ಚಿಕ್ಕಬಳ್ಳಾಪುರ: ಸರ್ಕಾರಿ ಶಾಲಾ ಮಕ್ಕಳು (Government School Children) ಹಾಗೂ ಅನಾಥಾಶ್ರಮದ ಮಕ್ಕಳಿಗೆ ಮುಂಬೈ ಪ್ರವಾಸದ ಭಾಗ್ಯ ಸಿಕ್ಕಿದ್ದು, ಮೊದಲ ಬಾರಿಗೆ ವಿಮಾನ ಹತ್ತಿದ ಖುಷಿಯಲ್ಲಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿದೆ.
ದೇವನಹಳ್ಳಿ ತಾಲ್ಲೂಕಿನ ಮಲ್ಲೇಪುರ ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಸರ್ಕಾರಿ ಶಾಲಾ ಹಾಗೂ ಅನಾಥಾಶ್ರಮದ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಮುಂಬೈ ಪ್ರವಾಸ ಕೈಗೊಂಡಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bengaluru Airport) ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ ಮಕ್ಕಳು, ಇದೇ ಮೊದಲ ಬಾರಿಗೆ ವಿಮಾನ ಹತ್ತಿದ ಸಂಭ್ರಮದಲ್ಲಿದ್ದಾರೆ.

ಮುಂಬೈ ಪ್ರವಾಸದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಚೈತ್ಯಭೂಮಿ, ನಿವಾಸ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳಿಗೆ ಮಕ್ಕಳು ಭೇಟಿ ನೀಡಲಿದ್ದಾರೆ. ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಧನೆ ಹಾಗೂ ಚರಿತ್ರೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರವಾಸ ಆಯೋಜಿಸಲಾಗಿದೆ. ದೇವನಹಳ್ಳಿ ಭಾಗದ ಸಮಾಜ ಸೇವಕ ಎಂ.ಪಿ ಗಿರೀಶ್ ಅವರು ಮಕ್ಕಳಿಗಾಗಿ ಈ ಪ್ರವಾಸ ಆಯೋಜಿಸಿದ್ದಾರೆ. ಎರಡು ದಿನಗಳ ಕಾಲ ಮುಂಬೈನ ಪ್ರಮುಖ ಪ್ರವಾಸಿ ತಾಣಗಳನ್ನ ಮಕ್ಕಳು ವೀಕ್ಷಿಸಲಿದ್ದಾರೆ. ಮೊದಲ ಬಾರಿಗೆ ವಿಮಾನ ಹತ್ತುವ ಕನಸು ನನಸಾದ ಖುಷಿಯಲ್ಲಿ ಮಕ್ಕಳು ಸಂತಸ ಹಂಚಿಕೊಂಡಿದ್ದಾರೆ.

ಮುಂಬೈ ನೋಡುವ ಸಂಭ್ರಮ…
ಅಂಬೇಡ್ಕರ್ ಅವರ ಜೀವನದ ಕುರಿತು ಅರಿವು ಮೂಡಿಸುವ ವಿಶೇಷ ಪ್ರವಾಸ ಇದಾಗಿದೆ. ಸರ್ಕಾರಿ ಶಾಲಾ ಹಾಗೂ ಅನಾಥಾಶ್ರಮದ ಮಕ್ಕಳಿಗೆ ಈ ಪ್ರವಾಸ ಹೊಸ ಅನುಭವದ ಜೊತೆಗೆ ಶಿಕ್ಷಣ ಮತ್ತು ಪ್ರೇರಣೆಯ ಅನುಭವವಾಗಲಿದೆ ಅಂತಾರೆ ಪ್ರವಾಸ ಆಯೋಜಕ ಗಿರೀಶ್.
