ಬೆಂಗಳೂರು: ರಾಜ್ಯದ 175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸರ್ಕಾರದ ಬರ ಪಟ್ಟಿಯಲ್ಲಿ ತನ್ನ ಕ್ಷೇತ್ರ ಸೇರಿಸದೆ ಇದ್ದರೆ ಉಪವಾಸ ಮಾಡುವ ಎಚ್ಚರಿಕೆ ನೀಡಿರುವ ಕಾಂಗ್ರೆಸ್ ಶಾಸಕನ ವಿಚಾರಕ್ಕೆ X ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ 101 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ ದಿನವೇ ನಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದೆ.
ರಾಜ್ಯದ 175 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ನಾನೇ ಸ್ವತಃ ಪ್ರವಾಸ ಮಾಡಿ ಭೀಕರ ಬರ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ಬಂದಿದ್ದೇನೆ ಎಂದು ಪತ್ರ ಕೂಡ ಬರೆದಿದ್ದೆ. ಆದರೆ ಭ್ರಷ್ಟಾಚಾರ, ಅವೈಜ್ಞಾನಿಕ ಯೋಜನೆಗಳ ಹೆಸರಿನಲ್ಲಿ ಖಜಾನೆ ಖಾಲಿ ಮಾಡಿ ಸಂಪೂರ್ಣ ದಿವಾಳಿಯಾಗಿರುವ ಈ ದರಿದ್ರ ಕಾಂಗ್ರೆಸ್ ಸರ್ಕಾರ, ಬರ ಘೋಷಣೆಯಲ್ಲೂ ಚೌಕಾಸಿ ಮಾಡುತ್ತಾ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ.
ಈಗ ಸ್ವತಃ ಮುದ್ದೇಬಿಹಾಳ ಕಾಂಗ್ರೆಸ್ ಶಾಸಕ ಸಿ.ಎಸ್. ನಾಡಗೌಡ ಅವರೇ ತಮ್ಮ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಕೆ ನೀಡುತ್ತಿರುವುದು ಈ ಸರ್ಕಾರದ ರೈತ ವಿರೋಧಿ ಧೋರಣೆಗೆ ಅತಿದೊಡ್ಡ ಸಾಕ್ಷಿ.
‘By birth I am an Agriculturist’ (ನಾನು ಹುಟ್ಟಿನಿಂದಲೇ ರೈತ) ಎಂದು ಕರೆದುಕೊಳ್ಳುವ ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟದ ಅರಿವಾಗಲಿ, ಕೃಷಿ ಕ್ಷೇತ್ರದ ಬಗ್ಗೆ ಕನಿಷ್ಠ ಕಾಳಜಿಯಾಗಲಿ ಇಲ್ಲ. ಇದನ್ನೂ ಓದಿ: ಸರ್ಕಾರಿ ಬಂಗಲೆಗಾಗಿ ಹಾಲಿ, ಮಾಜಿ ಸಚಿವರ ಫೈಟ್ – ಮಹದೇವಪ್ಪ ವಾಸವಿರುವಾಗಲೇ ಜೆಸಿಬಿ ಘರ್ಜನೆ
ನನ್ನ ಸ್ಪಷ್ಟ ಆಗ್ರಹ ಇಷ್ಟೇ. ತಕ್ಷಣವೇ ಮುದ್ದೇಬಿಹಾಳ ಸೇರಿದಂತೆ ರಾಜ್ಯದ 175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ 5,000 ಕೋಟಿ ರೂ. ವಿಕೋಪ ಪರಿಹಾರ ನಿಧಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೆ ಎಕರೆಗೆ 50,000 ರೂ. ತುರ್ತು ಪರಿಹಾರ ಒದಗಿಸಬೇಕು.
ಇನ್ನೂ ತಡಮಾಡಿದರೆ ಅನ್ನದಾತರ ಶಾಪ ಮತ್ತು ಕಣ್ಣೀರಿನಲ್ಲಿ ಈ ಕಾಂಗ್ರೆಸ್ ಸರ್ಕಾರ ಕೊಚ್ಚಿಹೋಗುವುದು ನಿಶ್ಚಿತ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೈ ಬೈ ಪಪ್ಪಾ ಎಂದು ಚೆನಾಬ್ ನದಿಗೆ ಜಿಗಿದ ಯುವತಿ – ವಿಡಿಯೋ ವೈರಲ್
