– ಮುಂದಿನ ಅಧಿವೇಶನದಲ್ಲಿ ಮರುಮಂಡನೆಗೆ ಸಿದ್ಧತೆ
ಬೆಂಗಳೂರು: ಸಾರ್ವಜನಿಕರು, ಪರಿಸರವಾದಿಗಳು ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ (ತಿದ್ದುಪಡಿ) ಮಸೂದೆಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
1975ರ ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆಗೆ ತಿದ್ದುಪಡಿ ತಂದು, ಉದ್ಯಾನವನಗಳ(Park) ಒಟ್ಟು ವಿಸ್ತೀರ್ಣದಲ್ಲಿ ಶೇ. 5ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿತ್ತು. ವಿಧಾನಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕಾರಗೊಂಡಿದ್ದ ಈ ಮಸೂದೆಗೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮಸೂದೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಸೂದೆಯನ್ನು ಹಿಂಪಡೆಯಲಾಗಿದೆ. ಇದನ್ನೂ ಓದಿ: 26 ಎಕ್ರೆ ಸರ್ಕಾರಿ ಜಮೀನಿಗೆ ಅಕ್ರಮ ಇ-ಖಾತೆ – ನಗರಸಭೆ ಅಧಿಕಾರಿಗಳ ವಿರುದ್ಧ ದೂರು ಹಿನ್ನಲೆ ತನಿಖಾ ತಂಡ ರಚನೆ
ಕ್ಯಾಬಿನೆಟ್ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಾವು ಯಾವುದೇ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಈ ಮಸೂದೆಯನ್ನು ವಾಪಸ್ ಪಡೆದಿಲ್ಲ. ಸಾರ್ವಜನಿಕರ ಹಿತದೃಷ್ಟಿ ಮತ್ತು ಅವರ ಮನವಿಗೆ ಸ್ಪಂದಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸದನದಲ್ಲಿ ಸಾರ್ವಜನಿಕ ವಿಷಯಗಳನ್ನು ಚರ್ಚಿಸಲು ಬಿಜೆಪಿ ಅವಕಾಶ ನೀಡಲಿಲ್ಲ. ಚರ್ಚೆಗೆ ಅವಕಾಶವಿದ್ದರೂ ಅವರು ಭಾಗವಹಿಸದೆ ಗದ್ದಲ ಸೃಷ್ಟಿಸಿದರು. ಮುಂದಿನ ಅಧಿವೇಶನದಲ್ಲಿ ಇದೇ ಮಸೂದೆಯನ್ನು ಯಾವುದೇ ‘ಕಾಮಾ ಅಥವಾ ಫುಲ್ಸ್ಟಾಪ್’ ಬದಲಾಯಿಸದೆ ಯಥಾವತ್ತಾಗಿ ಮರುಮಂಡಿಸಲಾಗುವುದು ಎಂದರು
ಉದ್ಯಾನದ ಜಾಗವನ್ನು ಕೇವಲ ಸರ್ಕಾರಿ ಮೂಲಭೂತ ಸೌಕರ್ಯಗಳಿಗೆ ಮಾತ್ರ ಬಳಸಲಾಗುವುದು. ಪಾರದರ್ಶಕ ಆಡಳಿತಕ್ಕೆ ಸರ್ಕಾರ ಬದ್ಧವಾಗಿದೆ. ಮಸೂದೆಯ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಿ, ಸಕಾರಾತ್ಮಕ ಸಲಹೆಗಳನ್ನು ನೀಡಿದರೆ ಸರ್ಕಾರ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲಿದೆ. ಸುಖಾಸುಮ್ಮನೆ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವಿಪಕ್ಷಗಳನ್ನು ಟೀಕಿಸಿದರು.
