ಇಸ್ಲಾಮಾಬಾದ್: ಎರಡು ಪ್ರತ್ಯೇಕ ದಾಳಿಗಳಲ್ಲಿ 25 ಪಾಕಿಸ್ತಾನಿ ಸೈನಿಕರನ್ನು (Pakistani Soldiers) ಕೊಂದಿರುವುದಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BAL) ಹೇಳಿಕೊಂಡಿದೆ. ಕಳೆದ ಕೆಲವು ತಿಂಗಳಲ್ಲಿ ಬಲೂಚ್ ಪ್ರತ್ಯೇಕತಾವಾದಿಗಳು ನಡೆಸಿದ ಅತಿದೊಡ್ಡ ದಾಳಿಗಳಲ್ಲಿ ಇದೂ ಒಂದಾಗಿದೆ.
ಈ ಬೆಳವಣಿಗೆಯಿಂದ ಬಲೂಚಿಸ್ತಾನದಲ್ಲಿ ಹಿಂಸಾಚಾರ ಏರಿಕೆ ಕಂಡಿದ್ದು, ಇಸ್ಲಾಮಾಬಾದ್ನಿಂದಲೂ ಪ್ರತೀಕಾರಕ್ಕೆ ಕಾರಣವಾಗಿದೆ. ಅಲ್ಲದೇ ಸ್ವತಂತ್ರ ದೇಶಕ್ಕಾಗಿ ಹೋರಾಟ ನಡೆಸುತ್ತಿರುವ ಬಲೂಚಿಸ್ತಾನ್ (Balochistan) ಲಿಬರೇಶನ್ ಆರ್ಮಿ, ಸ್ಫೋಟಗಳು, ಗುಂಡಿನ ಚಕಮಕಿ ಹಾಗೂ ಪಾಕಿಸ್ತಾನಿ ಸೇನಾ ಟ್ರಕ್ಗಳಿಗೆ ಬೆಂಕಿ ಹಚ್ಚುತ್ತಿರುವ ಸಿನಿಮೀಯ ಶೈಲಿಯ ವಿಡಿಯೋವನ್ನು ಸಹ ಹಂಚಿಕೊಂಡಿದೆ.
ಬಿಎಲ್ಎ ಫತೇ ಸ್ಕ್ವಾಡ್ನ ಹೋರಾಟಗಾರರು ಒಂದು ದಿನದ ಹಿಂದಷ್ಟೇ ಜಿಯಾರತ್ ಕ್ರಾಸ್ನಲ್ಲಿ ಪಾಕ್ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದರು. 2 ವಾಹನಗಳನ್ನ ಸುಟ್ಟುಹಾಕಿದ್ದರು. ಈ ವೇಳೆ 18 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ರೆ, ಐವರು ಎಸ್ಕೇಪ್ ಆದರು. ಮತ್ತೊಂದು ದಾಳಿಯಲ್ಲಿ 7 ಸೈನಿಕರನ್ನ ಹತ್ಯೆ ಮಾಡಲಾಗಿದೆ ಎಂದು ಪ್ರತ್ಯೇಕತಾವಾದಿ ಗುಂಪು ಹೇಳಿಕೊಂಡಿದೆ.

ಬಿಎಲ್ಎಯ ಬಿಡುಗಡೆ ಮಾಡಿದ ಸಿನಿಮೀಯ ಶೈಲಿಯ ವಿಡಿಯೋದಲ್ಲಿ, ಪಾಕಿಸ್ತಾನಿ ಮಿಲಿಟರಿ ವಾಹನಗಳಿಗೆ ಬಲೂಚ್ ಹೋರಾಟಗಾರರು ಬೆಂಕಿ ಹಚ್ಚುತ್ತಿರುವುದನ್ನು ತೋರಿಸಿದೆ. ಮಿಲಿಟರಿ ಟ್ರಕ್ಗಳ ಸುತ್ತಲೂ ಹೆಣಗಳ ರಾಶಿ ಹರಡಿಕೊಂಡಿದೆ. ಮತ್ತೊಂದು ಕ್ಲಿಪ್ನಲ್ಲಿ ಶಸ್ತ್ರಸಜ್ಜಿತ ಹೋರಾಟಗಾರರು ಹಾನಿಗೊಳಗಾದ ಸೇನಾ ಟ್ರಕ್ಗಳಿಂದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಬಲೂಚ್ ಆರ್ಮಿಯ ಫತೇಹ್ ಸ್ಕ್ವಾಡ್ ಹೇಗೆ ಕೆಲಸ ಮಾಡುತ್ತೆ?
ಫತೇಹ್ ಸ್ಕ್ವಾಡ್ ಅನ್ನೋದು ಬಲೂಚ್ ಲಿಬರೇಶನ್ ಆರ್ಮಿಯ ಒಂದು ಯುದ್ಧ ಘಟಕವಾಗಿದೆ. ಇದು ಬಲೂಚಿಸ್ತಾನದ ಪರ್ವತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಗೆರಿಲ್ಲಾ ಯುದ್ಧ ಮತ್ತು ಹೆಚ್ಚಿನ ಅಪಾಯಕಾರಿ ಹೊಂಚು ದಾಳಿಗಳಲ್ಲಿ ಪರಿಣತಿ ಪಡೆದಿದೆ. 2025ರ ಮಾರ್ಚ್ನಲ್ಲಿ ನಡೆದ ಜಾಫರ್ ಎಕ್ಸ್ಪ್ರೆಸ್ ಕಿಡ್ನ್ಯಾಪ್ ಪ್ರಕರಣದ ಹಿಂದೆಯೂ ಬಲೂಚ್ ಸಂಘಟನೆಯ ಕೈವಾಡವಿದೆ ಎಂದು ವರದಿಗಳು ತಿಳಿಸಿವೆ.
