– ದುರ್ಗಮ ಹಾದಿ, ಇಳಿಜಾರು ಪ್ರದೇಶ, ಹಾವುಗಳು, ಚಿರತೆಗಳ ಕಾಟ ಸಹಿಸಿಕೊಂಡು ಮಕ್ಕಳಿಗೆ ಪಾಠ
ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರ ನಂತರ ಶಿಕ್ಷಕರು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರು ಕೇವಲ ವಿಷಯಗಳನ್ನಷ್ಟೇ ಬೋಧಿಸುವುದಿಲ್ಲ, ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಗಳು, ಆತ್ಮವಿಶ್ವಾಸ ಮತ್ತು ಜೀವನ ಮೌಲ್ಯಗಳನ್ನ ಬೆಳೆಸುತ್ತಾರೆ. ಪ್ರತಿ ವರ್ಷ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯು ನಮ್ಮ ಬದುಕನ್ನು ರೂಪಿಸಿದ ಗುರುಗಳಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸಲು ಸಿಗುವ ಅತ್ಯಂತ ಅಮೂಲ್ಯವಾದ ಅವಕಾಶವಾಗಿದೆ. ಇಂತಹ ದಿನ ಸಾಕಷ್ಟು ಶಿಕ್ಷಕರ ಸ್ಫೂರ್ತಿದಾಯಕ, ಸಾಹಸಮಯ ಕಥೆಗಳನ್ನು ನಾವು ಕೇಳುತ್ತೇವೆ, ನೋಡಿರುತ್ತೇವೆ, ಅದರ ಬಗ್ಗೆ ಓದಿರುತ್ತೇವೆ. ಇದಕ್ಕೆ ಧನಗರ್ವಾಡಾ ಗ್ರಾಮದ ಶಿಕ್ಷಕರೊಬ್ಬರ ಸಾಹಸಮಯ ಗಾಥೆ ತಾಜಾ ಉದಾಹರಣೆಯಾಗಿದೆ.
ಹೌದು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಗನಬಾವಡಾ ತಾಲೂಕಿನ ದಟ್ಟ ಕಾಡಿನ ನಡುವೆ ಒಂದು ಪುಟ್ಟ ಗ್ರಾಮ. ಹೆಸರು ಕವಲ್ಟೇಕ್ ಧನಗರ್ವಾಡಾ. ಗ್ರಾಮದಲ್ಲಿ ಕೇವಲ ಮೂರು ಮನೆಗಳು. ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳೂ ಇಲ್ಲ.
ಅಲ್ಲಿದ್ದ ಜಿಲ್ಲಾ ಪಂಚಾಯ್ತಿ ಶಾಲೆಗೆ ಶಿಕ್ಷಕರಾಗಿ ಹೋಗಲು ಯಾರೂ ಮುಂದೆ ಬರುತ್ತಿರಲಿಲ್ಲ. ಆದ್ರೆ ಜೀವನ ಮಿಥಾರಿ (ಶಿಕ್ಷಕ) ಅವರಿಗೆ ಆ ಶಾಲೆಯಲ್ಲಿರುವ ಮಕ್ಕಳ ಭವಿಷ್ಯ ಮುಖ್ಯವಾಗಿತ್ತು. ಮಕ್ಕಳು ಶಿಕ್ಷಣದಿಂದ ದೂರವಾಗಬಾರದು ಅನ್ನೋ ಕಾರಣಕ್ಕೆ, ಅವರು ಸ್ವಯಂಪ್ರೇರಣೆಯಿಂದ ಆ ಶಾಲೆಗೆ ಹೋಗಿ ಪಾಠ ಮಾಡುವ ಜವಾವ್ದಾರಿಯನ್ನ ಹೊತ್ತುಕೊಂಡರು.

ಪ್ರತಿದಿನ ತಮ್ಮ ‘ಕಾಲೆ’ ಗ್ರಾಮದ ಮನೆಯಿಂದ 28 ಕಿಲೋಮೀಟರ್ ಪ್ರಯಾಣ ಮಾಡಿ, ನಂತರ ವಾಹನವನ್ನು ಕಾಡಿನ ಪ್ರವೇಶದ ಬಳಿ ನಿಲ್ಲಿಸುತ್ತಾರೆ. ಅಲ್ಲಿಂದ ಮತ್ತೊಂದು 5 ಕಿಲೋಮೀಟರ್ ದಟ್ಟ ಕಾಡಿನ ದುರ್ಗಮ ದಾರಿಯಲ್ಲಿ ನಡೆದುಕೊಂಡೇ ಶಾಲೆಗೆ ತಲುಪುತ್ತಾರೆ. ಆ ದಾರಿ ಸಾಮಾನ್ಯ ದಾರಿಯಲ್ಲ, ಸಾಮಾನ್ಯರು ಅಲ್ಲಿ ಓಡಾಡೋದಕ್ಕೆ ನಡುಗುತ್ತಿದ್ದರು. ಏಕೆಂದ್ರ ಆ ದುರ್ಗಮ ಹಾದಿಯು ಇಳಿಜಾರು ಭೂಪ್ರದೇಶ (ಜಾರುವ ಮಣ್ಣು)ದಿಂದ ಕೂಡಿತ್ತು. ಇದರೊಂದಿಗೆ ಜಿಗಣೆಗಳು, ಹಾವುಗಳು, ಚಿರತೆಗಳು, ಕರಡಿಗಳು ಹಾಗೂ ಕಾಡೆಮ್ಮೆಗಳ ಭಯ ಯಾವಾಗಲೂ ಕಾಡುತ್ತಲೇ ಇರುತ್ತಿತ್ತು.
