ವಾಷಿಂಗ್ಟನ್: ಅಮೆರಿಕದಲ್ಲಿ (America) ಉದ್ಯೋಗ ಕಳೆದುಕೊಳ್ಳುವ ಹೆಚ್-1ಬಿ ವೀಸಾ ಸೇರಿದಂತೆ ಕೆಲವು ವರ್ಗಗಳ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಗರಿಷ್ಠ 60 ದಿನಗಳ ‘ಗ್ರೇಸ್ ಪೀರಿಯಡ್’ ಸೌಲಭ್ಯವನ್ನು ರದ್ದುಪಡಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಪ್ರಸ್ತಾವನೆ ಮುಂದಿಟ್ಟಿದೆ.
ಈ ಪ್ರಸ್ತಾವನೆ ಅಂತಿಮ ನಿಯಮವಾಗಿ ಜಾರಿಗೆ ಬಂದರೆ, ಉದ್ಯೋಗ ಕಳೆದುಕೊಂಡ ವಿದೇಶಿ ಉದ್ಯೋಗಿಗಳಿಗೆ ಅಮೆರಿಕದಲ್ಲೇ ಉಳಿದುಕೊಂಡು ಹೊಸ ಉದ್ಯೋಗ ಹುಡುಕುವ ಅವಕಾಶ ಸೀಮಿತವಾಗಲಿದೆ. ಇದರಿಂದ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ತಾಂತ್ರಿಕ ವೃತ್ತಿಪರರ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಪ್ರಸ್ತುತ ನಿಯಮದ ಪ್ರಕಾರ, ಹೆಚ್-1ಬಿ ಸೇರಿದಂತೆ ಕೆಲವು ವಲಸೆ ರಹಿತ ವೀಸಾ ಹೊಂದಿರುವವರು ಉದ್ಯೋಗ ಕಳೆದುಕೊಂಡ ಬಳಿಕ ಗರಿಷ್ಠ 60 ದಿನಗಳವರೆಗೆ ಅಮೆರಿಕದಲ್ಲಿ ಉಳಿಯಬಹುದು. ಈ ಅವಧಿಯಲ್ಲಿ ಹೊಸ ಉದ್ಯೋಗ ಹುಡುಕುವುದು, ವೀಸಾ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದು ಅಥವಾ ಅಮೆರಿಕ ತೊರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅವಕಾಶವಿದೆ. ಉದ್ಯೋಗಿಯನ್ನು ಕಂಪನಿ ವಜಾಗೊಳಿಸಿದರೂ ಅಥವಾ ಉದ್ಯೋಗಿಯೇ ಕೆಲಸ ತೊರೆದರೂ ಈ ಸೌಲಭ್ಯ ಅನ್ವಯಿಸುತ್ತದೆ.
ಉದ್ಯೋಗ ಮುಗಿದ ಕೂಡಲೇ ವೀಸಾ ಸ್ಥಿತಿ ಅಂತ್ಯ?
