ಮುಂಬೈ: ಭಾರತ ಪ್ರವಾಸದಲ್ಲಿರುವ ಬೆಲ್ಜಿಯಂ(Belgium) ಪ್ರಧಾನಿ ಬಾರ್ಟ್ ಡಿ ವೆವರ್(Bart De Wever) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಅಸ್ಥಿರ ವ್ಯಾಪಾರ ನೀತಿಗಳು ಮತ್ತು ಏಕಪಕ್ಷೀಯ ಸುಂಕ ನಿರ್ಧಾರಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದಾರೆ.
ಮುಂಬೈನಲ್ಲಿ ನಡೆದ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ (FTA) ಭಾರತ-ಬೆಲ್ಜಿಯಂ ಉನ್ನತ ಮಟ್ಟದ ಸಂವಾದದಲ್ಲಿ ಮಾತನಾಡಿದ ಡಿ ವೆವರ್, “ಇತ್ತೀಚಿನ ದಿನಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧಗಳನ್ನು ಹೇರಲು, ಮಾರುಕಟ್ಟೆಗಳನ್ನು ಮುಚ್ಚಲು ಮತ್ತು ಸುಂಕಗಳನ್ನು ವಿಧಿಸಲು ಹೆಚ್ಚು ಹೆಚ್ಚು ಧ್ವನಿಗಳು ಕೇಳಿಬರುತ್ತಿವೆ. ಕೆಲವರು ಇದನ್ನು ಸಂಪೂರ್ಣವಾಗಿ ಮನಸೋ ಇಚ್ಛೆ ಮಾಡುತ್ತಿದ್ದಾರೆ. ಅವರು ಸೋಮವಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ, ಬುಧವಾರ ಅದನ್ನು ಹಿಂಪಡೆಯುತ್ತಾರೆ ಮತ್ತು ಶನಿವಾರ ಮತ್ತೆ ಜಾರಿಗೆ ತರುತ್ತಾರೆ ಎಂದು ಹೇಳಿದರು.
ಈ ಮಾತಿಗೆ ಸಭಿಕರಿಂದ ಚಪ್ಪಾಳೆಗಳ ಸುರಿಮಳೆಯಾದಾಗ, ವೆವರ್ ಅವರು “ನಿಮ್ಮ ಚಪ್ಪಾಳೆಯೇ ಹೇಳುತ್ತಿದೆ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆ ತಿಳಿದಿದೆ” ಎಂದು ಚಟಾಕಿ ಹಾರಿಸಿದರು. ಇದನ್ನೂ ಓದಿ: ಸೌದಿಗೆ 47,245 ಕೋಟಿ ಮೌಲ್ಯದ ಬಾಂಬ್, ರಕ್ಷಣಾ ಸಲಕರಣೆ ಮಾರಾಟಕ್ಕೆ ಅಮೆರಿಕ ಒಪ್ಪಿಗೆ
#WATCH | Mumbai, Maharashtra: On US President Donald Trump, PM of Belgium, Bart De Wever, says, “…More and more voices today are calling for barriers to go up, for markets to be shut off, for tariffs to be imposed. Some do this entirely arbitrarily. They decide something on… pic.twitter.com/ngjSIqjtl9
— ANI (@ANI) September 5, 2026
ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಏಕಪಕ್ಷೀಯ ಹಾಗೂ ಅನಿಶ್ಚಿತ ಸುಂಕಗಳ ವಿರುದ್ಧ ರಚನಾತ್ಮಕ ರಕ್ಷಣಾ ಕವಚವಾಗಿ (structural buffer) ಕೆಲಸ ಮಾಡಲಿದೆ ಎಂದು ಡಿ ವೆವರ್ ಅಭಿಪ್ರಾಯಪಟ್ಟರು. ಅಲ್ಲದೆ ಈ ಒಪ್ಪಂದವು ಅಡೆತಡೆಗಳು ಮತ್ತು ಒತ್ತಡಗಳ ವಿರುದ್ಧ ಎರಡೂ ಆರ್ಥಿಕತೆಗಳನ್ನು ಸದೃಢಗೊಳಿಸಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಹೊಸ ವಿಶ್ವ ಭೂಪಟ ಅಂಗೀಕಾರ- ಆಫ್ರಿಕಾ ಗಾತ್ರ ವಿಸ್ತರಣೆ, ಅಮೆರಿಕ ಕೆಂಡಾಮಂಡಲ
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ಡಿ ವೆವರ್, ಮೋದಿ ಒಬ್ಬ ವಿವೇಕಿ ನಾಯಕ ಮತ್ತು ವಿಶ್ವದ ಅತ್ಯಂತ ಸ್ಪೂರ್ತಿದಾಯಕ ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿದರು.
ನಾವು ಗೊಂದಲಮಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ನಿಮ್ಮ ಮಾತು ನಿಜ. ಹಲವು ವಿಶ್ವ ನಾಯಕರ ಮಾತುಗಳನ್ನು ಕೇಳಿದಾಗ ನಿಮಗೆ ಭಯ, ಅಶಾಂತಿ ಅಥವಾ ಬೆದರಿಕೆಯ ಭಾವನೆ ಉಂಟಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದಾಗ, ‘ಅವರು ಹೇಳುವುದನ್ನು ನಾವು ಮಾಡಬೇಕು’ ಎಂದು ನಿಮಗನಿಸುತ್ತದೆ. ಅವರು ಅತ್ಯಂತ ವಿವೇಕಿ ನಾಯಕ. ದೆಹಲಿಯಲ್ಲಿ ಇರುವುದು ಗೌರವದ ಸಂಗತಿಯಾಗಿತ್ತು, ಆದರೆ ಮುಂಬೈನಲ್ಲಿ ಇರುವುದು ನನಗೆ ಮತ್ತಷ್ಟು ಗೌರವ ಮತ್ತು ಅಪಾರ ಸಂತೋಷ ತಂದಿದೆ ಎಂದು ಡಿ ವೆವರ್ ಹೇಳಿದರು.