ಆದಾಗ್ಯೂ ಎದೆಗುಂದದ ಮಿಥಾರಿ ಅಪಾಯದಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿ ಕಾಡಿನಲ್ಲಿ ನಡೆದುಕೊಂಡು ಹೋಗ್ತಿದ್ರು. ಕಾಡುಪ್ರಾಣಿಗಳಿಗೆ ತಮ್ಮ ಇರುವಿಕೆಯನ್ನ ಗೊತ್ತುಪಡಿಸಲು ದಾರಿಯುದ್ದಕ್ಕೂ ಹಾಡುತ್ತಾ ಅಥವಾ ಶದ್ಧ ಮಾಡುತ್ತಾ ನಡೆದು ಸಾಗುತ್ತಿದ್ದರು. ಇಷ್ಟೆಲ್ಲ ಕಷ್ಟದ ನಡುವೆಯೂ ಅವರ ಗುರಿ ಒಂದೇ ಆಗಿತ್ತು, ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳುವುದು.
ಅಚ್ಚರಿಯ ವಿಷಯವೆಂದ್ರೆ ಆ ಶಾಲೆಯಲ್ಲಿ ಓದುತ್ತಿದ್ದದ್ದು ಕೇವಲ ಇಬ್ಬರು ಸಹೋದರಿಯರು. 8 ವರ್ಷದ ಸ್ವರಾ ಮತ್ತು 5 ವರ್ಷದ ರೇಷ್ಮಾ. ಅವರಿಗಾಗಿ ಪ್ರತಿದಿನ ಶಾಲೆಯ ಬಾಗಿಲು ತೆರೆಯುತ್ತಿದ್ದರು. ಒಂದು ಕಾಲದಲ್ಲಿ ಈ ಗ್ರಾಮದಲ್ಲಿ ಸುಮಾರು 70 ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಬದುಕು ಕಟ್ಟಿಕೊಳ್ಳಲು ಅವರೆಲ್ಲರೂ ಈ ಪ್ರದೇಶ ಬಿಟ್ಟು ಕೊಲ್ಹಾಪುರ ನಗರಕ್ಕೆ ತೆರಳಿದವು. ಉಳಿದ ಪುಟ್ಟ ಕುಟುಂಬಗಳ ಮಕ್ಕಳಿಗೆ ಶಿಕ್ಷಣದ ದಾರಿ ಕೂಡ ಕಷ್ಟಕರವಾಗಿತ್ತು. ಇದೆಲ್ಲವನ್ನು ಅರಿತಿತ್ತ ಶಿಕ್ಷಕ ಮಿಥಾರಿ ಅವರು ಇಂದಿಗೂ ಆ ಇಬ್ಬರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರಂತೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವರಾ ಮತ್ತು ರೇಶ್ಮಾ ಅವರ ತಂದೆ ದಗಡು ಬೋಡ್ಕೆ, ನಮ್ಮ ಗ್ರಾಮದಿಂದ ಮತ್ತೊಂದು ಶಾಲೆ ಸುಮಾರು 8 ಕಿಲೋಮೀಟರ್ ದೂರದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ಜೀವನ ಮಿಥಾರಿ ಸರ್ ಅವರಿಂದಲೇ ತಮ್ಮ ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ ಎಂದು ಭಾವುಕರಾಗಿದ್ದಾರೆ.
ಒಟ್ಟಿನಲ್ಲಿ ಪ್ರತಿದಿನ 28 ಕಿಲೋಮೀಟರ್ ಪ್ರಯಾಣ… ನಂತರ 5 ಕಿಲೋಮೀಟರ್ ಕಾಡಿನ ದಾರಿ… ಕಾಡುಪ್ರಾಣಿಗಳ ಭಯ… ಆದರೂ 13 ವರ್ಷಗಳಿಂದ ಈ ಶಿಕ್ಷಕರ ಹೆಜ್ಜೆಗಳು ನಿಂತಿಲ್ಲ. ಅವರ ಪಾಲಿಗೆ ಅದು ಕೇವಲ ಒಂದು ಶಾಲೆಗೆ ಹೋಗುವ ದಾರಿಯಲ್ಲ. ಅದು ಇಬ್ಬರು ಪುಟ್ಟ ಮಕ್ಕಳ ಭವಿಷ್ಯದ ಕಡೆಗೆ ಸಾಗುವ ದಾರಿ.