ಅಮೆರಿಕದ ಗೃಹ ಭದ್ರತಾ ಇಲಾಖೆ ಮುಂದಿಟ್ಟಿರುವ ಪ್ರಸ್ತಾವದ ಪ್ರಕಾರ, ವಿದೇಶಿ ಉದ್ಯೋಗಿಗೆ ಅಮೆರಿಕದಲ್ಲಿ ಉಳಿಯಲು ಆಧಾರವಾಗಿರುವ ಉದ್ಯೋಗವೇ ಕೊನೆಗೊಂಡರೆ, ಅವರ ವಲಸೆರಹಿತ ವೀಸಾ ಸ್ಥಿತಿಯೂ ಅಂತ್ಯಗೊಳ್ಳಬಹುದು. ಅಮೆರಿಕದಲ್ಲಿ ಉಳಿಯಲು ಮತ್ತೊಂದು ಮಾನ್ಯ ಕಾನೂನುಬದ್ಧ ಅನುಮತಿ ಇಲ್ಲದಿದ್ದರೆ ದೇಶ ತೊರೆಯಬೇಕಾಗಬಹುದು. ಇದನ್ನೂ ಓದಿ: ಕಾಳಿ ದೇಗುಲದಲ್ಲಿ ಮೀನಿನ ಭೋಗ್ ಸ್ವೀಕರಿಸಿ ಆಹಾರ ವಿವಾದಕ್ಕೆ ತೆರೆ ಎಳೆದ ಸುವೇಂದು ಅಧಿಕಾರಿ
ಒಂದು ವೇಳೆ ಮತ್ತೊಂದು ಅಮೆರಿಕನ್ ಕಂಪನಿ ಉದ್ಯೋಗ ನೀಡಲು ಸಿದ್ಧವಿದ್ದರೂ, ಹೊಸ ಉದ್ಯೋಗದ ಆಧಾರದ ಮೇಲೆ ಅಮೆರಿಕ ಪ್ರವೇಶಕ್ಕಾಗಿ ವಿದೇಶದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಅಥವಾ ದೂತಾವಾಸದ ಮೂಲಕ ಮರು ಅರ್ಜಿ ಸಲ್ಲಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಉದ್ಯೋಗಿಗಳಿಗೆ ಏಕೆ ಆತಂಕ?
ಅಮೆರಿಕದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಚೀನಾದಂತಹ ದೇಶಗಳಿಂದ ಹೆಚ್-1ಬಿ ವೀಸಾ ಮೂಲಕ ದೊಡ್ಡ ಸಂಖ್ಯೆಯಲ್ಲಿ ನುರಿತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಉದ್ಯೋಗ ಕಳೆದುಕೊಂಡ ನಂತರ ಹೊಸ ಕೆಲಸ ಹುಡುಕಲು ಸದ್ಯ ಇರುವ 60 ದಿನಗಳ ಅವಕಾಶ ರದ್ದಾದರೆ, ವಿಶೇಷವಾಗಿ ಭಾರತೀಯ ತಾಂತ್ರಿಕ ವೃತ್ತಿಪರರಿಗೆ ತಕ್ಷಣವೇ ಹೊಸ ಉದ್ಯೋಗ ಅಥವಾ ಪರ್ಯಾಯ ಕಾನೂನುಬದ್ಧ ವೀಸಾ ಸ್ಥಿತಿ ಪಡೆಯುವ ಒತ್ತಡ ಎದುರಾಗಬಹುದು.
ಹೆಚ್-1ಬಿಗೆ ಮಾತ್ರ ಸೀಮಿತವಲ್ಲ
ಪ್ರಸ್ತಾವಿತ ಬದಲಾವಣೆ ಎಚ್-1ಬಿ ವೀಸಾದಾರರಿಗೆ ಮಾತ್ರ ಅನ್ವಯಿಸುವುದಿಲ್ಲ. E-1, E-2, E-3, H-1B1, L-1, O-1 ಮತ್ತು TN ಸೇರಿದಂತೆ ಹಲವು ವಲಸೆರಹಿತ ವೀಸಾ ವರ್ಗಗಳಿಗೂ ಇದು ಅನ್ವಯಿಸುವ ಸಾಧ್ಯತೆಯಿದೆ. ಈ ವೀಸಾ ಹೊಂದಿರುವವರ ಅವಲಂಬಿತರ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
2016ರಲ್ಲಿ ರೂಪುಗೊಂಡಿದ್ದ ಸೌಲಭ್ಯ
ಉದ್ಯೋಗ ಕಳೆದುಕೊಂಡ ಬಳಿಕ 60 ದಿನಗಳವರೆಗೆ ಅಮೆರಿಕದಲ್ಲಿ ಉಳಿದುಕೊಂಡು ಹೊಸ ಉದ್ಯೋಗ ಹುಡುಕುವ ಅವಕಾಶವನ್ನು 2016ರಲ್ಲಿ ರೂಪಿಸಲಾಗಿದ್ದು, 2017ರಿಂದ ಜಾರಿಗೆ ಬಂದಿತ್ತು. ಹೆಚ್ಚಿನ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ಉದ್ಯೋಗ ಬದಲಾಯಿಸಲು ಸಮಯ ನೀಡುವುದು ಮತ್ತು ಅಮೆರಿಕದ ಕಂಪನಿಗಳಿಗೆ ಅಂತಹ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು.
