ಮಡಿಕೇರಿ: ಕಸ್ತೂರಿರಂಗನ್ ವರದಿ (Kasturirangan Report) ವಿಚಾರದಲ್ಲಿ ಕೇಂದ್ರ ಸರ್ಕಾರ ಹೊರಡಿಸುತ್ತಿರುವ ಅಧಿಸೂಚನೆಗಳಿಗೆ ಕರ್ನಾಟಕದಿಂದ ನಿರಂತರವಾಗಿ ಆಕ್ಷೇಪಣೆ ಸಲ್ಲಿಕೆಯಾಗುತ್ತಿದೆ. ಇದೀಗ ಮತ್ತೊಮ್ಮೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಹಿಂದಿನ ಆಕ್ಷೇಪಣೆಗಳನ್ನ ಪರಿಗಣಿಸದೇ ಮತ್ತೆ ಮತ್ತೆ ಅಧಿಸೂಚನೆ ಹೊರಡಿಸುತ್ತಿರುವುದಕ್ಕೆ ಕೊಡಗಿನ (Kodagu) ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಸ್ತೂರಿರಂಗನ್ ವರದಿಯನ್ನು ಕೊಡಗಿನ ಜನರು ಹಲವು ಸಂದರ್ಭಗಳಲ್ಲಿ ವಿರೋಧಿಸಿದ್ದಾರೆ. ಮೊದಲ ಅಧಿಸೂಚನೆಯಿಂದ ಹಿಡಿದು ನಂತರದ ಅಧಿಸೂಚನೆಗಳವರೆಗೂ ಜಿಲ್ಲೆಯ ಜನರು ಸೇರಿದಂತೆ ರಾಜ್ಯ ಸರ್ಕಾರವೂ ತನ್ನ ಆಕ್ಷೇಪಣೆಗಳನ್ನು ಸ್ಪಷ್ಟವಾಗಿ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ (ಸೆ.4) ಮಡಿಕೇರಿ ನಗರದ ಖಾಸಗಿ ಹೋಟೆಲ್‌ನಲ್ಲಿ ರಾಜಕೀಯ ರಹಿತವಾಗಿ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ರಾಜಕೀಯ ನಾಯಕರು ಕಸ್ತೂರಿರಂಗನ್ ವರದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

5ನೇ, 6ನೇ ಹಾಗೂ 2ನೇ ಹಂತದ ಅಧಿಸೂಚನೆಗಳನ್ನ ಗಮನಿಸಿದರೂ ಮೂಲ ಅಂಶಗಳಲ್ಲಿ ಯಾವುದೇ ದೊಡ್ಡ ಬದಲಾವಣೆ ಕಾಣಿಸುತ್ತಿಲ್ಲ ಎಂಬುದು ಸರ್ಕಾರದ ವಾದವಾಗಿದೆ. ಈ ಹಿಂದೆ ಸಲ್ಲಿಸಿದ್ದ ಆಕ್ಷೇಪಣೆಗಳ ಮೇಲೆಯೇ ಮತ್ತೆ ಆಕ್ಷೇಪಣೆ ಸಲ್ಲಿಸುವಂತೆ ಕೇಳಲಾಗುತ್ತಿದೆ. ಹಾಗಾದರೆ ಹಿಂದಿನ ಆಕ್ಷೇಪಣೆಗಳ ಸ್ಥಿತಿ ಏನು? ಅವುಗಳನ್ನು ಪರಿಗಣಿಸಿ ಏನು ತೀರ್ಮಾನ ಕೈಗೊಳ್ಳಲಾಗಿದೆ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಕಸ್ತೂರಿರಂಗನ್ ವರದಿಯನ್ನ ಸಂಪೂರ್ಣವಾಗಿ ತಿರಸ್ಕರಿಸುವುದಲ್ಲ. ಪರಿಸರ ಸಂರಕ್ಷಣೆ ಅಗತ್ಯ ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಜೀವನೋಪಾಯಕ್ಕೆ ತೊಂದರೆಯಾಗಬಾರದು ಎಂಬುದು ಪಶ್ಚಿಮ ಘಟ್ಟಗಳನ್ನು (Western Ghats) ಹೊಂದಿಕೊಂಡಿರುವ ಹಲವಾರು ಗ್ರಾಮಸ್ಥರ ನಿಲುವಾಗಿದೆ.
ಕಸ್ತೂರಿರಂಗನ್ ವರದಿಯ ಪ್ರಮುಖ ಉದ್ದೇಶ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿದೆ. ಗಣಿಗಾರಿಕೆ, ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವ ಚಟುವಟಿಕೆಗಳ ಮೇಲೆ ನಿಯಂತ್ರಣ ಅಗತ್ಯ ಎಂಬುದನ್ನು ರಾಜ್ಯವೂ ಒಪ್ಪುತ್ತದೆ. ಆದರೆ ಆ ನಿಯಮಗಳನ್ನು ಜನವಸತಿ ಹಾಗೂ ಕೃಷಿ ಪ್ರದೇಶಗಳ ಮೇಲೂ ಒಂದೇ ರೀತಿಯಲ್ಲಿ ಅನ್ವಯಿಸುವುದು ಸರಿಯಲ್ಲ ಎಂಬ ಆಕ್ಷೇಪವಿದೆ.

ಕೊಡಗಿನ ಹಲವು ಗ್ರಾಮಗಳಲ್ಲಿ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕಾಫಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಹೀಗಿರುವಾಗ ಜನವಸತಿ ಹಾಗೂ ಕೃಷಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವುದರಿಂದ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಕೊಡಗಿನ ಬ್ರಹ್ಮಗಿರಿ, ತಲಕಾವೇರಿ, ಪುಷ್ಪಗಿರಿ ಸೇರಿದಂತೆ ಹಲವು ಪ್ರದೇಶಗಳು ಈಗಾಗಲೇ ಸಂರಕ್ಷಿತ ವಲಯಗಳಾಗಿವೆ. ಈ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳನ್ನು ಮತ್ತಷ್ಟು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವುದರಿಂದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನರ ಅಗತ್ಯಗಳಿಗೆ ಸಂಬಂಧಿಸಿದ ಅನುಮತಿಗಳ ಮೇಲೆ ಪರಿಣಾಮ ಬೀರುವ ಆತಂಕವೂ ಇದೆ. ಪರಿಸರ ಸಂರಕ್ಷಣಾ ಕಾಯ್ದೆಯಡಿ ಪರಿಸರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಆದರೆ ಸ್ಥಳೀಯ ಪರಿಸ್ಥಿತಿ, ಜನರ ಜೀವನೋಪಾಯ ಹಾಗೂ ಕೃಷಿ ಚಟುವಟಿಕೆಗಳನ್ನು ಪರಿಗಣಿಸಿಯೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ಇದೇ ತಿಂಗಳು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸಿ, ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಗೆ ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಲು ಮುಂದಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.
