ಬೆಂಗಳೂರು: ನನಗೆ ಬಾಡಿಗೆ ಮನೆ ಸಿಕ್ಕಿದ ತಕ್ಷಣ ಹಳೆ ಬಂಗಲೆಯನ್ನು(Bungalow) ಖಾಲಿ ಮಾಡುತ್ತೇನೆ ಎಂದು ಮಾಜಿ ಸಚಿವ ಮಹದೇವಪ್ಪ(Mahadevappa) ಹೇಳಿದ್ದಾರೆ.
ನಗರದ ಕ್ರೆಸೆಂಟ್ ರಸ್ತೆಯ ನಂ. 2 ಸರ್ಕಾರಿ ನಿವಾಸವನ್ನು ತೆರವುಗೊಳಿಸುವ ಹಾಗೂ ನವೀಕರಣ ಕಾಮಗಾರಿ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಅವರು ಪ್ರತಿಕ್ರಿಯಿಸಿದರು.
ಈ ಬಂಗಲೆ ಈಗ ಬೈರತಿ ಸುರೇಶ್(Byrathi Suresh) ಅವರಿಗೆ ಹಂಚಿಕೆಯಾಗಿದೆ. ಹೀಗಾಗಿ ಅವರು ಖಾಲಿ ಮಾಡುವಂತೆ ಕೇಳಿದ್ದಾರೆ. ಅವರಿಗೆ ತೊಂದರೆ ಇರುವುದರಿಂದಲೇ ಬೇಗ ಖಾಲಿ ಮಾಡಲು ಒತ್ತಾಯಿಸುತ್ತಿರಬಹುದು, ಇದರಲ್ಲಿ ಅವರ ತಪ್ಪೇನೂ ಇಲ್ಲ. ಇಲ್ಲಿ ಹಿರಿಯ-ಕಿರಿಯ ಎಂಬ ಪ್ರಶ್ನೆಯೇ ಬರುವುದಿಲ್ಲ. ಅವರು ಹಾಲಿ ಸಚಿವರಾಗಿದ್ದು, ಅವರ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಮಹದೇವಪ್ಪ ಹೇಳಿದರು. ಇದನ್ನೂ ಓದಿ: ಸರ್ಕಾರಿ ಬಂಗಲೆಗಾಗಿ ಹಾಲಿ, ಮಾಜಿ ಸಚಿವರ ಫೈಟ್ – ಮಹದೇವಪ್ಪ ವಾಸವಿರುವಾಗಲೇ ಜೆಸಿಬಿ ಘರ್ಜನೆ
ಈ ಹಿಂದೆ ಸದನದಲ್ಲೂ ಬೈರತಿ ಸುರೇಶ್ ಅವರು ನಾನು ಆ ಮನೆಗೆ ಬರಬೇಕಣ್ಣ ಎಂದಿದ್ದರು. ಆಗಲೂ ನಾನು ಮನೆ ಹುಡುಕುತ್ತಿದ್ದೇನೆ, ಸಿಕ್ಕ ತಕ್ಷಣ ಖಾಲಿ ಮಾಡುತ್ತೇನೆ ಎಂದೇ ಹೇಳಿದ್ದೆ. ಈ ವಿಚಾರದಲ್ಲಿ ನಾನು ಯಾರ ಮೇಲೂ ತಪ್ಪು ಹುಡುಕುವುದಿಲ್ಲ ಎಂದು ತಿಳಿಸಿದರು.