ಇನ್ನೂ ಅಂತಿಮ ನಿರ್ಧಾರವಾಗಿಲ್ಲ
ಮುಖ್ಯವಾಗಿ, 60 ದಿನಗಳ ಗ್ರೇಸ್ ಪೀರಿಯಡ್ ಈಗಲೇ ರದ್ದಾಗಿಲ್ಲ. ಇದು ಸದ್ಯಕ್ಕೆ ಅಮೆರಿಕ ಸರ್ಕಾರದ ಪ್ರಸ್ತಾವ ಮಾತ್ರ. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ನಡೆಯಲಿದ್ದು, ಸುಮಾರು ಎರಡು ತಿಂಗಳ ಸಾರ್ವಜನಿಕ ಪ್ರತಿಕ್ರಿಯೆ ಅವಧಿಯ ಬಳಿಕವೇ ಅಂತಿಮ ನಿಯಮ ರೂಪುಗೊಳ್ಳಲಿದೆ. ಆದ್ದರಿಂದ ಪ್ರಸ್ತುತ ಹೆಚ್-1ಬಿ ವೀಸಾದಾರರಿಗೆ 60 ದಿನಗಳ ಸೌಲಭ್ಯ ಮುಂದುವರಿದಿದೆ.ಇದನ್ನೂ ಓದಿ: PublicTV Explainer: 1 ಕೆಜಿ ಭತ್ತ ಬೆಳೆಯೋಕೆ 2,000 ಲೀಟರ್ ನೀರು ಬೇಕಾ? – ನೀರಿನ ಮಿತವ್ಯಯಕ್ಕೆ IIT ಮದ್ರಾಸ್‌ನಿಂದ ಹೊಸ ಟೆಕ್ನಾಲಜಿ!
ವರ್ಷಕ್ಕೆ 85 ಸಾವಿರ ಹೆಚ್-1ಬಿ ವೀಸಾ ಮಿತಿ
ಅಮೆರಿಕದ ಕಾನೂನಿನ ಪ್ರಕಾರ ಪ್ರತಿ ವರ್ಷ ಸಾಮಾನ್ಯವಾಗಿ 65,000 ಎಚ್-1ಬಿ ವೀಸಾಗಳ ಮಿತಿ ಇದೆ. ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಉನ್ನತ ಪದವಿ ಪಡೆದವರಿಗೆ ಹೆಚ್ಚುವರಿಯಾಗಿ 20,000 ವೀಸಾಗಳ ಅವಕಾಶವಿದೆ. ವಿಶೇಷ ತಾಂತ್ರಿಕ ಅಥವಾ ಪರಿಣತಿ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಎಚ್-1ಬಿ ವೀಸಾ ಬಳಸಲಾಗುತ್ತದೆ. ಟ್ರಂಪ್ ಆಡಳಿತದ ಈ ಪ್ರಸ್ತಾವ ಜಾರಿಗೆ ಬಂದರೆ, ಉದ್ಯೋಗ ಕಳೆದುಕೊಳ್ಳುವ ವಿದೇಶಿ ವೃತ್ತಿಪರರಿಗೆ ಅಮೆರಿಕದಲ್ಲೇ ಉಳಿದು ಹೊಸ ಉದ್ಯೋಗ ಹುಡುಕುವ ಪ್ರಕ್ರಿಯೆ ಮತ್ತಷ್ಟು ಕಠಿಣವಾಗುವ ಸಾಧ್ಯತೆಯಿದೆ.

