಗಳ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲ. ಎಂಜಿನ್ ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳೂ ಸಂಪೂರ್ಣವಾಗಿ ಬಹಿರಂಗವಾಗಿಲ್ಲ.

N701 ನಲ್ಲಿ V8 ಅಥವಾ V12 ಎಂಜಿನ್ ಇರಬಹುದು ಎಂಬ ಕೆಲವು ವರದಿಗಳಿದ್ದರೂ ಅವುಗಳನ್ನ ಅಧಿಕೃತ ತಾಂತ್ರಿಕ ಮಾಹಿತಿ ಎಂದು ಪರಿಗಣಿಸಲಾಗುವುದಿಲ್ಲ. ಅಧ್ಯಕ್ಷರ ಭದ್ರತಾ ವಾಹನದ ಸಂಪೂರ್ಣ ತಾಂತ್ರಿಕ ಸಾಮರ್ಥ್ಯವನ್ನ ಬಹಿರಂಗಪಡಿಸದಿರುವುದು ಭದ್ರತಾ ದೃಷ್ಟಿಯಿಂದ ಸಹಜವೆಂದು ವರದಿ ವಿವರಿಸುತ್ತದೆ. ವಿಶಾಲವಾದ ಬಾಡಿ, ದೊಡ್ಡ ಮುಂಭಾಗದ ಗ್ರಿಲ್, ಕ್ರೋಮ್ ಫಿನಿಷ್ ಮತ್ತು ವಿಶಾಲ ಹಿಂಭಾಗದ ಕ್ಯಾಬಿನ್ N701ರ ಪ್ರಮುಖ ವಿನ್ಯಾಸ ಲಕ್ಷಣಗಳಾಗಿವೆ. ವಿದೇಶ ಪ್ರವಾಸಗಳ ವೇಳೆ ಅಧಿಕೃತ ಧ್ವಜಗಳನ್ನ ಅಳವಡಿಸಲು ಮುಂಭಾಗದ ಫೆಂಡರ್‌ನಲ್ಲಿ ವಿಶೇಷ ವ್ಯವಸ್ಥೆಯೂ ಇದೆ.
ಕಾರು ಮಾತ್ರವಲ್ಲ, ರಾಷ್ಟ್ರೀಯ ಪ್ರತಿಷ್ಠೆಯ ಸಂಕೇತ
ಔರಸ್ ಸೆನೆಟ್ ಮತ್ತು ಹಾಂಗ್‌ಕಿ N701 ಎರಡೂ ಸಾಮಾನ್ಯ ಐಷಾರಾಮಿ ಕಾರುಗಳಲ್ಲ. ರಾಷ್ಟ್ರಾಧ್ಯಕ್ಷರ ಭದ್ರತೆ, ಅಧಿಕೃತ ಪ್ರೋಟೋಕಾಲ್ ಹಾಗೂ ಆರಾಮವನ್ನ ಗಮನದಲ್ಲಿಟ್ಟುಕೊಂಡು ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಎರಡೂ ವಾಹನಗಳು ತಮ್ಮ ತಮ್ಮ ದೇಶಗಳ ಸ್ವದೇಶಿ ಆಟೊಮೊಬೈಲ್ ಉದ್ಯಮದ ಸಾಮರ್ಥ್ಯವನ್ನೂ ಪ್ರತಿಬಿಂಬಿಸುತ್ತವೆ.
ಪುಟಿನ್ ಅವರ ಔರಸ್ ಸೆನೆಟ್ ರಷ್ಯಾದ ಆಟೊಮೊಬೈಲ್ ಸ್ವಾವಲಂಬನೆ ಮತ್ತು ಅಧ್ಯಕ್ಷೀಯ ಭದ್ರತೆಯ ಸಂಕೇತವಾಗಿದ್ದರೆ, ಜಿನ್‌ಪಿಂಗ್ ಅವರ ಹಾಂಗ್‌ಕಿ N701 ಚೀನಾದ ರಾಜಕೀಯ ಪರಂಪರೆ, ದೇಶೀಯ ಐಷಾರಾಮಿ ಕಾರು ಉದ್ಯಮ ಮತ್ತು ಜಾಗತಿಕ ಮಟ್ಟದಲ್ಲಿ ಚೀನಾದ ಕೈಗಾರಿಕಾ ಪ್ರಭಾವದ ಸಂಕೇತವಾಗಿ ಗುರುತಿಸಿಕೊಂಡಿದೆ. ರಾಷ್ಟ್ರಾಧ್ಯಕ್ಷರ ಈ ವಾಹನಗಳ ಬಗ್ಗೆ ಬುಲೆಟ್‌ಪ್ರೂಫ್, ಬಾಂಬ್‌ಪ್ರೂಫ್ ಅಥವಾ ಅಣು ದಾಳಿಯನ್ನೂ ತಡೆದುಕೊಳ್ಳಬಲ್ಲವು ಎನ್ನಲಾಗುತ್ತಿದೆ. ಆದರೆ ವಿಶೇಷವಾಗಿ N701ರ ನಿಖರ ಭದ್ರತಾ ಸಾಮರ್ಥ್ಯದ ವಿವರಗಳು ಸಾರ್ವಜನಿಕವಾಗಿಲ್ಲ.

